ಎಡಕುಮೇರಿ- ಕಡಗರವಳ್ಳಿ ನಡುವೆ ಭೂಕುಸಿತ;ಬೆಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯ

KannadaprabhaNewsNetwork | Published : Jul 28, 2024 2:03 AM

ಸಾರಾಂಶ

ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ರೈಲ್ವೆ ಎಂಜಿನಿಯರ್‌ಗಳ ತಂಡ ಅಹರ್ನಿಶಿ ಕಾರ್ಯಾಚರಣೆ ನಡೆಸುತ್ತಿದೆ. ಘಾಟಿ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಸತತ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು ಸುಬ್ರಹ್ಮಣ್ಯ- ಸಕಲೇಶಪುರ ಮಾರ್ಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಈ ಮಾರ್ಗದ ಹಲವು ರೈಲುಗಳ ಪ್ರಯಾಣವನ್ನು ನಿರ್ದಿಷ್ಟ ಸಮಯ ವರೆಗೆ ಪೂರ್ಣ ರದ್ದುಪಡಿಸಲಾಗಿದೆ. ಅಲ್ಲದೆ ಕೆಲವು ರೈಲುಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.

ಜುಲೈ 27 ಮತ್ತು 28 ರಂದು ಪ್ರಯಾಣ ಆರಂಭಿಸುವ ರೈಲು ನಂ 16585 ಸರ್ ಎಂ ವಿಶ್ವೇಶ್ವರಯ್ಯ ಬೆಂಗಳೂರು ಮುರ್ಡೇಶ್ವರ ಎಕ್ಸ್‌ಪ್ರೆಸ್. ಜುಲೈ 28 ಮತ್ತು 29 ರಂದು ಪ್ರಯಾಣ ಆರಂಭಿಸುವ ರೈಲು ನಂ. 16586 ಮುರ್ಡೇಶ್ವರ- ಸರ್. ಎಂ. ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ . ಜುಲೈ 28 ರಂದು ಪ್ರಯಾಣ ಆರಂಭಿಸುವ ರೈಲು ನಂ. 06567 ಸರ್ ಎಂ ವಿಶ್ವೇಶ್ವರಯ್ಯ ಬೆಂಗಳೂರು - ಕಾರವಾರ ಎಕ್ಸ್‌ಪ್ರೆಸ್, ಜುಲೈ 28 ರಂದು ಪ್ರಯಾಣ ಆರಂಭಿಸುವ ರೈಲು ನಂ. 06568 ಕಾರವಾರ - ಸರ್. ಎಂ. ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್, ಜುಲೈ 27 ಮತ್ತು 28 ರಂದು ಪ್ರಯಾಣ ಆರಂಭಿಸುವ ರೈಲು ನಂ. 16595 ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್, ಜುಲೈ 28 ಮತ್ತು 29 ರಂದು ಪ್ರಯಾಣ ಆರಂಭಿಸುವ ರೈಲು ನಂ. 16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್.

ರೈಲು ಸಂಖ್ಯೆ 16596 ಕಾರವಾರ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಜುಲೈ 27 ರಂದು ಅಸ್ತಿತ್ವದಲ್ಲಿರುವ ಮಾರ್ಗ ಕಾರವಾರ, ಸುರತ್ಕಲ್, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಕೆಎಸ್‌ಆರ್ ಬೆಂಗಳೂರು ಮಾರ್ಗದ ಬದಲು ಕಾರವಾರ, ಸುರತ್ಕಲ್, ಮಂಗಳೂರು ಜಂಕ್ಷನ್ - ಶೋರ್ನೂರು, ಪಾಲಕ್ಕಾಡ್, ಪೊದನೂರ್, ಈರೋಡ್, ಸೇಲಂ, ಜೋಲಾರಪೇಟೆ ಮೂಲಕ ಪ್ರಯಾಣಿಸಿದೆ.ರೈಲು ನಂ. 16586 ಮುರ್ಡೇಶ್ವರ- ಸರ್. ಎಂ. ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ ಜುಲೈ 27 ರಂದು ಅಸ್ತಿತ್ವದಲ್ಲಿರುವ ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಮೈಸೂರು, ಕೆಎಸ್‌ಆರ್ ಬೆಂಗಳೂರು ಮಾರ್ಗ ಬದಲು ಮಂಗಳೂರು, ಶೋರ್ನೂರು, ಪಾಲಕ್ಕಾಡ್, ಪೊದನೂರು, ಈರೋಡ್, ಸೇಲಂ ಪೇಟೆ, ಜೋಲಾರ್‌ಪೇಟೆ ಮಾರ್ಗದಲ್ಲಿ ಪ್ರಯಾಣಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ರೈಲ್ವೆ ಎಂಜಿನಿಯರ್‌ಗಳ ತಂಡ ಅಹರ್ನಿಶಿ ಕಾರ್ಯಾಚರಣೆ ನಡೆಸುತ್ತಿದೆ. ಘಾಟಿ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಸತತ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹಾಗಿದ್ದರೂ ವಿವಿಧ ತಂಡಗಳು ಹಳಿಗೆ ಬಿದ್ದ ಮಣ್ಣನ್ನು ತೆರವುಗೊಳಿಸುವಲ್ಲಿ ನಿರತವಾಗಿದೆ. ಹಳಿಯ ಸಮೀಪ ಕೆಳಭಾಗದಲ್ಲೂ ಮಣ್ಣು ಸವಕಳಿ ಆಗಿರುವುದರಿಂದ ಮರಳ ಚೀಲ ಮತ್ತಿತರ ಸಾಧನಗಳನ್ನು ಬಳಸಿ ಹಳಿಯನ್ನು ಸುಸ್ಥಿತಿಗೆ ತರುವ ಕೆಲಸ ನಡೆಯುತ್ತಿದೆ. ಇನ್ನೂ ಒಂದೆರಡು ದಿನಗಳಲ್ಲಿ ಹಳಿ ಸಹಜ ಸ್ಥಿತಿಗೆ ಬಂದ ಬಳಿಕವೇ ಮತ್ತೆ ರೈಲುಗಳ ಓಡಾಟ ಆರಂಭಗೊಳ್ಳಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.ಶುಕ್ರವಾರ ರಾತ್ರಿ ಗುಡ್ಡು ಕುಸಿತದಿಂದ ಬೆಂಗಳೂರು ರೈಲು ಸಂಚಾರ ರದ್ದುಗೊಂಡ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಮಾರ್ಗ ರೈಲು ನಿಲ್ದಾಣದಲ್ಲಿ ಬಾಕಿಯಾದ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆ ಕುಡಿಯುವ ನೀರು ಹಾಗೂ ಆಹಾರವನ್ನು ಉಚಿತವಾಗಿ ಪೂರೈಸಿತ್ತು. ತಡರಾತ್ರಿ ಬಾಕಿಯಾದ ಪ್ರಯಾಣಿಕರನ್ನು ಎಂಟು ಬಸ್‌ಗಳ ಮೂಲಕ ಹಾಸನ, ಮೈಸೂರು ಮತ್ತು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕೆಸ್ಸಾರ್ಟಿಸಿ ಪುತ್ತೂರು ವಿಭಾಗೀಯ ಸಂಚಲನಾಧಿಕಾರಿ ಜೈಶಾಂತ್‌ ಕುಮಾರ್‌ ತಿಳಿಸಿದ್ದಾರೆ.ಶಿರಾಡಿ ಘಾಟ್ ಹೆದ್ದಾರಿಗೆ ಬೆಟ್ಟದಿಂದ ಕುಸಿದ ಬಂಡೆಕಲ್ಲು

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿನ ಶಿರಾಡಿ ಘಾಟ್ ಪ್ರದೇಶದಲ್ಲಿ ಗಡಿ ದೇವಸ್ಥಾನದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಬಂಡೆಕಲ್ಲೊಂದು ಬೆಟ್ಟದಿಂದ ಕುಸಿದು ಹೆದ್ದಾರಿಗೆ ಬಿದ್ದ ಘಟನೆ ಶನಿವಾರ ಸಂ‍ಭವಿಸಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ತಡೆಯುಂಟಾಯಿತು.

ಶಿರಾಡಿ ಘಾಟ್ ಪ್ರದೇಶದಲ್ಲಿನ ಬೆಟ್ಟದ ಮೇಲಿದ್ದ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಹೆದ್ದಾರಿಗೆ ಕುಸಿದು ಬಿತ್ತು. ಈ ಸಮಯದಲ್ಲಿ ಯಾವುದೇ ವಾಹನಗಳು ಬಂಡೆ ಕಲ್ಲಿಗೆ ಸಿಲುಕದೆ ಪವಾಡ ಸದೃಶ್ಯವಾಗಿ ಪಾರಾದವು. ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ಹೆದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿತ್ತು. ಈ ಮಧ್ಯೆ ಸಕಲೇಶಪುರ ಠಾಣಾ ವ್ಯಾಪ್ತಿಯ ದೋಣಿಗಲ್ ಎಂಬಲ್ಲಿಯೂ ಗುಡ್ಡ ಕುಸಿತ ಸಂಭವಿಸಿದ ಕಾರಣಕ್ಕೆ ಅಲ್ಲಿಂದಲೂ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಬಳಿಕ ಬಂಡೆಕಲ್ಲನ್ನು ಬದಿಗೆ ಸರಿಸುವ ಕಾರ್ಯಾಚರಣೆಯನ್ನು ಕೈಗೊಂಡು, ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ದೋಣಿಗಲ್‌ನಲ್ಲೂ ಮಣ್ಣು ತೆರವು ಮಾಡಿ ವಾಹನ ಸಂಚಾರ ಪುನರರಾಂಭಿಸಲಾಯಿತು.

Share this article