ಕನ್ನಡಪ್ರಭ ವಾರ್ತೆ ಸಕಲೇಶಪುರಕಾಡಾನೆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಡಾನೆ ಸಮಸ್ಯೆ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರು. ಬಿಡುಗಡೆ ಮಾಡಿದ್ದೆ. ನಂತರ ಆಡಳಿತ ನಡೆಸಿದವರು ಈ ಕುರಿತು ಸಮರ್ಪಕ ಗಮನಹರಿಸದ ಕಾರಣ ಸಮಸ್ಯೆ ಬಗೆಹರಿಯಲಿಲ್ಲ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಒಂದು ಸಾವು ಸಂಭವಿಸಿರುವುದು ಬೇಸರದ ಸಂಗತಿ. ಈ ಹಿನ್ನೆಲೆಯಲ್ಲಿ ಕೇಂದ್ರ ಅರಣ್ಯ ಸಚಿವರೊಂದಿಗೆ ಸಮಸ್ಯೆ ಪರಿಹಾರ ಕುರಿತು ಚರ್ಚೆ ನಡೆಸಿದ್ದೇನೆ ಎಂದರು.
2021ರಲ್ಲಿ ಅರಣ್ಯ ಇಲಾಖೆಯವರು ಕಾಡಾನೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದು, ಯಾವ ರೀತಿಯಲ್ಲಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂಬ ನಿಟ್ಟಿನಲ್ಲಿ ಆ ವರದಿಯನ್ನು ಪರಿಶೀಲಿಸುತ್ತಿದ್ದೇನೆ. ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕುವಂತಾಗಲು ಕಾಡಾನೆ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.ಈ ಭಾಗವು ಮುಳುಗಡೆ ಪ್ರದೇಶವಾಗಿದ್ದರೂ ಸೂಕ್ತ ಪರಿಹಾರ ನೀಡಲಾಗಿಲ್ಲ ಎಂದು ಮಾಜಿ ಶಾಸಕ ಎಚ್. ಎಂ. ವಿಶ್ವನಾಥ್ ಹೇಳುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಆ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪರಿಶೀಲಿಸಿ, ಪರಿಹಾರ ಸಿಗದವರಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಟಿವಿ ಮಾಧ್ಯಮಗಳಲ್ಲಿ ದಿನನಿತ್ಯ ಕೆಟ್ಟ ಸುದ್ದಿಗಳನ್ನೇ ಕೇಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ದುರ್ಘಟನೆಗಳು ನಡೆಯದಂತೆ ಗೋಪಾಲಸ್ವಾಮಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಜನರು ಹಿಂದಿನ ದಿನಗಳಂತೆ ಅನ್ಯೋನ್ಯತೆಯಿಂದ, ಸಂತೋಷದಿಂದ ಬದುಕಬೇಕು ಎಂದು ಹೇಳಿದರು.