ದಾಖಲೆ ರಕ್ಷಿಸುವ ಭೂ ಸುರಕ್ಷಾ ಯೋಜನೆಗೆ ಚಾಲನೆ

KannadaprabhaNewsNetwork |  
Published : Jun 13, 2025, 02:13 AM IST
೧೨ಕೆ.ಎಂ.ಎಲ್‌.ಆರ್.೨- ಮಾಲೂರು ಪಟ್ಟಣದ ತಾಲೂಕು ಕಚೇರಿಯ ರೆಕಾರ್ಡ್ ರೂಮ್ ಭೂ ದಾಖಲೆಗಳ ಭೂ ಸುರಕ್ಷಾ ಯೋಜನೆಯಡಿ ಗಣಕೀಕರಣ ಮೂಲಕ ಭೂ ದಾಖಲೆಗಳನ್ನು ವಿತರಿಸಲು ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು. | Kannada Prabha

ಸಾರಾಂಶ

ಭೂ ದಾಖಲೆಗಳನ್ನು ದೀರ್ಘಾವಧಿಯವರೆಗೆ ಸಂರಕ್ಷಿಸುವುದು, ಅವುಗಳನ್ನು ಸುಲಭವಾಗಿ ದೊರಕುವಂತೆ ಮಾಡುವುದು ಮತ್ತು ವಂಚನೆ ಅಥವಾ ದಾಖಲೆ ನಷ್ಟದ ಅಪಾಯವನ್ನು ತಪ್ಪಿಸುವುದು ಮುಖ್ಯ ಗುರಿಯಾಗಿದೆ. ಭೂ ದಾಖಲೆಗಳ ಕೊಠಡಿಯಲ್ಲಿರುವ ಎಲ್ಲಾ ದಾಖಲೆಗಳನ್ನು ಎರಡುವರೆ ತಿಂಗಳ ಒಳಗೆ ಸ್ಕ್ಯಾನ್ ಮಾಡಿ ಗಣಕೀಕರಣ ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಮಾಲೂರು

ಇಂದಿನ ತಾಂತ್ರಿಕ ಯುಗದಲ್ಲಿ ಸರ್ಕಾರಿ ಇಲಾಖೆಗಳ ಸೇವೆಯನ್ನು ಸುಗಮಗೊಳಿಸಲು ಹಾಗೂ ಸೇವಾವಿತರಣೆಯನ್ನು ಉತ್ತಮಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೃಷ್ಣೇ ಭೈರೇಗೌಡ ಮುಂದಾಗಿದ್ದು, ಇದಕ್ಕೆ ಉದಾಹರಣೆಯೆಂದರೆ ಭೂ-ಸುರಕ್ಷಾ ಯೋಜನೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಪಟ್ಟಣದ ತಾಲೂಕು ಕಚೇರಿಯ ರೆಕಾರ್ಡ್ ರೂಮ್ ಭೂ ದಾಖಲೆಗಳ ಭೂ ಸುರಕ್ಷಾ ಯೋಜನೆ ಅಡಿ ಗಣಕೀಕರಣ ಮೂಲಕ ಭೂ ದಾಖಲೆಗಳನ್ನು ವಿತರಿಸಲು ಚಾಲನೆ ನೀಡಿ ಮಾತನಾಡಿದ ಅವರು, ಪ್ರಮುಖ ಭೂ-ಸಂಬಂಧಿತ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ರಕ್ಷಿಸುವ ಗುರಿಯನ್ನು ಹೊಂದಿದೆ. ಇವುಗಳಲ್ಲಿ ಭೂಕಂದಾಯ, ಭೂ ಸಮೀಕ್ಷೆ ಮತ್ತು ನೋಂದಣಿ ಇಲಾಖೆಗಳ ದಾಖಲೆಗಳು ಸೇರಿವೆ ಎಂದರು.

ಭೂ ದಾಖಲೆಗಳ ಸಂರಕ್ಷಣೆ

ಭೂ ದಾಖಲೆಗಳನ್ನು ದೀರ್ಘಾವಧಿಯವರೆಗೆ ಸಂರಕ್ಷಿಸುವುದು, ಅವುಗಳನ್ನು ಸುಲಭವಾಗಿ ದೊರಕುವಂತೆ ಮಾಡುವುದು ಮತ್ತು ವಂಚನೆ ಅಥವಾ ದಾಖಲೆ ನಷ್ಟದ ಅಪಾಯವನ್ನು ತಪ್ಪಿಸುವುದು ಮುಖ್ಯ ಗುರಿಯಾಗಿದೆ. ಭೂ ದಾಖಲೆಗಳ ಕೊಠಡಿಯಲ್ಲಿರುವ ಎಲ್ಲಾ ದಾಖಲೆಗಳನ್ನು ಎರಡುವರೆ ತಿಂಗಳ ಒಳಗೆ ಸ್ಕ್ಯಾನ್ ಮಾಡಿ ಗಣಕೀಕರಣದ ಮೂಲಕ ಭೂ ದಾಖಲೆಗಳನ್ನು ನೀಡಲಾಗುವುದು ಎಂದು ಹೇಳಿದರು.

ತಹಸೀಲ್ದಾರ್ ಎಂ.ವಿ.ರೂಪ ಮಾತನಾಡಿ, ಭೂ ಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ತಾಲೂಕು ಕಚೇರಿಗಳಲ್ಲಿರುವ ಪ್ರಮುಖ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆ ಇದಾಗಿದೆ. ಅಂದರೆ, ಸ್ವಾತಂತ್ರ‍್ಯ ಪೂರ್ವ ಮತ್ತು ಸ್ವಾತಂತ್ರ‍್ಯ ನಂತರದ ಲಭ್ಯವಿರುವ ಎಲ್ಲಾ ಹಳೆಯ ಭೂದಾಖಲೆಗಳನ್ನು ಈ ಮೂಲಕ ಡಿಜಿಟಲೀಕರಣ ಮಾಡಿ ರಕ್ಷಿಸಲಾಗುತ್ತದೆ ಎಂದು ಹೇಳಿದರು.

ದಾಖಲೆಗಳ ಗಣಕೀಕರಣ

ಸ್ವಾತಂತ್ರ‍್ಯ ಪೂರ್ವದ ಅವಧಿಯ ದಾಖಲೆಗಳು ಇಂಡೆಕ್ಸಿಂಗ್, ಕ್ಯಾಲಾಗಿಂಗ್, ಸ್ಕ್ಯಾನಿಂಗ್ ಹಾಗೂ ಅಪ್ಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದೆ. ಹೀಗಾಗಿ ರೈತರು ಭೂ ದಾಖಲೆ ಪಡೆಯಲು ಕಚೇರಿಗೆ ಅಲೆಯಬೇಕಿಲ್ಲ. ಜನರೇ ನೇರವಾಗಿ ಅವುಗಳನ್ನು ಡಿಜಿಟಲ್ ರೂಪದಲ್ಲ ಪಡೆದುಕೊಳ್ಳಬಹುದಾಗಿದೆ. ಪಟ್ಟಣದ ಭೂ ದಾಖಲೆಗಳ ಕೊಠಡಿಯಲ್ಲಿರುವ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಲು ಎರಡು ತಿಂಗಳು ಅವಧಿ ಅಗತ್ಯ. ಎರಡು ತಿಂಗಳ ನಂತರ ಎಲ್ಲಾ ದಾಖಲೆಗಳನ್ನು ಗಣಕೀಕರಣ ಮೂಲಕ ನೀಡಲಾಗುವುದು ಎಂದರು.

ದಾಖಲೆ ವಿತರಣೆ:

ಇದೇ ಸಂದರ್ಭದಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಸರ್ಕಾರಿ ದಾಖಲೆಗಳನ್ನು ವಿತರಿಸಿದರು. ಗ್ರೇಡ್ ೨ ತಹಸೀಲ್ದಾರ್ ಹರಿಪ್ರಸಾದ್ ಶಿರಸ್ತೆದಾರ್ ಧರ್ಮೇಂದ್ರ ಪ್ರಸಾದ್ ಶ್ರೀ ಹರಿ ಸಿಬ್ಬಂದಿ ಅನಿತಾ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ