ಶಿರಹಟ್ಟಿ: ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆಯಿಂದ ಭೂಮಿ ಬಂಜೆಯಾಗುತ್ತಿದ್ದು (ಬರಡು), ರೈತರು ಸಾವಯವ ಗೊಬ್ಬರ ಬಳಕೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ರೈತರಿಗೆ ಕರೆ ನೀಡಿದರು.ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಭಾನುವಾರ ತಾಲೂಕಿನ ಕಡಕೋಳ ಗ್ರಾಮದ ದೇವರಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ಏರ್ಪಡಿಸಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಮಣ್ಣಿನ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ದೀರ್ಘಕಾಲಿಕ ಕೃಷಿ ಉತ್ಪಾದನೆಗೆ ಉತ್ತಮವಾಗಿದೆ ಎಂದರು.ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಬೇಕು. ಗೋಮಯ, ಕಾಂಪೋಸ್ಟ್, ಹಸಿರು ಗೊಬ್ಬರ ಮುಂತಾದ ಸಾವಯವ ಗೊಬ್ಬರಗಳನ್ನು ಬಳಸಿ ರೈತರು ಭೂಮಿ ಫಲವತ್ತತೆ ಕಾಪಾಡಿಕೊಳ್ಳಬೇಕು. ಜತೆಗೆ ಬೆಳೆ ಪರಿವರ್ತನೆ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕು. ಸಾವಯವ ಕೃಷಿ ಪದ್ಧತಿಯಿಂದ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಹೆಚ್ಚಿಸುವುದು ಮತ್ತು ಸಾವಯವ ಕಾರ್ಬನ್ ಪ್ರಮಾಣವನ್ನು ಸುಧಾರಿಸುವುದು. ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ ಮಾಡುವ ಕುರಿತು ತಿಳಿಸಿದರು.ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಮಣ್ಣಿನಲ್ಲಿ ಶೇ. ೪೫ರಷ್ಟು ಖನಿಜ ಅಂಶಗಳು, ಶೇ. ೨೫ರಷ್ಟು ಗಾಳಿ, ಶೇ ೨೫ರಷ್ಟು ನೀರು, ಶೇ. ೫ರಷ್ಟು ಸಾವಯವ ಅಂಶಗಳು ಇರುತ್ತವೆ. ಶೇ. ೫ ಸಾವಯವ ಅಂಶಗಳು ಕೃಷಿಗೆ ಅಗತ್ಯವಾಗಿದೆ. ಭೂಮಿಯ ಮೇಲ್ಭಾಗದ ೧ ಅಡಿ ಮಣ್ಣು ಮಾತ್ರ ವ್ಯವಸಾಯಕ್ಕೆ ಯೋಗ್ಯವಾಗಿದೆ. ಇದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕು ಎಂದರು.
ಎಸ್.ವಿ. ಸಂಕನೂರ, ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ಫಕ್ಕೀರೇಶ ರಟ್ಟಿಹಳ್ಳಿ, ಬಸವರಾಜ ನಾವಿ, ಸುನೀಲ ಮಹಾಂತಶೆಟ್ಟರ, ಡಿ.ವೈ. ಹುನಗುಂದ, ಶಿವಪ್ರಕಾಶ ಮಹಾಜನಶೆಟ್ಟರ, ದೇವರಡ್ಡಿ ಅಗಸನಕೊಪ್ಪ, ಸರೋಜಮ್ಮ ಅಗಸನಕೊಪ್ಪ, ಸುರೇಶ ಕುಂಬಾರ, ತಿಪ್ಪಣ್ಣ ಕೊಂಚಿಗೇರಿ, ಜಾನು ಲಮಾಣಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಇದ್ದರು.