ಭೂಮಿ ತುಂಡಾಗುತ್ತಿದೆ, ಮಣ್ಣಿನ ಫಲವತ್ತತೆ ಕುಸಿಯುತ್ತಿದೆ

KannadaprabhaNewsNetwork |  
Published : Sep 25, 2026, 03:00 AM IST
ಕಲಾದಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕಲಾದಗಿಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೋಟ್ಯಂತರ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿವೆ. ಆದರೆ ಭೂಮಿಯ ವಿಭಜನೆಯಿಂದ ಕೃಷಿ ಜಮೀನುಗಳು ಚಿಕ್ಕಚಿಕ್ಕ ತುಂಡುಗಳಾಗುತ್ತಿರುವುದು ಹಾಗೂ ಕೃಷಿ ಕ್ಷೇತ್ರ ಎದುರಿಸುತ್ತಿರುವ ಹಲವು ಸವಾಲುಗಳು ಆತಂಕಕಾರಿ ಬೆಳವಣಿಗೆಗಳಾಗಿವೆ ಎಂದು ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೋಟ್ಯಂತರ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿವೆ. ಆದರೆ ಭೂಮಿಯ ವಿಭಜನೆಯಿಂದ ಕೃಷಿ ಜಮೀನುಗಳು ಚಿಕ್ಕಚಿಕ್ಕ ತುಂಡುಗಳಾಗುತ್ತಿರುವುದು ಹಾಗೂ ಕೃಷಿ ಕ್ಷೇತ್ರ ಎದುರಿಸುತ್ತಿರುವ ಹಲವು ಸವಾಲುಗಳು ಆತಂಕಕಾರಿ ಬೆಳವಣಿಗೆಗಳಾಗಿವೆ ಎಂದು ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ನಂದಿ ಹಾಗೂ ಜೋಡೆತ್ತುಗಳ ಮೂರ್ತಿಗಳನ್ನು ಉದ್ಘಾಟಿಸಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ರೈತರು ಯಾವಾಗಲೂ ಕೊಡುವವರಾಗಬೇಕು, ಬೇಡುವವರಾಗಬಾರದು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಸುಮಾರು ಶೇ.40ರಷ್ಟು ಪ್ರದೇಶ ನೀರಾವರಿ ಹೊಂದಿದ್ದರೆ, ಉಳಿದ ಬಹುಭಾಗ ಒಣ ಬೇಸಾಯವನ್ನು ಅವಲಂಬಿಸಿದೆ. ಹಿಂದೆ 20ರಿಂದ 30 ಅಡಿ ಆಳದಲ್ಲಿ ಬಾವಿ ಕೊರೆದರೆ ನೀರು ಸಿಗುತ್ತಿತ್ತು. ಆದರೆ ಇಂದು 200, 400, 800, 1200 ಅಡಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಶಾರ್ಟ್‌ಕಟ್‌ ಮಾರ್ಗದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಪರಿಶ್ರಮಪಟ್ಟರೆ ಭೂಮಿ ಕೈಹಿಡಿಯುತ್ತದೆ ಎಂದು ಶ್ರೀಗಳು ಹೇಳಿದರು. ಸಮಾಜಕ್ಕೆ ನಾವು ನೀಡುವ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ಪರಿಶುದ್ಧತೆಯಿಂದ ಕಾರ್ಯನಿರ್ವಹಿಸಿದರೆ ಯಾವುದೇ ಕ್ಷೇತ್ರದಲ್ಲೂ ಬೆಳೆಯಲು ಸಾಧ್ಯ ಎಂದರು.

ಚಿಕ್ಕಾಲಗುಂಡಿಯ ಶಿವಶರಣಾನಂದ ಮಹಾಸ್ವಾಮಿಗಳು ಮಾತನಾಡಿ, ಮಾನವನ ದೇಹ ಸುಗಮವಾಗಿ ಕಾರ್ಯನಿರ್ವಹಿಸಲು ಎಲ್ಲ ಅಂಗಗಳ ಸಹಕಾರ ಅಗತ್ಯವಿರುವಂತೆ, ಸಮಾಜದ ಅಭಿವೃದ್ಧಿಗೂ ಎಲ್ಲ ಕ್ಷೇತ್ರಗಳ ಸಹಕಾರ ಅವಶ್ಯಕವಾಗಿದೆ. ರೈತರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಸಹಕಾರಿ ಸಂಘಗಳು ರೈತರಿಗೆ ಇನ್ನಷ್ಟು ಸಾಲ ಸೌಲಭ್ಯ ಹಾಗೂ ಸೇವೆಗಳನ್ನು ಒದಗಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಜಯಕುಮಾರ್ ಸರನಾಯಕ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಂದಿ ಮತ್ತು ಜೋಡೆತ್ತುಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ಅರ್ಥಪೂರ್ಣವಾಗಿದೆ. ಗ್ರಾಮವೊಂದು ಅಭಿವೃದ್ಧಿ ಹೊಂದಬೇಕಾದರೆ ಸಹಕಾರಿ ಸಂಘ ಹಾಗೂ ಗ್ರಾಮ ಪಂಚಾಯಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಆಗ ರೈತರು ಹಾಗೂ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಲಕ್ಷ್ಮಣ ಆರ್. ನಿರಾಣಿ ಮಾತನಾಡಿದರು.

ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಪುಂಡಿಕಟಗಿ, ಉಪಾಧ್ಯಕ್ಷ ಮಲ್ಲಪ್ಪ ಪರಚನಗೌಡರ, ಮಂಜುನಾಥ ಗಾಣಿಗೇರ, ರಾಜೇಶ ಕಾಮನ್ನವರ್, ಮಂಜುನಾಥ ಬಿಲಕೇರಿ, ಬಸಪ್ಪ ಶಿವನಿಚ್ಚಿ, ಆನಂದ ಅರಕೇರಿ, ಮಹಾದೇವಿ ಶೆಟ್ಟೆಪ್ಪನವರ್, ಬಸವ್ವ ಶಿವನಿಚ್ಚಿ, ಸದಾಶಿವ ಸಣ್ಣಕ್ಕಿ, ಮಳಿಯಪ್ಪ ಆಡಗಲ್, ಮೆಹಬೂಬ ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನಲ್ಲಿರುವ ಉಪಯುಕ್ತ ಬ್ಯಾಕ್ಟೀರಿಯಾಗಳು ನಾಶವಾಗುತ್ತಿದ್ದು, ಭೂಮಿಯ ನೀರು ಇಂಗಿಸಿಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತಿದೆ. ಭೂಮಿಯ ಸಂರಕ್ಷಣೆ ಹಾಗೂ ಮಣ್ಣಿನ ಫಲವತ್ತತೆ ಕಾಪಾಡುವುದು ಇಂದಿನ ಅಗತ್ಯವಾಗಿದೆ. ವಿಜ್ಞಾನವೂ ಈಗ ಭೂಮಿಯ ಹದಗೆಡುವಿಕೆ ಹಾಗೂ ಆಹಾರ ಸುರಕ್ಷತೆಯ ಮೇಲಿನ ಆತಂಕದ ಬಗ್ಗೆ ಎಚ್ಚರಿಸುತ್ತಿದೆ. ಆದ್ದರಿಂದ ರೈತರು ವಿಷಮುಕ್ತ ಹಾಗೂ ನೈಸರ್ಗಿಕ ಕೃಷಿಯತ್ತ ಸಾಗಬೇಕು.

- ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಕನ್ನೇರಿ ಮಠ, ಕೋಲ್ಲಾಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಿವು ಎಂಬುದು ಗ್ರಹಿಕೆ, ಭಾವನೆಯ ನಂಬಿಕೆ
ಸಾಂಪ್ರದಾಯಿಕ ಬೇರುಗಳಿಲ್ಲದೆ ಆರೋಗ್ಯಕರ ರಾಷ್ಟ್ರ ನಿರ್ಮಾಣ ಅಸಾಧ್ಯ