ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಸದಸ್ಯ ಜೆ.ಆರ್.ರಾಕೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.
ಬಳಿಕ ಮಾತನಾಡಿ, ಕ್ರೀಡಾ ದಿಗ್ಗಜರನ್ನು ಗೌರವಿಸಲು ಮತ್ತು ದೈಹಿಕ ಸದೃಢತೆಯನ್ನು ಉತ್ತೇಜಿಸಲು ಧ್ಯಾನ್ ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತಿದೆ. ಶಾಂತಿಯುತ ಸಮಾಜಗಳನ್ನು ಉತ್ತೇಜಿಸಲು ಕ್ರೀಡೆ ಎಂಬುದು ಈ ವರ್ಷದ ಧ್ಯೇಯವಾಗಿದೆ. ಧ್ಯಾನ್ ಚಂದ್ 1928, 1932 ಮತ್ತು 1936 ರ ಒಲಿಂಪಿಕ್ಸ್‌ನ ಹಾಕಿ ಕ್ರೀಡೆಯಲ್ಲಿ ಭಾರತ ಚಿನ್ನದ ಪದಕವನ್ನು ಸತತ 3 ಬಾರಿ ಪಡೆಯಲು ಪ್ರಮುಖ ಕಾರಣರಾದವರು. ಅವರ ಕ್ರೀಡಾಸ್ಪೂರ್ತಿ ಎಲ್ಲರಿಗೂ ಮಾದರಿಯಾಗಿದೆ. ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಯುವ ಕ್ರೀಡಾಪಟುಗಳು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.ಮೇರಾ ಯುವ ಭಾರತ್ ಜಿಲ್ಲಾ ಸಂಯೋಜಕರಾದ ಕೆ.ಶ್ರೀವಾಣಿ ಕೋನರೆಡ್ಡಿ ಮಾತನಾಡಿ, ಯುವಜನರ ಕ್ರೀಡಾ ಚಟುವಟಿಕೆಗಳ ಆಸಕ್ತಿಯನ್ನು ಮೇರಾ ಯುವ ಭಾರತ್ ಸಂಘಟನೆ ಉತ್ತೇಜಿಸುತ್ತದೆ. ಏಕತೆ ಮತ್ತು ತಂಡದ ಕೆಲಸವನ್ನು ಬೆಳೆಸುವಲ್ಲಿ ಕ್ರೀಡೆಯ ಪಾತ್ರ ಬಹಳ ಮುಖ್ಯವಾಗಿದೆ, ಕ್ರೀಡೆಗಳನ್ನು ಶಾಂತಿ, ಒಳಗೊಳ್ಳುವಿಕೆ ಮತ್ತು ಪರಸ್ಪರ ತಿಳುವಳಿಕೆಯ ಸಾಧನವಾಗಿ ಬಳಸಿಕೊಳ್ಳುವ ಸಮುದಾಯಗಳನ್ನು ಇದು ಉತ್ತೇಜಿಸುತ್ತದೆ, ಸಹಕಾರ ಮತ್ತು ಏಕತೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದರು.
ದೇವರಾಜ್ ಅರಸ್ ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಎಂ.ಚಿಕ್ಕಣ್ಣ ಮಾತನಾಡಿ ಕ್ರೀಡಾ ದಿನದ ಮಹತ್ವವನ್ನು ತಿಳಿಸಿದರು.
ಪ್ರಾಂಶುಪಾಲ ಡಾ.ಎಂ.ಎಸ್.ಗೌರಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ವಿದ್ವತ್, ಉತ್ತಮ್‌ಕುಮಾರ್, ಉಪಪ್ರಾಂಶುಪಾಲ ಕೆ.ದಕ್ಷಿಣಾಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ವಿ.ಶ್ರೀನಿವಾಸ್, ಆರ್‌ಎಲ್‌ಜೆಐಟಿ ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಉದ್ಯೋಗ ತರಬೇತಿ ಅಧಿಕಾರಿ ಬಾಬುಸಾಬಿ, ಉಪನ್ಯಾಸಕಿ ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.