- ನ್ಯಾಮತಿ ತಹಸೀಲ್ದಾರ್ ಕಚೇರಿ ಬಳಿ ಸಾವಿರಾರು ಕುರಿಗಳೊಂದಿಗೆ ಪ್ರತಿಭಟಿಸಿ ಗ್ರಾಮಸ್ಥರ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ಕುಂಕುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೆತ್ತಿನಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ನ್ಯಾಯಾಲಯ ಕಟ್ಟಡಕ್ಕೆ ಭೂಮಿಯನ್ನು ನೀಡದಂತೆ ಆಗ್ರಹಿಸಿ, ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣಕ್ಕೆ ನೂರಾರು ಕುರಿಗಳೊಂದಿಗೆ ಆಗಮಿಸಿ ಸೋಮವಾರ ಪ್ರತಿಭಟನೆ ನಡೆಸಿದರು.ನ್ಯಾಮತಿಯ ಗಾಳಿ ಮಾರಮ್ಮ ದೇವಸ್ಥಾನದಿಂದ ದೊಡ್ಡೆತ್ತಿನಹಳ್ಳಿ ಗ್ರಾಮದ ನೂರಾರು ಗ್ರಾಮಸ್ಥರು ಕುರಿಹಿಂಡುಗಳೊಂದಿಗೆ ಆಗಮಿಸಿ, ನಮ್ಮ ಭೂಮಿ ನಮ್ಮ ಹಕ್ಕು ಎಂದು ಘೋಷಣೆ ಮೊಳಗಿಸಿ, ಸರ್ಕಾರದ ಗಮನ ಸೆಳೆದರು.
ಹಲವು ವರ್ಷಗಳಿಂದ ಆ ಜಾಗವು ಗ್ರಾಮದವರ ಅನುಭವದಲ್ಲಿದೆ. ಗ್ರಾಮಸ್ಥರು ಹೈನುಗಾರಿಕೆ, ಕುರಿ ಸಾಕಣೆಯಿಂದ ಬದುಕು ಸಾಗಿಸುತ್ತಿದ್ದೇವೆ. ಹಲವಾರು ಕುಟುಂಬಗಳಿಗೆ ನಿವೇಶನಗಳಿಲ್ಲ. 2017ರಿಂದ ನಿವೇಶನಕ್ಕಾಗಿ, 6 ತಿಂಗಳ ಹಿಂದೆ ಗ್ರಾಮ ಸಭೆ ನಡೆಸಿ 300 ಜನರು ನಿವೇಶನಕ್ಕೆ ಅರ್ಜಿಗಳನ್ನು ಹಾಕಿ ಕಾಯುತ್ತಿದ್ದಾರೆ. ಆದರೂ ನಮಗೆ ಮಾಹಿತಿ ನೀಡದೇ ಗ್ರಾಮಾಡಳಿತ ಅಧಿಕಾರಿಗಳು ನಿವೇಶನ ಸೌಲಭ್ಯ ನೀಡದೇ ವಂಚಿಸಿದ್ದಾರೆ. ತಾಲೂಕು ಆಡಳಿತ ಕ್ರಮ ಕೈಗೊಂಡು ಈ ಕುರಿತು ನ್ಯಾಯ ಒದಗಿಸಿಕೊಡಬೇಕು. ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿಕೊಡುತ್ತೇನೆ. ಆದರೆ ಈ ಹಿಂದೆ 2017ರಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಕಟ್ಟಡಕ್ಕೆ 9 ಎಕರೆ ಸರ್ಕಾರದಿಂದ ಮಂಜೂರಾಗಿತ್ತು. ಕಾರಣಾಂತರದಿಂದ ಈ ಯೋಜನೆ ಹೊನ್ನಾಳಿ ತಾಲೂಕು ಅರಬಗಟ್ಟೆ ಗ್ರಾಮಕ್ಕೆ ಹೋಗಿದೆ. ಆದ ಪ್ರಯುಕ್ತ ಆ ಜಾಗದಲ್ಲಿ ನ್ಯಾಯಾಲಯ ಕಟ್ಟಡ ಮತ್ತು ತಾಲೂಕು ಆಸ್ಪತ್ರೆ ಕಟ್ಟಡಗಳು ನಿರ್ಮಾಣಗೊಂಡರೆ ನಿಮ್ಮ ಗ್ರಾಮ ಸೇರಿದಂತೆ ನ್ಯಾಮತಿ ತಾಲೂಕು ಸುತ್ತಮುತ್ತ ಅಭಿವೃದ್ಧಿ ಹೊಂದುತ್ತದೆ. ನೀವೆಲ್ಲಾ ಸಮಾಧಾನದಿಂದ ಯೋಚನೆ ಮಾಡಿ, ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಹೇಳಿದರು.
- - -
ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮಸ್ಥರು ನ್ಯಾಯಾಲಯ ಕಟ್ಟಡಕ್ಕೆ ಭೂಮಿ ನೀಡದಂತೆ ಆಗ್ರಹಿಸಿ ನೂರಾರು ಕುರಿಗಳೊಂದಿಗೆ ತಹಸೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.