ಮಾಜಿ ಶಾಸಕ ಸುರೇಶ್‌ಗೌಡ ಅವಧಿಯಲ್ಲೇ ಭೂ ಅಕ್ರಮ: ರಾಜೇಶ್

KannadaprabhaNewsNetwork |  
Published : Oct 01, 2026, 01:45 AM IST
೩೦ಕೆಎಂಎನ್‌ಡಿ-೫ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಮಾತನಾಡಿದರು. | Kannada Prabha

ಸಾರಾಂಶ

ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿ ಬಗರ್‌ಹುಕುಂ ನಮೂನೆ-೫೩ರಡಿ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ೨೦೧೮-೨೦೨೩ರ ಅವಧಿಯಲ್ಲಿ ಶಾಸಕರಾಗಿದ್ದ ಸುರೇಶ್‌ಗೌಡ ಅವರ ಅವಧಿಯಲ್ಲಿ ಭೂ-ಕಂದಾಯ ನಿಯಮಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿ ಬಗರ್‌ಹುಕುಂ ನಮೂನೆ-೫೩ರಡಿ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ೨೦೧೮-೨೦೨೩ರ ಅವಧಿಯಲ್ಲಿ ಶಾಸಕರಾಗಿದ್ದ ಸುರೇಶ್‌ಗೌಡ ಅವರ ಅವಧಿಯಲ್ಲಿ ಭೂ-ಕಂದಾಯ ನಿಯಮಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಲಾಗಿದ್ದು, ಈ ಸಂಬಂಧ ಸಾರ್ವಜನಿಕ ದೂರಿನ ಮೇರೆಗೆ ಉಪ ವಿಭಾಗಾಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಲಾಗಿರುವ ೫೩ ಕಡತಗಳನ್ನು ವಜಾಗೊಳಿಸಿದ್ದಾರೆ. ಇದರಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಕೈವಾಡವಿಲ್ಲ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಸ್ಪಷ್ಟಪಡಿಸಿದರು.

ನಿಯಮಬಾಹಿರವಾಗಿ ಮಂಜೂರಾಗಿರುವ ಬಗ್ಗೆ ಉಪ ಲೋಕಾಯುಕ್ತರ ಭೇಟಿ ವೇಳೆ ಕಂಡುಬಂದಿದ್ದು, ಈ ಬಗ್ಗೆ ಉಪ ಲೋಕಾಯುಕ್ತರು ಅಕ್ರಮವಾಗಿ ಮಂಜೂರಾಗಿರುವವರ ಜಮೀನುಗಳನ್ನು ತಡೆಹಿಡಿಯುವಂತೆ ಉಪ ವಿಭಾಗಾಧಿಕಾರಿಗಳಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಅವರು ೬೯೪ ಅರ್ಜಿಗಳಲ್ಲಿ ಅಕ್ರಮವಾಗಿರುವ ೨೦೩ ಕಡತಗಳನ್ನು ಪರಿಶೀಲಿಸಿ ಕಾನೂನುಬಾಹಿರವೆಂದು ಕಂಡುಬಂದ ೫೩ ಕಡತಗಳನ್ನು ವಜಾಗೊಳಿಸಿದ್ದಾರೆ ಮತ್ತು ೧೫೦ ಕಡತಗಳನ್ನು ಪುನರ್ ಪರಿಶೀಲನೆಗೆ ಆದೇಶಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುರೇಶ್‌ಗೌಡ ಅವರು ಜಮೀನು ಮಂಜೂರು ಮಾಡುವ ಸಮಯದಲ್ಲಿ ಭೂ-ಕಂದಾಯ ನಿಯಮಗಳನ್ನು ಪಾಲಿಸದೆ ತನ್ನ ಅನುಯಾಯಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯೇ ತನಿಖೆ ಮಾಡಲಿ. ಆಗ ಸುರೇಶ್‌ಗೌಡರೇ ಜೈಲಿಗೆ ಹೋಗುತ್ತಾರೆ. ಅವರು ಮನೆ ಕಟ್ಟಿರುವುದೇ ಅಕ್ರಮ ಎಂದು ಆರೋಪಿಸಿದರು.

ಅರ್ಜಿಗಳನ್ನು ಹಾಕದವರಿಗೂ ಭೂಮಿ ಮಂಜೂರು ಮಾಡಿಕೊಡಲಾಗಿದೆ. ಜಮೀನು ಇದ್ದರೂ ಹೆಚ್ಚುವರಿ ಭೂಮಿಯನ್ನು ನೀಡಲಾಗಿದೆ. ಪುರಸಭೆ ಮತ್ತು ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಭೂಮಿಯನ್ನೂ ಹಂಚಿಕೆ ಮಾಡಿರುವುದಾಗಿ ಅಂದಿನ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ವರದಿಯಲ್ಲಿ ತಿಳಿಸಿದ್ದಾರೆ ಎಂದರು.

ಕಿಮ್ಮತ್ತಿಗೆ ಮೊದಲೇ ಸಾಗುವಳಿ ಚೀಟಿ ನೀಡಿರುವುದು, ಅರಣ್ಯ ಪ್ರದೇಶದ ಜಮೀನುಗಳಿಗೆ ಮಂಜೂರಾತಿ, ಒಂದೇ ಕುಟುಂಬದ ಇಬ್ಬರು ಸದಸ್ಯರಿಗೆ ಜಮೀನು ಮಂಜೂರು ಮಾಡಿರುವುದು ಸೇರಿದಂತೆ ಹಲವು ಲೋಪಗಳು ನಡೆದಿವೆ. ಅರ್ಜಿ ಸಂಖ್ಯೆ ೨೮೪೨ರ ಮಹಾಲಿಂಗೇಗೌಡ ಬಿನ್ ಬೆಟ್ಟೇಗೌಡ, ಕೆಲಗೆರೆ ಅವರ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿ ವರ್ಗಾವಣೆಯಾದ ನಂತರವೂ ಮಂಜೂರು ಮಾಡಲಾಗಿದೆ ಎಂದರು.

ಮಾಜಿ ಶಾಸಕ ಸುರೇಶಗೌಡ ಅವರ ಅವಧಿಯಲ್ಲಿ ಮಂಜೂರಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವುದರಿಂದ, ಅಂದಿನ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು. ಅರ್ಹ ಬಡ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಬಗರ್ ಹುಕುಂ ಸಮಿತಿಯ ಮಾಜಿ ಸದಸ್ಯ ತಿಮ್ಮರಾಯಿಗೌಡ ಮಾತನಾಡಿ, ‘ಬಗರ್‌ಹುಕುಂ ಸಮಿತಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಕಾನೂನಿನ ವ್ಯಾಪ್ತಿಗೆ ಒಳಪಡುವ ಅರ್ಹ ಫಲಾನುಭವಿಗಳಿಗೆ ಮಾತ್ರ ಜಮೀನು ಮಂಜೂರು ಮಾಡಿದ್ದರೆ ಇಂತಹ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಅರಣ್ಯ ಭೂಮಿಯನ್ನು ಮಂಜೂರು ಮಾಡಬಾರದು ಎಂಬ ನಿಯಮವಿದ್ದರೂ, ಅಂತಹ ಪ್ರದೇಶಗಳಲ್ಲಿನ ಜಮೀನುಗಳಿಗೆ ಮಂಜೂರಾತಿ ನೀಡಲಾಗಿದೆ ಎಂಬ ಆರೋಪಗಳಿವೆ ಎಂದರು.

ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ನಡೆಸಿದ ಪರಿಶೀಲನೆಯ ಸಂದರ್ಭದಲ್ಲಿ, ಕೆಲವು ಮಂಜೂರಾತಿ ಕಡತಗಳಲ್ಲಿ ಅರ್ಜಿಗಳೇ ಇಲ್ಲದಿರುವುದು, ಕೆಲವು ಜಮೀನುಗಳು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವುದು, ಇನ್ನೂ ಕೆಲವು ಅರಣ್ಯ ಪ್ರದೇಶದಲ್ಲಿರುವುದೂ ಗಮನಕ್ಕೆ ಬಂದಿದೆ. ಒಟ್ಟು ೬೯೪ ಅರ್ಜಿಗಳಲ್ಲಿ ಇಂತಹ ವ್ಯತ್ಯಾಸಗಳು ಕಂಡುಬಂದಿವೆ ಎಂದರು.

ಅರ್ಹ ಫಲಾನುಭವಿಗಳ ಜಮೀನಿನ ಅರ್ಹತೆಯನ್ನು ಪರಿಶೀಲಿಸಿ, ಕಾನೂನು ಮತ್ತು ಸರ್ಕಾರದ ನಿಯಮಗಳ ವ್ಯಾಪ್ತಿಯಲ್ಲಿ ಎಷ್ಟು ಜಮೀನು ಮಂಜೂರು ಮಾಡಲು ಅವಕಾಶವಿದೆಯೋ ಅಷ್ಟನ್ನು ಮಾತ್ರ ಮಂಜೂರು ಮಾಡಿದ್ದರೆ ಕಡತಗಳು ವಜಾಗೊಳ್ಳುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಶರತ್, ಪ್ರವೀಣ್ ಕುಮಾರ್, ಕೃಷ್ಣೇಗೌಡ, ವಿಜಯ್ ಕುಮಾರ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ರಾಜಕೀಯದಿಂದ ದೂರ ಉಳಿಯಬೇಕು: ಪಿ.ಎಂ.ನರೇಂದ್ರಸ್ವಾಮಿ
ಅಂಕಗಳು ಕಲಿಕೆಯ ಒಂದು ಭಾಗವೇ ಹೊರತು ಅದೇ ಶಿಕ್ಷಣದ ಮೂಲ ಗುರಿಯಲ್ಲ