೨೫ ವರ್ಷದಿಂದ ಹುತಾತ್ಮ ಯೋಧನ ಕುಟುಂಬಕ್ಕೆ ಜಮೀನು ಕೊಟ್ಟಿಲ್ಲ

KannadaprabhaNewsNetwork |  
Published : May 30, 2025, 12:06 AM IST
೨೯ಕೆಎಂಎನ್‌ಡಿ-೧ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಸಾರ್ವಜನಿಕ ದೂರುಗಳ ಬಗ್ಗೆ ವಿಚಾರಣೆ ನಡೆಸಿದರು. | Kannada Prabha

ಸಾರಾಂಶ

೨೦೦೦ನೇ ಇಸವಿಯಲ್ಲಿ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಬಲಿಯಾದ ಮಂಡ್ಯ ಜಿಲ್ಲೆಯ ಎಲ್.ಬಿ.ಸುಂದ್ರೇಶ್ ಕುಟುಂಬಕ್ಕೆ ಇದುವರೆಗೂ ಜಮೀನು ನೀಡದಿರುವುದಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಕೆ.ಆರ್.ಪೇಟೆ ತಹಸೀಲ್ದಾರ್ ಅವರನ್ನು ತರಾಟೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

೨೦೦೦ನೇ ಇಸವಿಯಲ್ಲಿ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಬಲಿಯಾದ ಜಿಲ್ಲೆಯ ಎಲ್.ಬಿ.ಸುಂದ್ರೇಶ್ ಕುಟುಂಬಕ್ಕೆ ಇದುವರೆಗೂ ಜಮೀನು ನೀಡದಿರುವುದಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಕೆ.ಆರ್.ಪೇಟೆ ತಹಸೀಲ್ದಾರ್ ಅವರನ್ನು ತರಾಟೆ ತೆಗೆದುಕೊಂಡರು.

ಗುರುವಾರ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಕುಂದುಕೊರತೆ ವಿಚಾರಣೆ ವೇಳೆ ಎಲ್.ಬಿ.ಸುಂದ್ರೇಶ್ ಪತ್ನಿ ಬಿ.ಸಿ.ಗೀತಾ ಅವರು ಮೃತ ಸೈನಿಕನ ಕುಟುಂಬಕ್ಕೆ ಜಮೀನು ನೀಡದಿರುವ ಬಗ್ಗೆ ದೂರು ನೀಡಿದ್ದರು.

ವಿಷಯ ತಿಳಿದು ಕೆ.ಆರ್.ಪೇಟೆ ಗ್ರೇಡ್-೨ ತಹಸೀಲ್ದಾರ್ ಲೋಕೇಶ್ ವಿರುದ್ಧ ಗರಂ ಆದ ಉಪ ಲೋಕಾಯುಕ್ತರು, ಯೋಧ ಸತ್ತು ೨೫ ವರ್ಷವಾದರೂ ಆತನ ಕುಟುಂಬಕ್ಕೆ ಎಂಟು ಎಕರೆ ಜಮೀನು ನೀಡಿಲ್ಲವೆಂದರೆ ಆಡಳಿತ ವರ್ಗಕ್ಕೇ ನಾಚಿಕೆಗೇಡು. ಸೈನಿಕರು ಗಡಿಯಲ್ಲಿ ನಿಂತು ದೇಶ ಕಾಯುವುದರ ಜೊತೆಗೆ ನಮ್ಮನ್ನೂ ರಕ್ಷಣೆ ಮಾಡುತ್ತಿದ್ದಾರೆ. ಅಂತಹದೊಂದು ಕನಿಷ್ಠ ಮಾನವೀಯತೆಯೂ ಇಲ್ವಲ್ರೀ ನಿಮಗೆ. ೨೫ ವರ್ಷದಿಂದ ಜಮೀನು ಕೇಳಿಕೊಂಡು ನಿಮ್ಮ ಬಳಿಗೆ ಅಲೆಯಬೇಕಾ. ಇದಕ್ಕಿಂತ ದರಿದ್ರ ವ್ಯವಸ್ಥೆ ಇನ್ನೊಂದಿಲ್ಲ ಎಂದು ಕಟುವಾಗಿ ಹೇಳಿದರು.

ಇದಕ್ಕೆ ಉತ್ತರಿಸಿದ ಲೋಕೇಶ್ ಕೆ.ಆರ್.ಪೇಟೆ ತಾಲೂಕಿನಲ್ಲಿ ಅರಣ್ಯ ಪ್ರದೇಶವಿದೆ. ಸರ್ಕಾರಿ ಗೋಮಾಳ ಎಲ್ಲಿಯೂ ಖಾಲಿ ಇರುವುದಿಲ್ಲ. ಕೆ.ಆರ್.ಪೇಟೆ ತಾಲೂಕು ಅಕ್ಕಿ ಹೆಬ್ಬಾಳು ಹೋಬಳಿ ಶ್ರವಣನಹಳ್ಳಿ ಗ್ರಾಮದ ಸರ್ವೇ ನಂ.೪೮ರಲ್ಲಿನ ಸರ್ಕಾರಿ ಗೋಮಾಳದಲ್ಲಿ ೮ ಎಕರೆ ಜಮೀನನ್ನು ಕೋರಿದ್ದರು. ಈ ಗೋಮಾಳದಲ್ಲಿ ಆರ್‌ಟಿಸಿಯಂತೆ ೧೮೬.೨೭ ಎಕರೆ ಗೋಮಾಳವಿದ್ದು ಈ ಪ್ರದೇಶದಲ್ಲಿ ಜಾನುವಾರುಗಳ ಮೇವಿಗಾಗಿ ೧೩೦.೦೪ ಎಕರೆ ಜಾಗವನ್ನು ಮೀಸಲಿಟ್ಟಿದ್ದು, ಉಳಿಕೆ ೫೬.೨೩ ಎಕರೆ ಜಾಗವನ್ನು ಅಕ್ರಮ-ಸಕ್ರಮ ಕೋರಿ ಸಾರ್ವಜನಿಕರು ಅರ್ಜಿ ಸಲ್ಲಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಹಾಗಾದರೆ ಹುತಾತ್ಮ ಸೈನಿಕನ ಕುಟುಂಬಕ್ಕೆ ಜಮೀನು ಕೊಡುವುದಿಲ್ಲವೋ ಎಂದು ಉಪ ಲೋಕಾಯುಕ್ತರು ಕೇಳಿದಾಗ, ಅವರು ಖಾಲಿ ಇರುವ ಗೋಮಾಳ ಜಾಗ ತೋರಿಸಿದರೆ ಮಂಜೂರು ಮಾಡಿಸಿಕೊಡುತ್ತೇವೆ ಎಂದಾಗ ಮತ್ತೆ ಕೋಪಗೊಂಡ ಬಿ.ವೀರಪ್ಪ, ಅವರೇ ಹುಡುಕಿಕೊಡುವುದಾದರೆ ನೀವ್ಯಾಕ್ರೀ ಇರೋದು. ಸರ್ಕಾರಿ ಗೋಮಾಳ ಎಲ್ಲಿದೇಂತ ಅವರಿಗೇನ್ರೀ ಗೊತ್ತು. ನಿಮ್ಮ ತಾಲೂಕಿನಲ್ಲಿ ಸಿಗಲಿಲ್ಲವೆಂದರೆ ಪಕ್ಕದ ತಾಲೂಕಿನಲ್ಲಿ ದೊರಕಿಸಿಕೊಡಿ. ಇಪ್ಪತ್ತೈದು ವರ್ಷದಿಂದ ಆ ಕುಟುಂಬದವರನ್ನ ಅಲೆದಾಡಿಸುತ್ತಿದ್ದೀರಲ್ಲ ನಿಮಗೆ ಮಾನ-ಮರ್ಯಾದೆ ಇದೆಯಾ. ಸೈನಿಕರು ದೇಶದ ರಕ್ಷಣೆಗಾಗಿ ಗಡಿಯಲ್ಲಿ ರಕ್ತ ಹರಿಸುತ್ತಿದ್ದರೆ, ನೀವು ಅವರ ಕುಟುಂಬದವರ ರಕ್ತವನ್ನೇ ಹೀರುತ್ತಿದ್ದೀರಿ. ಇದರಿಂದ ನಿಮಗೆ ಒಳ್ಳೆಯದಾಗೋಲ್ರೀ ಎಂದು ಅಧಿಕಾರಿ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.

ಜೀವನಕ್ಕೆ ಏನು ಮಾಡುತ್ತಿದ್ದೀರಾ ಎಂದು ಹುತಾತ್ಮ ಯೋಧನ ಪತ್ನಿ ಬಿ.ಸಿ.ಗೀತಾ ಅವರನ್ನು ಉಪಲೋಕಾಯುಕ್ತರು ಕೇಳಿದಾಗ, ೨೦೦೦ರಲ್ಲಿ ಪತಿ ಸತ್ತಾಗ ೩೨೦೦ ರು. ಪಿಂಚಣಿ ಬರುತ್ತಿತ್ತು. ಈಗ ೨೨ ಸಾವಿರ ರು. ಆಗಿದೆ. ಅದೊಂದೇ ನಮ್ಮ ಜೀವನಾಧಾರವಾಗಿದೆ. ಮಗಳು ಎಂಜಿನಿಯರ್ ಓದಿದ್ದು ಮನೆಯಲ್ಲೇ ಇದ್ದಾಳೆ. ಕುಟುಂಬ ನಡೆಸುವುದು ಕಷ್ಟವಾಗಿದೆ. ನಮಗೆ ಜಮೀನು ದೊರಕಿಸಿಕೊಟ್ಟರೆ ಬದುಕಿಗೊಂದು ದಾರಿಯಾಗುತ್ತದೆ ಎಂದಾಗ, ಜಮೀನು ಪಡೆದುಕೊಳ್ಳುವುದು ನಿಮ್ಮ ಕಾನೂನುಬದ್ಧ ಹಕ್ಕು. ಅದ್ಯಾಕೆ ನಿಮಗೆ ಜಮೀನು ಕೊಡುವುದಿಲ್ಲವೋ ನಾನು ನೋಡುತ್ತೇನೆ. ಜಿಲ್ಲಾಧಿಕಾರಿ ಬರುವವರೆಗೆ ಕಾಯಿರಿ ಎಂದು ಕೂರಿಸಿದರು.ನಮ್ಮ ಯಜಮಾನರು ಹುತಾತ್ಮರಾದ ನಂತರದಲ್ಲಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬಗಳಿಗೆಲ್ಲಾ ಜಮೀನನ್ನು ಕೊಡಲಾಗಿದೆ. ನಾನು ೨೫ ವರ್ಷದಿಂದ ಸುತ್ತುತ್ತಿದ್ದರೂ ಇನ್ನೂ ಮಂಜೂರು ಮಾಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಮ್ಮ ತಾಲೂಕಿನಲ್ಲಿ ಗೋಮಾಳವಿಲ್ಲ. ಗೋಮಾಳ ಇರುವ ಜಾಗ ಹುಡುಕಿಕೊಂಡು ಬನ್ನಿ ಅಂತಾರೆ. ಗೋಮಾಳ ಜಾಗ ತೋರಿಸಿದರೆ ಅಲ್ಲಿ ಅರಣ್ಯವಿದೆ, ಸರ್ಕಾರಿ ಬೀಳು ಇರುವ ಜಾಗವನ್ನು ಹುಡುಕಿ ಎನ್ನುತ್ತಾರೆ. ಅದನ್ನೆಲ್ಲಾ ನಾವು ಎಲ್ಲಿ ಅಂತ ಹುಡುಕೋಣ, ಸುಮ್ಮನೆ ಅಲೆದಾಡಿಸುತ್ತಲೇ ಇದ್ದಾರೆ.

- ಬಿ.ಸಿ.ಗೀತಾ, ಹುತಾತ್ಮ ಯೋಧ ಸುಂದ್ರೇಶ್ ಪತ್ನಿ

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ