ಹೊಸ ಡಿಸಿ ಕಚೇರಿ ನಿರ್ಮಾಣಕ್ಕೆ ಜಾಗ ಫಿಕ್ಸ್

KannadaprabhaNewsNetwork |  
Published : Feb 28, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ  ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಗೆ ತೋಟಗಾರಿಕೆ ಇಲಾಖೆ ಪ್ರದೇಶ ಬಿಟ್ಟುಕೊಡುವ ಸಂಬಂಧ ಸಚಿವ ಮಲ್ಲಿಕಾರ್ಜುನ್ ಹಾಗೂ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಹೊರವಲಯ ಕುಂಚಿಗನಹಾಳು ಕಣಿವೆ ಬಳಿ ಈ ಮೂದಲು ನಿರ್ಮಿಸಲಾದ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಬಿಟ್ಟು ಕೊಟ್ಟ ನಂತರ ಮುಂದಿನ ಕಟ್ಟಡ ನಿರ್ಮಾಣ ಎಲ್ಲಿ, ಹೇಗೆ ಎಂಬ ಪ್ರಶ್ನೆಗೆ ಅಂತೂ ಉತ್ತರಗಳು ಗೋಚರಿಸಿವೆ. ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ 6.30 ಎಕರೆ ಭೂಮಿಯನ್ನು ನೀಡಲು ತೋಟಗಾರಿಕೆ ಇಲಾಖೆ ಸಚಿವರು ಸಮ್ಮತಿ ಸೂಚಿಸಿದ್ದು ಕಟ್ಟಡ ನಿರ್ಮಾಣಕ್ಕೆ ಹೊಸ ಆಲೋಚನೆಗಳು ಗರಿಗೆದರಿವೆ.

ಕುಂಚಿಗನಾಳು ಹತ್ತಿರ ನಿರ್ಮಾಣ ಮಾಡಲಾಗಿರುವ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲು ಬೆಂಗಳೂರಿನಲ್ಲಿ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರು ಗುರುವಾರ ಜಂಟಿಯಾಗಿ ನಡೆಸಿದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕುಂಚಿಗನಾಳು ಹತ್ತಿರ ನಿರ್ಮಾಣ ಮಾಡಲಾಗಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿ ಚಿತ್ರದುರ್ಗ ನಗರದಿಂದ ದೂರವಿದ್ದು, ಕಚೇರಿ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುವ ಕಾರಣದಿಂದ, ಈ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಚಿತ್ರದುರ್ಗ ನಗರದಲ್ಲಿಯೇ ನೂತನವಾಗಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಮಾಡುವ ಸಂಬಂಧ ಕಳೆದ ಒಂದು ವರ್ಷದಿಂದ ಕಂದಾಯ ಇಲಾಖೆ ಸಚಿವರು, ವೈದ್ಯಕೀಯ ಇಲಾಖೆ ಸಚಿವರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರು ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ನಿರಂತರವಾಗಿ ಸಭೆ ನಡೆಸಿದ್ದರು. ಈ ಸಂಬಂಧ ಗುರುವಾರದಂದು ವಿಕಾಸಸೌಧದ ಕೊಠಡಿ ಸಂಖ್ಯೆ 342 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ತೋಟಗಾರಿಕೆ ಇಲಾಖೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಪ್ರಸ್ತುತ ಇರುವ ತೋಟಗಾರಿಕೆ ಇಲಾಖೆಯ 6.10 ಎಕರೆ ಮತ್ತು ಹಾಪ್‍ಕಾಮ್ಸ್ ವ್ಯಾಪ್ತಿಯ 0.20 ಎಕರೆ ಸೇರಿ ಒಟ್ಟು 6.30 ಎಕರೆ ಜಮೀನನ್ನು ನೂತನ ಜಿಲ್ಲಾಧಿಕಾರಿಗಳ ನಿರ್ಮಾಣಕ್ಕೆ ನೀಡಲು ತೀರ್ಮಾನಿಸಲಾಗಿದೆ. ತೋಟಗಾರಿಕೆ ಇಲಾಖೆಗೆ ಈ ಜಮೀನಿನ ಬದಲಾಗಿ ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಹೋಬಳಿ ಚಿಕ್ಕಪುರ ಗ್ರಾಮದ ರಿಸನಂ.96 ಮತ್ತು ರಿಸನಂ101 ರಲ್ಲಿ 20 ಎಕರೆ ಜಮೀನನ್ನು ಸರ್ಕಾರದಿಂದ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಈಗ ಇರುವ ತೋಟಗಾರಿಕೆ ಇಲಾಖೆ ಕಚೇರಿಗೆ, ಇದೇ ಜಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುವ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿಯೇ ಸ್ಥಳಾವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಯಿತು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ , ತೋಟಗಾರಿಕೆ ಇಲಾಖೆ ಕಾರ್ಯದರ್ಶಿಗಳು, ತೋಟಗಾರಿಕೆ ಇಲಾಖೆ ನಿರ್ದೇಶಕರು, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಚಿತ್ರದುರ್ಗ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತ ಮತ್ತಿತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ಸ್ಥಾನಮಾನ ಶಾಶ್ವತವಲ್ಲ: ಬಿ.ಜಿ.ಗೋವಿಂದಪ್ಪ
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಗೆ ಶಿಬಿರ ಸಹಕಾರಿ : ತಸ್ನೀಮ್