ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಈ ಕುರಿತು ಜಿಲ್ಲಾಧಿಕಾರಿಗಳು ಸೆ. 2ರಂದು ಆದೇಶ ಹೊರಡಿಸಿದ್ದಾರೆ. ಸರ್ಕಾರದ ವಶಕ್ಕೆ ಪಡೆದಿರುವ 6 ಎಕರೆ ಜಮೀನು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಅಂಚಿನಲ್ಲೆ ಇದೆ. ಅಲ್ಲದೆ ರಾಷ್ಟ್ರ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ ತರಬೇತಿ ಕೇಂದ್ರದ ಪಕ್ಕದಲ್ಲೇ ಇದೆ.ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿರುವಂತೆ, ಗೋಮಾಳ ಜಮೀನು ಕಬಳಿಸುವ ಷಡ್ಯಂತ್ರದಲ್ಲಿ ತಾಲೂಕು ಕಚೇರಿಯ ಕಂದಾಯ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಚೇರಿ ದಾಖಲೆಗಳನ್ನು ಪರಿಶೀಲಿಸದೆ ಆದೇಶ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಕಬಳಿಸಲು ಸಹಕರಿಸಿದ್ದಾರೆ. ಕಬಳಿಕೆಯಲ್ಲಿ ನಗರಸಭೆಯ ಸದಸ್ಯ, ಅಧ್ಯಕ್ಷರಾಗಿದ್ದವರು ಸೇರಿದ್ದಾರೆ ಎಂದು ವಿವರಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿದ ಈ ಜಮೀನಿನಲ್ಲಿ 1998 ರಿಂದಲೂ ರಾಗಿ ಬೆಳೆ ಬೆಳೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಗೂಗಲ್ ನಕ್ಷೆ ಪರಿಶೀಲನೆಯಲ್ಲಿ 2024ರ ವರೆಗೂ ಈ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದೆ ಇರುವುದು ಕಂಡು ಬಂದಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ.