ಭೂ ಕುಸಿತ ಉಂಟಾಗಿ ೨ ವರ್ಷ: ಶಾಶ್ವತ ಸಮಸ್ಯೆ ಕಲ್ಪಿಸಲು ಸ್ಥಳೀಯ ಆಗ್ರಹ

KannadaprabhaNewsNetwork | Published : Mar 7, 2025 12:49 AM

ಸಾರಾಂಶ

ಭೂಕುಸಿತವಾಗಿ ೨ ವರ್ಷ ಕಳೆಯುತ್ತಾ ಬಂದರೂ ಅಲ್ಲಿನ ಕಷ್ಟಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ.

ಶಿರಸಿ: ಭೂಕುಸಿತವಾಗಿ ೨ ವರ್ಷ ಕಳೆಯುತ್ತಾ ಬಂದರೂ ಅಲ್ಲಿನ ಕಷ್ಟಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಒಮ್ಮೆ ಜಾಗ ಪರಿಶೀಲಿಸಲು ಕೇಳಿಕೊಂಡರೂ ಇತ್ತ ಸುಳಿಯದ ಕಾರಣ ಊರಿನವರೇ ಒಗ್ಗಟ್ಟಾಗಿ ತಾತ್ಕಾಲಿಕ ಕಚ್ಚಾ ರಸ್ತೆ ನಿರ್ಮಿಸಿಕೊಂಡಿದ್ದು, ಮುಂದಿನ ಮಳೆಗಾಲದಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಮತ್ತಿಘಟ್ಟ ಭಾಗದ ಮಾಡನಮನೆ, ಉಂಬಳಕೇರಿ, ಗುಂಡಪ್ಪೆ, ನರಸೇಬೈಲ್ ಗ್ರಾಮಸ್ಥರು ಅಂಗಲಾಚಿಸುತ್ತಿದ್ದಾರೆ.

ಶಿರಸಿ ತಾಲೂಕು ಕೇಂದ್ರದಿಂದ ಸುಮಾರು ೩೨ ಕಿ.ಮೀ ದೂರದಲ್ಲಿರುವ ಮತ್ತಿಘಟ್ಟ ಸಮೀಪದ ಕೆಳಗಿನಕೇರಿಯ ಮಾಡನಮನೆ, ಉಂಬಳಕೇರಿ, ಗುಂಡಪ್ಪೆ, ನರಸೇಬೈಲ್ ಸೇರಿದಂತೆ ೬ಕ್ಕೂ ಅಧಿಕ ಹಳ್ಳಿಗಳಿಗೆ ಈ ರಸ್ತೆ ಮಾರ್ಗವೊಂದೇ ಸಂಪರ್ಕ ದಾರಿಯಾಗಿದ್ದು, ಮತ್ತಿಘಟ್ಟದಿಂದ ಕಿಮ್ಮಾಣಿ ಮೂಲಕ ಅಂಕೋಲಾ ತಾಲೂಕಿನ್ನು ಈ ರಸ್ತೆ ಸಂಪರ್ಕಿಸುತ್ತದೆಯಾದರೂ ಮಾರ್ಗದ ಅನೇಕ ಕಡೆಗಳಲ್ಲಿ ಸೇತುವೆ ಇರದ ಕಾರಣ ಮಳೆಗಾಲದಲ್ಲಿ ಮತ್ತಿಘಟ್ಟ ಭಾಗದ ಮೂಲಕ ಸಂಪರ್ಕ ಪಡೆದುಕೊಳ್ಳುವ ಅನಿವಾರ್ಯತೆ ಇಲ್ಲಿಯ ಸಿದ್ದಿ ಸಮುದಾಯದವರಿಗಿದೆ.

ಹಿಂದಿನ ಮಳೆಗಾಲ ಮತ್ತು ಕಳೆದ ಮಳೆಗಾಲದ ಜುಲೈ ತಿಂಗಳಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಈ ರಸ್ತೆಯಲ್ಲಿ ಭೂ ಕುಸಿತವಾಗಿ ರಸ್ತೆ ಸಂಪರ್ಕವೇ ಕಡಿದುಹೋಗಿದೆ. ರಸ್ತೆ ಇರದ ಕಾರಣ ಮಳೆಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾದವರನ್ನು ಈ ಹಳ್ಳಿಯ ಜನತೆ ಕಂಬಳಿಯಲ್ಲಿ ಕಟ್ಟಿ ಸುಮಾರು ೫ ಕಿ.ಮೀ. ಹೊತ್ತು ತಂದು ಆ ಬಳಿಕ ವಾಹನದ ಮೂಲಕ ಶಿರಸಿ ಆಸ್ಪತ್ರೆಗೆ ಕರೆತಂದಿದ್ದಾರೆ. ಇದೇ ರೀತಿ ಮರದಿಂದ ಬಿದ್ದ ವ್ಯಕ್ತಿಯನ್ನೂ ಇದೇ ರೀತಿ ಹೊತ್ತು ಸಾಗಿಸಿದ್ದಾರೆ.

ಘಟನೆ ನಡೆದು ೨೦ ದಿನಗಳ ಬಳಿಕ ಶಾಸಕರು, ಸಂಸದರು, ಉಪವಿಭಾಗಾಧಿಕಾರಿ ಸೇರಿದಂತೆ ಹಲವರಲ್ಲಿ ರಸ್ತೆ ರಿಪೇರಿ ಮಾಡಿಕೊಡುವಂತೆ ವಿನಂತಿಸಿದ್ದೇವೆ. ಆದರೆ, ಗ್ರಾಮಕ್ಕೆ ಯಾರೂ ಬಂದಿಲ್ಲ. ನಾವೇ ಅನಿವಾರ್ಯವಾಗಿ ರಸ್ತೆ ಕುಸಿದಲ್ಲೇ ಒಂದು ಜೀಪ್ ದಾಟಿಸಬಹುದಾದ ರಸ್ತೆಯನ್ನು ಮಾಡಿಕೊಂಡಿದ್ದೇವೆ. ಆದರೆ, ಇಲ್ಲಿಯ ಭೌಗೋಳಿಕ ಸ್ಥಿತಿ ಈ ಮಳೆಗಾಲದಲ್ಲಿ ಮತ್ತೆ ಭೂ ಕುಸಿತವಾಗಿ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳುವುದು ಖಚಿತ. ಹೀಗಾಗಿ, ಈಗಲಾದರೂ ಈ ಗ್ರಾಮಗಳಿಗೆ ಶಾಶ್ವತ ರಸ್ತೆ ನಿರ್ಮಿಸಿಕೊಡಿ ಎಂದು ಆಗ್ರಹಿಸಿದ್ದಾರೆ.

ಗುರುವಾರ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆ ಅವರಲ್ಲಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.

ಶಾಸಕರ ಆಪ್ತರು, ಸ್ಥಳೀಯ ಕಾರ್ಯಕರ್ತರು ಶಾಸಕರನ್ನು ಇಲ್ಲಿಗೆ ಕರೆತಂದು ನಮ್ಮ ಸಮಸ್ಯೆ ಅವರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ, ಈ ಕಾರ್ಯಕರ್ತರೇ ಶಾಸಕರಿಗೆ ಸೂಕ್ತ ಮಾಹಿತಿ ನೀಡದೇ ಅವರನ್ನು ದಾರಿ ತಪ್ಪಿಸಿದ್ದಾರೆ. ಶಾಸಕ ಭೀಮಣ್ಣ ನಾಯ್ಕ ಮತ್ತಿಘಟ್ಟಕ್ಕೆ ಬಂದಾಗ ಸಹ ಅವರನ್ನು ಇಲ್ಲಿಗೆ ಕಾರ್ಯಕರ್ತರು ಕರೆ ತಂದಿಲ್ಲ. ಇನ್ನು ಮೇಲಾದರೂ ಸಮರ್ಪಕ ರಸ್ತೆ ಮಾಡಿ ಈ ಮಳೆಗಾಲದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ನೀವು ಸಾಕಿದ ಕೋಳಿಯಲ್ಲ:

ಮತ್ತಿಘಟ್ಟಕ್ಕೆ ಶಾಸಕರು ಭೇಟಿ ನೀಡಿದಾಗ ಭೂ ಕುಸಿತದ ಉಂಟಾದ ಜಾಗಕ್ಕೆ ಕರೆತಂದು ಇಲ್ಲಿನ ಸಮಸ್ಯೆ ಬಗೆಹರಿಸಲು ರಾಮಚಂದ್ರ ಮರಾಠಿ ಅವರನ್ನು ವಿನಂತಿಸಿದೆವು. ನಾವು ಶಾಸಕರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗದ ಕಾರಣ ಅವರ ಬಳಿ ಹೇಳಿದಾಗ, ರಾಮಚಂದ್ರ ಮರಾಠಿ ತಮ್ಮ ಬಳಿ, ನೀವು ಸಾಕಿದ ಕೋಳಿಯಲ್ಲ. ನೀವು ಹೇಳದಾಂಗೆ ಬರಲು ಸಾಧ್ಯವಿಲ್ಲ ಎಂಬ ಉತ್ತರ ನೀಡಿದ್ದಾರೆ. ಈ ವರ್ಷ ಮಳೆಗಾಲದಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಮಾರ್ಗ ಸಂಪೂರ್ಣ ಕುಸಿದು ನಾವು ನಡುಗಡ್ಡೆಯಲ್ಲಿ ವಾಸಿಸುವಂತಾಗುತ್ತದೆ. ಶಾಸಕರು ಸ್ಪಂದಿಸಿ, ಅಧಿಕಾರಿಗಳ ಜತೆ ಭೇಟಿ ನೀಡಿ, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಬೇಕೆಂದು ಗೋಪಾಲ ಸಿದ್ದಿ ಮತ್ತಿತರರು ನೋವು ತೋಡಿಕೊಂಡರು.

ಭೂ ಕುಸಿತವಾಗಿ ಇಷ್ಟು ದಿನಗಳಾಗಿದ್ದರೂ ಶಾಸಕರು ಇಲ್ಲಿಗೆ ಆಗಮಿಸದಿರುವುದು ಖೇದಕರ. ಅಧಿಕಾರಿಗಳೊಂದಿಗೆ ಇಲ್ಲಿ ಬಂದು ಮುಂದಾಗಲಿರುವ ಸಮಸ್ಯೆ ತಪ್ಪಿಸಲು ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಪರಿಶೀಲಿಸಲಿ ಎನ್ನುತ್ತಾರೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ.

ಮಳೆಗಾಲಕ್ಕೆ ಇನ್ನು ಮೂರು ತಿಂಗಳು ಮಾತ್ರ ಬಾಕಿ ಇದೆ. ಕಳೆದ ವರ್ಷದಂತೆ ಅನಾರೋಗ್ಯ ಪೀಡಿತರನ್ನು ಮತ್ತೆ ಈ ವರ್ಷವೂ ಕಂಬಳಿಯಲ್ಲಿ ಕಟ್ಟಿ ಹೊರಬೇಕಾದ ಆತಂಕ ಎದುರಾಗಿದೆ. ನ್ಮಮ ಸಮಸ್ಯೆ ಬಗ್ಗೆ ಸ್ವತಃ ಶಾಸಕರಲ್ಲಿ ಹೇಳಿಕೊಂಡಿದ್ದೇವೆ, ಪರಿಹಾರ ಸಿಗಬಹುದು ಎಂದು ಕಾಯುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಗಣಪತಿ ಸಿದ್ದಿ.

ಚುನಾವಣೆ ಪ್ರಚಾರಕ್ಕೆ ಇಲ್ಲಿಗೆ ಕಾರ್ಯಕರ್ತರು ಬರುತ್ತಾರೆ. ಆದರೆ ಚುನಾವಣೆ ಮುಗಿದ ಮೇಲೆ ನಮ್ಮ ಸಮಸ್ಯೆ ಆಲಿಸಲು ಬರಲು ಅವರಿಗೆ ಸಮಯವಿರುವುದಿಲ್ಲ. ರಸ್ತೆ ನಿರ್ಮಿಸದಿದ್ದರೆ ನಮಗೆ ಬೇರೆಡೆ ವಾಸ್ತವ್ಯ ಮಾಡಲು ಜಾಗ ಕಲ್ಪಿಸಿಕೊಡಲಿ ಎನ್ನುತ್ತಾರೆ ಸ್ಥಳೀಯ ನಿವಾಸಿ ರೇಣುಕಾ ಸಿದ್ದಿ.

ಭೂ ಕುಸಿತವಾದ ಸ್ಥಳದಲ್ಲಿ ಬದಲಿ ರಸ್ತೆ ನಿರ್ಮಿಸಲು ಪಂಚಾಯಿತಿ ಅನುದಾನ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಶಾಸಕರಿಗೂ ಅರ್ಜಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಈಗಲಾದರೂ ಸಮಸ್ಯೆ ಅರಿತು ಮುಂದಾಗುವ ಸಮಸ್ಯೆ ತಪ್ಪಿಸಲಿ ಎನ್ನುತ್ತಾರೆ ದೇವನಳ್ಳಿ ಗ್ರಾಪಂ ಉಪಾಧ್ಯಕ್ಷೆ ಜಯಭಾರತಿ ಭಟ್ಟ.

Share this article