ಭೂ ಸುರಕ್ಷಾ ಆನ್‌ಲೈನ್ನಲ್ಲೇ ಭೂ ದಾಖಲೆ ಲಭ್ಯ : ಸಚಿವ ಕೃಷ್ಣ ಬೈರೇಗೌಡ

KannadaprabhaNewsNetwork |  
Published : Jul 03, 2025, 11:52 PM ISTUpdated : Jul 04, 2025, 07:54 AM IST
Krishna Byre Gowda

ಸಾರಾಂಶ

ಆನ್‌ಲೈನ್‌ ಮೂಲಕವೇ ಭೂ ದಾಖಲೆ ನೀಡುವುದಕ್ಕೆ ಜಾರಿಗೊಳಿಸಲಾಗುತ್ತಿರುವ ಭೂ ಸುರಕ್ಷಾ ಯೋಜನೆ ಅಡಿ ಕಂದಾಯ ಇಲಾಖೆಯ 100 ಕೋಟಿ ಪುಟಗಳ ದಾಖಲೆಗಳನ್ನು ಡಿಜಿಟಲೀಕರಿಸಲಾಗುತ್ತಿದ್ದು, ಈಗಾಗಲೇ 29.8 ಕೋಟಿ ಮೂಲ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲೀಕರಿಸಲಾಗಿದೆ 

 ಬೆಂಗಳೂರು :  ಆನ್‌ಲೈನ್‌ ಮೂಲಕವೇ ಭೂ ದಾಖಲೆ ನೀಡುವುದಕ್ಕೆ ಜಾರಿಗೊಳಿಸಲಾಗುತ್ತಿರುವ ಭೂ ಸುರಕ್ಷಾ ಯೋಜನೆ ಅಡಿ ಕಂದಾಯ ಇಲಾಖೆಯ 100 ಕೋಟಿ ಪುಟಗಳ ದಾಖಲೆಗಳನ್ನು ಡಿಜಿಟಲೀಕರಿಸಲಾಗುತ್ತಿದ್ದು, ಈಗಾಗಲೇ 29.8 ಕೋಟಿ ಮೂಲ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲೀಕರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಗುರುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂದಾಯ ಇಲಾಖೆಯ ಎ ಮತ್ತು ಬಿ ಪ್ರವರ್ಗದ ದಾಖಲೆಗಳನ್ನು ಆನ್‌ಲೈನ್‌ ಮೂಲಕವೇ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅದಕ್ಕಾಗಿ ಭೂ ಸುರಕ್ಷಾ ಯೋಜನೆ ಅಡಿ ಇಲಾಖೆಯಲ್ಲಿನ ಎಲ್ಲ ಕಚೇರಿಗಳಲ್ಲಿರುವ 100 ಕೋಟಿ ಪುಟಗಳ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಈವರೆಗೆ 29.8 ಕೋಟಿ ಪುಟಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಈ ವರ್ಷಾಂತ್ಯಕ್ಕೆ ತಹಸೀಲ್ದಾರ್‌ ಕಚೇರಿಗಳು ಸೇರಿ ಇಲಾಖೆಯ ಎಲ್ಲ ಮೂಲ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗುತ್ತದೆ. ಇದರಿಂದ ಭೂ ಮಾಲೀಕರು ಭೂ ದಾಖಲೆಗಾಗಿ ಸರ್ಕಾರಿ ಕಚೇರಿ ಅಲೆಯುವ ತಾಪತ್ರಯದಿಂದ ಮುಕ್ತಗೊಳಿಸಲಾಗುತ್ತಿದೆ. ರೈತರು ಆನ್‌ಲೈನ್‌ ಮೂಲಕವೇ ದಾಖಲೆಗೆ ಅರ್ಜಿ ಸಲ್ಲಿಸಿದರೆ, ಪ್ರಮಾಣೀಕರಿಸಿದ ದಾಖಲೆಗಳನ್ನು ಆನ್‌ಲೈನ್‌ ಮೂಲಕವೇ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದರು.

ಈಗಾಗಲೇ ಪ್ರಾಯೋಗಿಕವಾಗಿ ಆನ್‌ಲೈನ್‌ ಮೂಲಕ ಭೂ ದಾಖಲೆ ನೀಡುವ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಕಳೆದೊಂದು ತಿಂಗಳಲ್ಲಿ 16,849 ಮಂದಿ ಆನ್‌ಲೈನ್‌ ಮೂಲಕ ಭೂ ದಾಖಲೆಗಳಿಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ 69,375 ಪುಟಗಳ ಪ್ರಮಾಣೀಕರಿಸಿದ ದಾಖಲೆಗಳನ್ನು ಆನ್‌ಲೈನ್‌ ಮೂಲಕವೇ ಒದಗಿಸಲಾಗಿದೆ. ಎಲ್ಲ ದಾಖಲೆಗಳು ಡಿಜಿಟಲೀಕರಣಗೊಳಿಸಿದ ನಂತರ ಪೂರ್ಣಪ್ರಮಾಣದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.

ಭೂ ಗ್ಯಾರಂಟಿ ಅಭಿಯಾನಕ್ಕೆ ವೇಗ:

ರಾಜ್ಯ ಸರ್ಕಾರದ ಭೂ ಗ್ಯಾರಂಟಿ ಅಭಿಯಾನಕ್ಕೆ ವೇಗ ನೀಡಲಾಗಿದ್ದು, 7 ತಿಂಗಳಲ್ಲಿ 1.04 ಲಕ್ಷ ಭೂಮಿಗೆ ಪೋಡಿ ಮಾಡಿಕೊಡಲು, ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ 5,801 ಪ್ರಕರಣಗಳಲ್ಲಿ ಮಾತ್ರ ರೈತರಿಗೆ ಪೋಡಿ ದುರಸ್ತಿ ಮಾಡಿಕೊಡಲಾಗಿತ್ತು. ನಮ್ಮ ಸರ್ಕಾರ ಬಂದ ನಂತರ ಭೂ ಗ್ಯಾರಂಟಿ ಅಭಿಯಾನದ ಅಡಿ ಕಳೆದ ಡಿಸೆಂಬರ್‌ನಿಂದ ನನ್ನ ಭೂಮಿ ಹೆಸರಿನಲ್ಲಿ ಪೋಡಿ ಅಭಿಯಾನ ಕೈಗೊಳ್ಳಲಾಗಿದೆ. ಅದರಲ್ಲಿ 1.04 ಲಕ್ಷ ಜಮೀನುಗಳನ್ನು ಅಳತೆಗೆ ತೆಗೆದುಕೊಂಡಿದ್ದು, ಆ ಪೈಕಿ ಶೇ.20ರಷ್ಟು ಭೂಮಿ ಅಳತೆ ಪೂರ್ಣಗೊಂಡಿದೆ. ಉಳಿದ ಭೂಮಿಗಳಿಗೆ 6 ತಿಂಗಳಲ್ಲಿ ಸರ್ವೇ ಪೂರ್ಣಗೊಳಿಸಿ, ಪೋಡಿ ಮಾಡಿಕೊಡಲಾಗುವುದು. ಉಳಿದಂತೆ 50ರಿಂದ 70 ಸಾವಿರ ಪೋಡಿ ಪ್ರಕರಣಗಳು ಬಾಕಿ ಉಳಿಯುವ ನಿರೀಕ್ಷೆಯಿದೆ ಎಂದು ಹೇಳಿದರು.

ಗ್ರಾಮ ಮಟ್ಟದಲ್ಲೂ ಪೇಪರ್‌ಲೆಸ್‌ ಆಡಳಿತ

ಗ್ರಾಮೀಣ ಭಾಗದಲ್ಲಿ ಆಡಳಿತ ಸುಗಮವಾಗಿ ನಡೆಯುವ ಸಂಬಂಧ ಈಗಾಗಲೇ 4 ಸಾವಿರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ನೀಡಲಾಗಿದೆ. ಆ ಲ್ಯಾಪ್‌ಟಾಪ್‌ಗಳಲ್ಲಿ ಕಂದಾಯ ಇಲಾಖೆಗೆ ಸೇರಿದ ಅಗತ್ಯ ಆನ್‌ಲೈನ್‌ ಅಪ್ಲಿಕೇಷನ್‌ಗಳನ್ನು ಅಳವಡಿಸಿ, ಆನ್‌ಲೈನ್‌ ಮೂಲಕವೇ ಕಡತಗಳನ್ನು ಇ-ಆಫೀಸ್‌ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ