ಭೂ ಕುಸಿತ: ಮಣ್ಣಿನಡಿ ಸಿಲುಕಿದ್ದ ಮೃತದೇಹಗಳು ಪತ್ತೆ

KannadaprabhaNewsNetwork |  
Published : Apr 11, 2026, 01:30 AM IST
ಪೋಟೋ: 10ಎಚ್‌ಒಎಸ್‌01ಹೊಸನಗರ ತಾಲೂಕಿನ ನಗರ ಬಳಿಯ ಹುಲಿಕಲ್ ಘಾಟ್ ಸಂಚಾರ ಸಂಪೂರ್ಣ ನಿಷೇಧ ಹೇರಲಾಗಿದೆ. | Kannada Prabha

ಸಾರಾಂಶ

ಜಿಲ್ಲೆಯ ಹುಲಿಕಲ್ (ಬಾಳೇಬರೆ) ಘಾಟ್‌ನ ಹೇರ್ ಪಿನ್ ಕ್ರಾಸ್‌ನಲ್ಲಿ ನಡೆಯುತ್ತಿದ್ದ ಕಾಂಕ್ರೀಟ್ ವಾಲ್ ಕಾಮಗಾರಿ ವೇಳೆ ಸಂಭವಿಸಿದ ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿದ್ದ ಮೂರು ಮೃತದೇಹಗಳು ಪತ್ತೆಯಾಗಿವೆ.

ಕನ್ನಡಪ್ರಭ ವಾರ್ತೆ ಹೊಸನಗರ

ಜಿಲ್ಲೆಯ ಹುಲಿಕಲ್ (ಬಾಳೇಬರೆ) ಘಾಟ್‌ನ ಹೇರ್ ಪಿನ್ ಕ್ರಾಸ್‌ನಲ್ಲಿ ನಡೆಯುತ್ತಿದ್ದ ಕಾಂಕ್ರೀಟ್ ವಾಲ್ ಕಾಮಗಾರಿ ವೇಳೆ ಸಂಭವಿಸಿದ ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿದ್ದ ಮೂರು ಮೃತದೇಹಗಳು ಪತ್ತೆಯಾಗಿವೆ.

ಎಸ್‌ಡಿಆರ್‌ಎಫ್‌ (SDRF) ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಹೊಸನಗರದ ನಗರ ಹೋಬಳಿಯ ಚಕ್ಕಾರು ಗ್ರಾಮದ ರಾಘವೇಂದ್ರ, ಹಾವೇರಿ ಜಿಲ್ಲೆಯ ಶಬ್ಬೀರ್, ರಾಜು ಮೃತಪಟ್ಟು, ಮಣ್ಣಿನಡಿ ಮೃತದೇಹ ಸಿಲುಕಿದ್ದವು. ಗುರುವಾರ ರಾತ್ರಿ ಎರಡು ಮೃತ ದೇಹಗಳು ಪತ್ತೆಯಾಗಿದ್ದವು. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಾರ್ಮಿಕ ಶಬ್ಬೀರ್(40) ಮೃತದೇಹ ಪತ್ತೆ ಹಚ್ಚಿದ್ದಾರೆ. ಎಸ್‌ಡಿಆರ್‌ಎಫ್, ಅಗ್ನಿಶಾಮಕ ಹಾಗೂ ಪೊಲೀಸರು ನಡೆಸುತ್ತಿದ್ದ ರಕ್ಷಣಾ ಕಾರ್ಯ ಅಂತ್ಯವಾಗಿದ್ದು, ಮೂರು ಮೃತದೇಹವನ್ನು ನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಶಾಸಕ ಆರಗ ಭೇಟಿ: ಹುಲಿಕಲ್ ಘಾಟ್‌ನಲ್ಲಿ ಧರೆ ಕುಸಿದು, ಮೂವರು ಕಾರ್ಮಿಕರು ಸಾವನಪ್ಪಿದ್ದು, ಘಟನಾ ಸ್ಥಳಕ್ಕೆ ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಲಿಕಲ್ ಘಾಟ್‌ನ ಹೇರ್ ಪಿನ್ ಕ್ರಾಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಡೆಯಬಾರದ ಘಟನೆ ನಡೆದು ಹೋಗಿದೆ. ಆ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಆ ಕುಟುಂಬಗಳ ಜೊತೆ ನಾವಿರುತ್ತೇವೆ ಎಂದು ಸಾಂತ್ವನ ಹೇಳಿದರು.

ಹುಲಿಕಲ್ ಘಾಟ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ : ಭೂ ಕುಸಿತ ಸಂಭವಿಸಿದ ಬೆನ್ನಲ್ಲೇ ರಾಜ್ಯ ಹೆದ್ದಾರಿ-52ರ ಹುಲಿಕಲ್ ಘಾಟ್‌ನಲ್ಲಿ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಶಿವಮೊಗ್ಗ- ತೀರ್ಥಹಳ್ಳಿ- ನಗರ- ಹುಲಿಕಲ್ ಘಾಟ್- ಕುಂದಾಪುರ ಸಂಪರ್ಕಿಸುವ ರಸ್ತೆ ಇದಾಗಿದೆ. ಭಾರೀ ಪ್ರಮಾಣದಲ್ಲಿ ಭೂ ಕುಸಿತ ಆಗಿರುವ ಹಿನ್ನೆಲೆ ಮುಂದಿನ ಆದೇಶದವರೆಗೆ ಹುಲಿಕಲ್ ಘಾಟಿಯಲ್ಲಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಬಳಿಯ ಹುಲಿಕಲ್ ಘಾಟ್ ಕ‌ರಾವಳಿ ಮತ್ತು ಮಧ್ಯ ಕರ್ನಾಟಕಕ್ಕೆ ಸಂಪರ್ಕ ಕೊಂಡಿಯಾಗಿತ್ತು.

ತೀರ್ಥಹಳ್ಳಿಯ ಆಗುಂಬೆ ಘಾಟ್ ಮತ್ತು ಹೊಸನಗರ ತಾಲೂಕಿನ ನಿಟ್ಟೂರು, ನಾಗೋಡಿ ಘಾಟ್‌ನಲ್ಲಿ ಸಂಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಚ್ಚಮ್ಮ ದೇವಿಯ ವೈಭವದ ಮಹಾರಥೋತ್ಸವ
ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಪಾತ್ರ ಮಹತ್ವದ್ದು