ಜಿಲ್ಲಾ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ
ಸಾಹಿತ್ಯ ಮತ್ತು ಭಾಷೆ ಎಂಬುದು ನಮ್ಮ ಪರಿಸರ, ಸಂಸ್ಕೃತಿ ಹಾಗೂ ಪರಂಪರೆಯ ಅವಿಭಾಜ್ಯ ಅಂಗಗಳಾಗಿವೆ. ಇವು ಒಂದು ಸಮಾಜದ ಬದುಕಿನ ಕ್ರಮ, ಆಚಾರ-ವಿಚಾರ, ನಂಬಿಕೆ, ಜೀವನಮೌಲ್ಯಗಳು ಹಾಗೂ ಐತಿಹಾಸಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಆದರೆ ಇಂದಿನ ಆಧುನಿಕ ಬದುಕಿನಲ್ಲಿ ನಾವು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಕಾಲಕಾಲಕ್ಕೆ ಅಂಗಿಯಂತೆ ಬದಲಾಯಿಸುತ್ತಿದ್ದೇವೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಭಾಷೆ, ಸಂಸ್ಕೃತಿಯನ್ನು ಬದಲಿಸಿಕೊಳ್ಳುವ ಭರದಲ್ಲಿ ನಮ್ಮ ಮೂಲ ಅಸ್ಮಿತೆಯನ್ನೇ ಮರೆಯುತ್ತಿದ್ದೇವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಚಿಂತಕ ಡಾ.ವೆಂಕಟಗಿರಿ ದಳವಾಯಿ ತಿಳಿಸಿದರು.
ನಗರದ ರಾಘವ ಕಲಾ ಮಂದಿರದಲ್ಲಿ ಜರುಗಿದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದು ನಮ್ಮ ಅಂತರಂಗದ ಭಾವನೆ, ಆಲೋಚನೆ ಮತ್ತು ಬದುಕಿನ ಅಭಿವ್ಯಕ್ತಿಯಾಗಿದೆ.ಭಾಷೆಯ ಮೇಲಿನ ಅಭಿಮಾನ ಕೇವಲ ಭಾಷಣ, ಘೋಷಣೆ ಹಾಗೂ ಆಚರಣೆಗಳಿಗೆ ಸೀಮಿತವಾಗಬಾರದು. ಅದು ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು. ಮನೆ, ಶಿಕ್ಷಣ, ಸಾಹಿತ್ಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಭಾಷೆಯ ಬಳಕೆಗೆ ಆದ್ಯತೆ ನೀಡಬೇಕು. ಹೊಸ ತಲೆಮಾರಿಗೆ ನಮ್ಮ ಭಾಷೆಯ ಶ್ರೀಮಂತಿಕೆ, ಸಾಹಿತ್ಯದ ಮಹತ್ವ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭಾಷೆ ಕೇವಲ ಸಂದರ್ಭಕ್ಕೆ ತಕ್ಕಂತೆ ತೊಡುವ ಅಂಗಿಯಾಗಬಾರದು; ಅದು ನಮ್ಮ ದೇಹದ ಚರ್ಮದಂತೆ ಬದುಕಿನ ಅವಿಭಾಜ್ಯ ಭಾಗವಾಗಬೇಕು. ಆಗ ಮಾತ್ರ ಭಾಷೆ ಮತ್ತು ಸಂಸ್ಕೃತಿಯ ಅಸ್ಮಿತೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ರಾಘವ ಮೆಮೊರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ.ಕೋಟೇಶ್ವರ ರಾವ್ ಮಾತನಾಡಿ, ಜಿಲ್ಲಾ ಸಮ್ಮೇಳನದ ವೇದಿಕೆ
ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಸಿ.ಜೆ.ಹಂಪಣ್ಣ, ಗಾಂಧಿಭವನದ ಕಾರ್ಯದರ್ಶಿ ಟಿ.ಜಿ.ವಿಠ್ಠಲ್, ಸೇರಿ ಕಸಾಪ ತಾಲೂಕು ಅಧ್ಯಕ್ಷರು ಇದ್ದರು. ಬಳಿಕ, ತೊಗಲುಗೊಂಬೆ ಪ್ರದರ್ಶನ, ಭರತನಾಟ್ಯ, ಗೀತ ಗಾಯನ, ಕನ್ನಡ ಗೀತೆಗಳು, ಭಾವೈಕ್ಯತೆ ನೃತ್ಯ ರೂಪಕ ಸೇರಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದಕ್ಕೂ ಮುನ್ನ ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಡಾ.ಬಿ.ಆರ್.ಮಂಜುನಾಥ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮಕಾಲೀನ ಸ್ಥಿತ್ಯಂತರ, ಪ್ರೊ.ಸಿ.ದೇವಣ್ಣ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ ಜಿಲ್ಲೆಯ ಜನಪದ, ಕೆ.ಎಂ.ಮಹೇಶ್ವರ ಸ್ವಾಮಿ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಚಳುವಳಿ ಪರಂಪರೆ ವಿಚಾರ ಗೋಷ್ಠಿ ನಡೆದವು. ನಂತರ ಡಾ.ಜಾಜಿ ದೇವೇಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.