ಕನಕಪುರ: ಕಾಂಗ್ರೆಸ್ ಪಕ್ಷದ ಅಧಿನಾಯಕಿ ದಿವಂಗತ ಇಂದಿರಾ ಗಾಂಧಿಯವರು ಆದೇಶಿಸಿದ್ದ ಉಳುವವನೇ ಭೂ ಒಡೆಯ ಕಾನೂನನ್ನು ಉಪಮುಖ್ಯಮಂತ್ರಿಗಳ ಬಲಗೈ ಬಂಟ ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ರವರೇ ಧಮನಗೊಳಿಸುತ್ತಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾತನೂರು ಹೋಬಳಿಯ ಅಚ್ಚಲು ಗ್ರಾಪಂ ವ್ಯಾಪ್ತಿಯ ಹೊಂಗಾಣಿದೊಡ್ಡಿ ಗ್ರಾಮದಲ್ಲಿ 150 ವರ್ಷಗಳಿಂದ ಗ್ರಾಮಸ್ಥರು ವಾಸಿಸುತ್ತಿರುವ ಮನೆ ಹಾಗೂ ಜಮೀನುಗಳನ್ನು ರಾಮನಗರ ಶಾಸಕ ತನ್ನ ಛೇಲಾಗಳನ್ನು ಬಳಸಿಕೊಂಡು ಹಣದ ಆಮಿಷ ತೋರಿಸಿ ಪಹಣಿಯಲ್ಲಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿದರು.
ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಯಡಮಾರನಹಳ್ಳಿ ಸರ್ವೆ ನಂ.341/1,267,272, 265 ಸರ್ವೆ ನಂ.ಗಳಿಗೆ ಸಂಬಂಧಿಸಿದಂತೆ ಭೂ ಮಾಲಿಕರು ಪೌತಿ ಖಾತೆಗೆ ದೊಡ್ಡ ಆಲಹಳ್ಳಿ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಹೊಂಗಾಣಿದೊಡ್ಡಿಯ ಜಮೀನು ವಾರಸುದಾರರ ಪರ ನಾಗರಾಜು ತಕರಾರು ಕೋರಿ ಅರ್ಜಿ ಸಲ್ಲಿಸಿದ್ದರು. ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಶಾಸಕ ಇಕ್ಫಾಲ್ ಹುಸೇನ್ ಪ್ರಭಾವಕ್ಕೆ ಮಣಿದು ಸಯ್ಯದ್ ಅಜೀಂ, ಸಯ್ಯದ್ ತಜುಂ, ರೇಷ್ಮ ಖಾನ್, ಸಮೀನಾ ಪಿರ್ದೋಸ್, ಸಯ್ಯದ್ ಮೊಹಿದ್ದಿನ್ ಹೆಸರಿಗೆ ಪೌತಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, 1961ರ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಕಲಂ 44(ಅ) ಪ್ರಕಾರ ಪಾರಂ 7 ಅರ್ಜಿ ಸಲ್ಲಿಸಿ ರೈತರು ನ್ಯಾಯಯುತವಾಗಿ ಭೂಮಿಯ ಒಡೆತನ ಪಡೆದಿದ್ದಾರೆ. ರೈತರ ಕೃಷಿ ಭೂಮಿಯನ್ನು ಶಾಸಕರ ಪ್ರಭಾವ ಬಳಸಿ ಹಕ್ಕುಗಳ ಹರಣ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ರಾಜ್ಯ ರೈತ ಸಂಘ ಪ್ರೊ. ನಂಜುಂಡಸ್ವಾಮಿ ಮಾದರಿಯಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ. ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುನಿಶಿವಣ್ಣ, ರವಿ, ಜೀವನ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಹೊಸದುರ್ಗ, ಗ್ರಾಮಸ್ಥರು ಹಾಜರಿದ್ದರು.