ಕನ್ನಡಪ್ರಭವಾರ್ತೆ, ಹಾಸನ
ಹಾಸನಾಂಬೆ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ನಗರದ ಹಿಮ್ಸ್ ಸಭಾಂಗಣದಲ್ಲಿ ಶನಿವಾರ ನಡೆದ ಪೋಸ್ಟರ್ ಹಾಗೂ ವೆಬ್‌ಸೈಟ್ ಬಿಡುಗಡೆ ಮತ್ತು ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಾಸನಾಂಬೆ ಜಾತ್ರೆ ಕೇವಲ ಜಿಲ್ಲೆಯ ಉತ್ಸವವಾಗದೆ ಇಡೀ ನಾಡಿನ ಜನರು ಪಾಲ್ಗೊಳ್ಳುವ ಮಹೋತ್ಸವವಾಗಬೇಕು. ಕಳೆದ ವರ್ಷ ಜಾತ್ರೆ ವ್ಯವಸ್ಥಿತವಾಗಿ ನಡೆಸಿದ್ದಕ್ಕೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಬಾರಿ ಅದಕ್ಕಿಂತಲೂ ಉತ್ತಮವಾಗಿ ಆಯೋಜಿಸುವ ಉದ್ದೇಶವಿದೆ ಎಂದರು.
ಹಾಸನ ಜಿಲ್ಲೆಯ ಘನತೆ ಹಾಗೂ ಗೌರವವನ್ನು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ಜಾತ್ರೆ ನಡೆಸಬೇಕು. ನಗರಕ್ಕೆ ಮಾತ್ರ ಸೀಮಿತವಾಗದೆ ಜಿಲ್ಲೆಯ ಎಲ್ಲ ಭಾಗಗಳ ಜನರೂ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮ ರೂಪಿಸಬೇಕು. ಭಕ್ತರಿಗೆ ಉತ್ತಮ ದರ್ಶನ, ಮೂಲಸೌಕರ್ಯ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಜಾತ್ರೆಯ ಅಂಗವಾಗಿ ಜಿಲ್ಲೆಯ ಗ್ರಾಮೀಣ ಮತ್ತು ಸಾಂಸ್ಕೃತಿಕ ಕಲೆಗಳಿಗೆ ಆದ್ಯತೆ ನೀಡಲಾಗುವುದು. ಸೋಬಾನೆ ಹಾಡು, ರಂಗಗೀತೆ ಸೇರಿದಂತೆ ಸ್ಥಳೀಯ ಕಲಾ ಪ್ರಕಾರಗಳಿಗೆ ವೇದಿಕೆ ಕಲ್ಪಿಸಿ ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಹೊರಜಗತ್ತಿಗೆ ಪರಿಚಯಿಸುವ ಉದ್ದೇಶವಿದೆ ಎಂದು ಹೇಳಿದರು.ಹಾಸನದಲ್ಲಿ ಹಿಂದೆ ನಡೆಯುತ್ತಿದ್ದ ದನಗಳ ಜಾತ್ರೆಯ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಉತ್ತಮ ಹೋರಿ ಹಾಗೂ ಎತ್ತುಗಳ ಪ್ರದರ್ಶನ, ಬಹುಮಾನ ಮತ್ತು ಪ್ರಮಾಣಪತ್ರ ವಿತರಣೆ, ಎತ್ತಿನ ಓಟ, ಉತ್ತಮ ಟಗರುಗಳಿಗೆ ಬಹುಮಾನ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ರಂಗೋಲಿ ಸ್ಪರ್ಧೆ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ, ಡಿಎಫ್‌ಒ ಸೌರಭ್ ಕುಮಾರ್, ಜಿಪಂ ಸಿಇಒ ಶುಭಂ ಶುಕ್ಲಾ, ಎಡಿಸಿ ಕೃಷ್ಣಮೂರ್ತಿ, ಎಸಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ಅಧಿಕಾರಿಗಳು ಇದ್ದರು.
ಈ ಬಾರಿ ಹಾಸನಾಂಬೆ ಜಾತ್ರೆಗೆ ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ. ಇದು ಸಂಪೂರ್ಣವಾಗಿ ಸಾರ್ವಜನಿಕರ ಜಾತ್ರೆಯಾಗಬೇಕು ಎಂಬ ಉದ್ದೇಶದಿಂದ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟಪಡಿಸಿದರು. ಜಾತ್ರೆಯ ಯಶಸ್ವಿ ನಿರ್ವಹಣೆಗೆ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅಗತ್ಯವಿದ್ದಲ್ಲಿ ಇನ್ನಷ್ಟು ಸಮಿತಿಗಳನ್ನು ರಚಿಸಿ ಭಕ್ತರು ಹಾಗೂ ಸಾರ್ವಜನಿಕರನ್ನು ಒಳಗೊಳ್ಳಲಾಗುವುದು ಎಂದರು.
ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಮಾತನಾಡಿ, ಹಾಸನಾಂಬೆ ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಮಾಧ್ಯಮದವರು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದರೆ ಜಾತ್ರೆಯನ್ನು ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ನಡೆಸಲು ಸಾಧ್ಯವಾಗಲಿದೆ. ಜಿಲ್ಲೆಯ ಜನರು ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ತಿಳಿಸಿದರು.