ಗ್ರಾಮದ ಮಡಿವಾಳ ಜನಾಂಗಕ್ಕೆ ಸೇರಿದ ತಂಗ್ಯಮ್ಮ (60) ಗುರುವಾರ ರಾತ್ರಿ ಮೃತಪಟ್ಟಿದ್ದರು. ಶುಕ್ರವಾರ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಸಂದರ್ಭ ಮನೆ ಮುಂದಿನ ರಸ್ತೆಯಲ್ಲಿ ಶವ ಸಾಗಿಸಲು ಬಿಡುವುದಿಲ್ಲ ಎಂದು ಕೆಲ ಕುಟುಂಬಗಳು ವಿರೋಧ ವ್ಯಕ್ತಪಡಿಸಿದವು. ಇದರಿಂದ ಸುಮಾರು ಒಂದೂವರೆ ಗಂಟೆ ಶವ ರಸ್ತೆಯಲ್ಲೇ ಇರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಕನ್ನಡಪ್ರಭವಾರ್ತೆ, ಅರಕಲಗೂಡು
ಮನೆ ಮುಂದಿನ ರಸ್ತೆಯಲ್ಲಿ ಶವ ಸಾಗಿಸಲು ಅವಕಾಶ ನೀಡುವುದಿಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮೃತದೇಹ ರಸ್ತೆಯಲ್ಲೇ ಕೆಲಕಾಲ ಇರಿಸಿದ ಘಟನೆ ತಾಲೂಕಿನ ಕೊಣನೂರು ಹೋಬಳಿ ಮಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಡಿವಾಳ ಜನಾಂಗಕ್ಕೆ ಸೇರಿದ ತಂಗ್ಯಮ್ಮ (60) ಗುರುವಾರ ರಾತ್ರಿ ಮೃತಪಟ್ಟಿದ್ದರು. ಶುಕ್ರವಾರ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಸಂದರ್ಭ ಮನೆ ಮುಂದಿನ ರಸ್ತೆಯಲ್ಲಿ ಶವ ಸಾಗಿಸಲು ಬಿಡುವುದಿಲ್ಲ ಎಂದು ಕೆಲ ಕುಟುಂಬಗಳು ವಿರೋಧ ವ್ಯಕ್ತಪಡಿಸಿದವು. ಇದರಿಂದ ಸುಮಾರು ಒಂದೂವರೆ ಗಂಟೆ ಶವ ರಸ್ತೆಯಲ್ಲೇ ಇರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಪರ್ಯಾಯ ರಸ್ತೆ ಮೂಲಕ ಮೃತದೇಹ ಸ್ಮಶಾನಕ್ಕೆ ಸಾಗಿಸಲು ಅನುವು ಮಾಡಿಕೊಟ್ಟರು. ಪೊಲೀಸರು ಮಧ್ಯಪ್ರವೇಶಿಸಿ ಸೌದೆ ತುಂಬಿದ್ದ ಟ್ರ್ಯಾಕ್ಟರ್ ಅನ್ನು ಸ್ವತಃ ಚಲಾಯಿಸಿಕೊಂಡು ಬಂದು ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು.
ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೆ.ಸಿ. ಸೌಮ್ಯ ಅವರು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಸರ್ಕಾರಿ ರಸ್ತೆಯಲ್ಲಿ ಮೃತದೇಹವನ್ನು ಸಾಗಿಸಲು ಯಾರೂ ಅಡ್ಡಿಪಡಿಸಬಾರದು ಎಂದು ಸ್ಪಷ್ಟಪಡಿಸಿದರು.
ಸ್ಮಶಾನ ರಸ್ತೆ ಅಭಿವೃದ್ಧಿಯಾಗದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ವಿಜಿಬಿ ರಾಮ್‌ಜಿ ಯೋಜನೆಯಡಿ ರಸ್ತೆ ಅಭಿವೃದ್ಧಿಪಡಿಸಿ ಸ್ಮಶಾನದವರೆಗೆ ಸುಗಮ ಸಂಪರ್ಕ ಕಲ್ಪಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು. ಮುಂದೆ ಇದೇ ರಸ್ತೆಯಲ್ಲಿ ಮೃತದೇಹ ಸ್ಮಶಾನಕ್ಕೆ ಕೊಂಡೊಯ್ಯಲು ಯಾವುದೇ ರೀತಿ ಅಡ್ಡಿಪಡಿಸಬಾರದು ಎಂದು ಗ್ರಾಮಸ್ಥರಿಗೆ ಸೂಚಿಸಿದರು.ಜಮೀನು ದುರಸ್ತಿ ಕುರಿತು ಮನವಿ
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸರ್ವೆ ನಂಬರ್ 28ರಲ್ಲಿರುವ ಜಮೀನುಗಳ ದಾಖಲೆಗಳನ್ನು ದುರಸ್ತಿ ಮಾಡಿಕೊಡಬೇಕು ಎಂದು ತಹಸೀಲ್ದಾರ್ ಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಸೌಮ್ಯ, ಈ ಪ್ರದೇಶದಲ್ಲಿ 9 ಜನರಿಗೆ ಜಮೀನು ಗ್ರಾಂಟ್ ಆಗಿದ್ದು, ದಾಖಲಾತಿಗಳ ಕೊರತೆಯಿಂದ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ದರಖಾಸ್ತು ಪೋಡಿ ಆಂದೋಲನದ ಮೂಲಕ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಮಾತನಾಡಿ, ಮೂಢನಂಬಿಕೆ ಕಾರಣ ಕೆಲವರು ಈ ರಸ್ತೆಯಲ್ಲಿ ಶವ ಸಾಗಿಸಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಬದಲಾಗಿ ಬೇರೆ ರಸ್ತೆ ನಿರ್ಮಿಸಿಕೊಂಡು ಈ ಮೂಲಕ ಹೋಗಬೇಕು ಎಂಬುದು ಅವರ ಒತ್ತಾಯವಾಗಿದೆ ಎಂದು ತಿಳಿಸಿದರು.
ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ, ಅಧಿಕಾರಿಗಳು ಹಾಗೂ ಪೊಲೀಸರ ಮಧ್ಯಪ್ರವೇಶದಿಂದ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ತಹಸೀಲ್ದಾರ್ ನೀಡಿರುವ ಭರವಸೆಯಿಂದ ಗ್ರಾಮಸ್ಥರಲ್ಲಿ ನಿರೀಕ್ಷೆ ಮೂಡಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.