ಕನ್ನಡಪ್ರಭ ವಾರ್ತೆ ಬೆಂಗಳೂರು
ಘನತ್ಯಾಜ್ಯ ನಿರ್ವಹಣೆಗೆ ಮೀಸಲಿಟ್ಟ ಭೂಮಿಯಲ್ಲಿ ಅಕ್ರಮವಾಗಿ ಶೆಡ್ ಮತ್ತು ಮನೆಗಳನ್ನು ನಿರ್ಮಿಸಿದ್ದನ್ನು ಜಿಬಿಎ ತೆರವು ಮಾಡಿದೆ. ಅಲ್ಲದೆ, ತೆರವು ಕಾರ್ಯಾಚರಣೆ ನಡೆಸಿದ ಭೂಮಿಯನ್ನು 2016ರಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತದಿಂದ ಹಿಂದಿನ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ಆ ಭೂಮಿಯನ್ನು ಘನತ್ಯಾಜ್ಯ ನಿರ್ವಹಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ನೀಡಲಾಗಿತ್ತು. ಅಲ್ಲದೆ, ಆ ಭೂಮಿಗೆ ಕಳೆದೆರಡು ವರ್ಷಗಳಿಂದೀಚೆಗೆ ಬಿಬಿಎಂಪಿ ಕಾಂಪೌಂಡ್ ಕೂಡ ನಿರ್ಮಿಸಿದೆ. ಆದರೂ, ಕೆಲವರು ಹಣ ಪಡೆದು ನಕಲಿ ದಾಖಲೆ ಸೃಷ್ಟಿ ಮಾಡಿ, ನಿರಾಶ್ರಿತರಿಗೆ ನಿವೇಶನ ಮಂಜೂರು ಮಾಡಿದ್ದಾರೆ. ಇದರಿಂದಾಗಿ ಒತ್ತುವರಿ ಪ್ರಮಾಣ ಹೆಚ್ಚಾಗುವಂತಾಗಿತ್ತು.
ತಹಸೀಲ್ದಾರ್ ತಾತ್ಕಾಲಿಕ ಮಂಜೂರಾತಿ ನಕಲಿ?:2017ರಲ್ಲಿ ಅಂದಿನ ಬೆಂಗಳೂರು ಉತ್ತರ ತಾಲೂಕಿನ ತಹಸೀಲ್ದಾರ್ ಸರ್ಕಾರಿ ಭೂಮಿಯಲ್ಲಿ ಶೆಡ್ ನಿರ್ಮಾಣಕ್ಕೆ ಭೂ ಕಂದಾಯ ಕಾಯ್ದೆ ಕಲಂ 94 (ಸಿಸಿ)ರ ಅಡಿ ತಾತ್ಕಾಲಿಕ ಅನುಮತಿ ನೀಡಿರುವ ದಾಖಲೆಯನ್ನು ಸ್ಥಳೀಯ ನಿವಾಸಿಗಳು ಪ್ರದರ್ಶಿಸುತ್ತಿದ್ದಾರೆ. ಆದರೆ, ಆ ದಾಖಲೆ ಕೋಗಿಲು ಕ್ರಾಸ್‌ನ ಕೆಲ ಮನೆಗಳಿಗೆ ನೀಡಿದ ಅನುಮತಿ ಪತ್ರವಾಗಿದ್ದು, ಫಕೀರ್ ಕಾಲೋನಿ ಮತ್ತು ವಸೀಂ ಲೇಔಟ್‌ನ ನಿವಾಸಿಗಳು ತೋರಿಸುತ್ತಿರುವ 94 (ಸಿಸಿ) ದಾಖಲೆಯೇ ನಕಲಿ ಎಂಬ ಅಂಶ ಚರ್ಚೆಯಾಗುತ್ತಿದೆ. ಈ ಕುರಿತು ಜಿಬಿಎ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.
ಹಣ ಪಡೆದು ಶೆಡ್ ನಿರ್ಮಾಣಕ್ಕೆ ಅನುಮತಿ:ಮನೆ ಕಳೆದುಕೊಂಡಿರುವವರು ಹೇಳುವ ಪ್ರಕಾರ ಜಿಬಿಎ ಭೂಮಿಯಲ್ಲಿ ಶೆಡ್ ಅಥವಾ ಮನೆ ನಿರ್ಮಾಣಕ್ಕಾಗಿ ಕೆಲವರು ಒಂದರಿಂದ ಒಂದೂವರೆ ಲಕ್ಷ ಪಡೆದಿದ್ದಾರೆ. ಅವರಿಗೆ ಹಣ ನೀಡಿದ ನಂತರ ಶೆಡ್ ಅಥವಾ ಮನೆ ನಿರ್ಮಾಣ ಮಾಡಲು ಅವಕಾಶ ನೀಡಿದ್ದಾರೆ. ಇದಕ್ಕೆ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ನೆರವು ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ಅಕ್ರಮ ವಸತಿ ನಿರ್ಮಾಣಕ್ಕೆ ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳ ನೆರವಿತ್ತು ಎಂಬ ಶಂಕೆ ವ್ಯಕ್ತವಾಗುವಂತಾಗಿದೆ.
ಕಳೆದೆರಡು ವರ್ಷದಿಂದೀಚೆಗೆ ಒತ್ತುವರಿ ಹೆಚ್ಚಳ:ಒತ್ತುವರಿ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಿಂದ ಸ್ಯಾಟಲೈಟ್ ಇಮೇಜ್ ಸಿದ್ಧಪಡಿಸಲಾಗಿದೆ. ಆ ಸ್ಯಾಟಲೈಟ್ ಇಮೇಜ್‌ನಲ್ಲಿ 2023ರಲ್ಲಿ ಒತ್ತುವರಿಯಾಗಿರುವ ಜಾಗದಲ್ಲಿ ಯಾವುದೇ ರೀತಿಯ ಅಕ್ರಮ ನಿರ್ಮಾಣ ಕಂಡು ಬಂದಿಲ್ಲ. ಆದರೆ, 2024 ಮತ್ತು 2025ರಲ್ಲಿ ಒತ್ತುವರಿ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. 2023ರಲ್ಲಿ ಇದ್ದಂಥ ಹಸಿರು ಭಾಗ 2025ಕ್ಕೆ ಕಣ್ಮರೆಯಾಗಿ, ಖಾಲಿ ಜಾಗ ಮತ್ತು ಶೆಡ್, ಮನೆಗಳ ನಿರ್ಮಾಣ ಕಂಡು ಬಂದಿದೆ. ಅದರಲ್ಲೂ ರಾತ್ರೋರಾತ್ರಿ ಶೆಡ್, ಮನೆಗಳು ನಿರ್ಮಾಣವಾಗಿರುವುದು ಪತ್ತೆಯಾಗಿದೆ.
ಮಾಸಿಕ 300 ರು. ವಸೂಲಿಸ್ಥಳೀಯ ನಿವಾಸಿಗಳು ಹೇಳುವಂತೆ ಶೆಡ್ ಮತ್ತು ಮನೆ ನಿರ್ಮಾಣಕ್ಕೆ ಕೆಲವರು ಹಣ ಪಡೆದಿದ್ದಲ್ಲದೆ ವಿದ್ಯುತ್ ಸಂಪರ್ಕ ಕೊಡಿಸಿ ಪ್ರತಿ ತಿಂಗಳು ವಿದ್ಯುತ್ ಶುಲ್ಕ ಎಂದು 300 ರು. ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಹೀಗೆ ಹಣ ವಸೂಲಿ ಮಾಡುತ್ತಿದ್ದವರು ಯಾರು ಎಂಬುದನ್ನು ಮಾತ್ರ ಸ್ಪಷ್ಟವಾಗಿ ಹೇಳುತ್ತಿಲ್ಲ.