ಸಿಗದ ಭೂಮಿಯ ಹಕ್ಕುಪತ್ರ, ಚುನಾವಣೆ ಬಹಿಷ್ಕಾರಕ್ಕೆ ಐದು ಗ್ರಾಮಸ್ಥರ ನಿರ್ಧಾರ

KannadaprabhaNewsNetwork |  
Published : Apr 06, 2024, 12:48 AM ISTUpdated : Apr 06, 2024, 12:49 AM IST
 ಐದು ಗ್ರಾಮಗಳ ನಿವಾಸಿಗಳಿಗೆಹಕ್ಕು ಪತ್ರ ನೀಡುವಲ್ಲಿ ಕಂದಾಯ ಇಲಾಖೆ ವಿಫಲ   ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ | Kannada Prabha

ಸಾರಾಂಶ

ಗಂಗಾವತಿ ತಾಲೂಕಿನ ಐದು ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವಲ್ಲಿ ಕಂದಾಯ ಇಲಾಖೆ ವಿಫಲವಾಗಿದ್ದರಿಂದ ಗ್ರಾಮಸ್ಥರು ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಗಂಗಾವತಿ: ತಾಲೂಕಿನ ಐದು ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವಲ್ಲಿ ಕಂದಾಯ ಇಲಾಖೆ ವಿಫಲವಾಗಿದ್ದರಿಂದ ಗ್ರಾಮಸ್ಥರು ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಶುಕ್ರವಾರ ತಹಸೀಲ್ದಾರ್‌ ಕಚೇರಿಗೆ ತೆರಳಿದ ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಪತ್ರ ಸಲಲಿಸಿ, ಹಕ್ಕುಪತ್ರ ನೀಡಿದರೆ ಮಾತ್ರ ಮತ ಚಲಾಯಿಸುತ್ತೇವೆ, ಇಲ್ಲದಿದ್ದರೆ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

ಕಳೆದ 70 ವರ್ಷಗಳಿಂದ ಆನೆಗೊಂದಿ ವ್ಯಾಪ್ತಿಯಲ್ಲಿ ಬರುವ ಚಿಕ್ಕ ರಾಂಪುರ, ಹನುಮನಹಳ್ಳಿ, ಮುದುಕಪ್ಪನ ಕ್ಯಾಂಪ್‌, ಜಂಗ್ಲಿ, ಅಂಜಿನಳ್ಳಿ ಭಾಗದ ಕೆಲವು ಗ್ರಾಮಗಳಲ್ಲಿ ವಾಸ ಮಾಡುವ ನಿವಾಸಿಗಳ ಮನೆಗಳಿಗೆ ಪಟ್ಟ ನೀಡುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಕಂದಾಯ ಇಲಾಖೆ ಮತ್ತು ತಾಲೂಕು ಆಡಳಿತ ವಿಳಂಬ ಮಾಡುತ್ತಿದೆ ಎಂದು ನಿವಾಸಿಗಳು ದೂರಿದರು.

ಈ ಸಂದರ್ಭದಲ್ಲಿ ನೀಲಪ್ಪ ಮಾತನಾಡಿ, ಕಳೆದ 70 ವರ್ಷಗಳಿಂದ ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದು, ಸರ್ಕಾರಿ ಮತ್ತು ಅರಣ್ಯ ಪ್ರದೇಶದಲ್ಲಿ ಮನೆಗಳ ನಿರ್ಮಿಸಿಕೊಂಡಿದ್ದೇವೆ. ಇದುವರೆಗೂ ಈ ಮನೆಗಳಿಗೆ ಪಟ್ಟ ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಸ್ವಾಮಿತ್ವ ಯೋಜನೆ ಅಡಿ ಈಗಾಗಲೇ ಎರಡು ಬಾರಿ ಸರ್ವೇ ಮಾಡಿದರೂ ಪಟ್ಟಾ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದನ್ನು ಖಂಡಿಸಿ ಹನುಮನಹಳ್ಳಿ ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಸರ್ವೆ ನಡೆಸಿ ಪಟ್ಟಾ ವಿತರಣೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ, ಈಗ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಹಕ್ಕುಪತ್ರ ವಿತರಿಸಬೇಕು. ಜಾಗವನ್ನು ಖಾತಾ ಪುಸ್ತಕದಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.

ಈ ಗ್ರಾಮಕ್ಕೆ ಸಿ.ಸಿ. ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಶಕ್ತಿ, ರಸ್ತೆ, ಸರ್ಕಾರಿ ಶಾಲೆಗಳು, ಅಂಗನವಾಡಿ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಹಕ್ಕುಪತ್ರ ಮಾತ್ರ ನೀಡಿಲ್ಲ. ಪಂಚಾಯಿತಿ ಅಧಿಕಾರಿಗಳು ನಮ್ಮ ಜಾಗಕ್ಕೆ ಎಲ್ಲ ರೀತಿಯ ತೆರಿಗೆ ಭರಿಸಿಕೊಂಡಿದ್ದಾರೆ. ಆದರೆ ನಮ್ಮ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸಲು ಆಗುತ್ತಿಲ್ಲ. ಕೂಡಲೇ ಆನೆಗೊಂದಿ, ಮಲ್ಲಾಪುರ, ಸಂಗಾಪುರ ಮತ್ತು ಸಾಣಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಈ‌ ಸಂದರ್ಭದಲ್ಲಿ ಲಪ್ಪ, ಉಡಚಮ್ಮ, ಯಮನಮ್ಮ, ದೊಡ್ಡಮ್ಮ, ಚೌರಪ್ಪ, ಲಕ್ಷ್ಮಣ ನಾಯ್ಕ್, ಗಾಳೆಮ್ಮ, ಗೋಪಾಲ, ಆಂಜಿನಿ, ಜ್ಯೋತಿ, ಕಲ್ಲಯ್ಯಸ್ವಾಮಿ, ಸೋಮರಾಜ, ಮಂಜುನಾಥ, ವೆಂಕೋಬಿ, ಪರಶುರಾಮ, ನಾರಾಯಣ, ರಾಮನಾಯಕ ಇದ್ದರು.

ಕಾನೂನಾತ್ಮಕ ಪರಿಹಾರ-ಭರವಸೆ

ಗಂಗಾವತಿ ತಾಲೂಕಿನ ಐದು ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ ಎಂಬ ಕಾರಣಕ್ಕೆ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಮನವಿ ಪತ್ರ ನೀಡಿದ್ದ ಹಿನ್ನೆಲೆಯಲ್ಲಿ ಚಿಕ್ಕರಾಂಪುರ ಗ್ರಾಮದಲ್ಲಿ ಎಸಿ ಕ್ಯಾ. ಮಹೇಶ ಮಾಲಿಗಿತ್ತಿ ಅವರು ಸಭೆ ನಡೆಸಿದರು.ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮತದಾನದ ಮಹತ್ವದ ಬಗ್ಗೆ ತಿಳಿಸಿದರು. ನಿವಾಸಿಗಳ ಬೇಡಿಕೆಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಡಿಎಸ್ ಪಿ ಸಿದ್ದಲಿಂಗನಗೌಡ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಹಾಗೂ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ