ಕನ್ನಡಪ್ರಭ ವಾರ್ತೆ ಸೊರಬ
ಕವಿ. ಸಾಹಿತಿಗಳ ವೈಚಾರಿಕ ಚಿಂತನೆ ಅಳವಡಿಸಿಕೊಂಡು ಸಾಮಾಜಿಕ ಬದುಕಿನ ವಿಸ್ತಾರತೆ ಕಟ್ಟಿಕೊಂಡು ಶಿಕ್ಷಕ ವೃತ್ತಿ ಜೊತೆಗೆ ಸಾಮಾಜಿಕ ಪ್ರಜ್ಞೆಯೊಂದಿಗೆ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದೇನೆ. ತಮ್ಮನ್ನು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಇದರಿಂದ ಓದು ಮತ್ತು ಬರೆಯುವ ಆಸಕ್ತಿ ಇಮ್ಮಡಿಗೊಂಡಿದೆ ಎಂದು ಸಮಾಜ ಚಿಂತಕ ಟಿ.ರಾಜಪ್ಪ ಮಾಸ್ತರ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೊರಬ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಪ್ರಯುಕ್ತ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ವತಿಯಿಂದ ಅಭಿನಂದನೆ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಾವುದೇ ಸಾಹಿತ್ಯ ನಿಂತ ನೀರಲ್ಲ. ಹೊಸದನ್ನು ಆಹ್ವಾನಿಸುತ್ತ, ಹಳೆಯದನ್ನು ಮೆಲುಕು ಹಾಕುತ್ತೇವೆ. ವಿಜ್ಞಾನ ವಿಭಾಗ ವಿದ್ಯಾರ್ಥಿಯಾಗಿದ್ದ ಸಂದರ್ಭದಿಂದ, ಶಿಕ್ಷಕನಾಗಿ ನಿವೃತ್ತಿ ಹೊಂದಿದ ನಂತರವೂ ಸಮಾಜದ ಕೆಳಸ್ಥರದಲ್ಲಿ ಬದುಕುತ್ತಿರುವವರ ಪರವಾಗಿದ್ದೇನೆ. ಅವರ ಕಾಳಜಿ ಮತ್ತು ಚಳವಳಿ, ಕನ್ನಡ ಸಾಹಿತ್ಯ ಬಗೆಗಿನ ಆಸಕ್ತಿ ಮತ್ತು ಓದುವ ಹವ್ಯಾಸಕ್ಕೆ ಮುಪ್ಪು ಬಂದಿಲ್ಲ. ಸಾಹಿತಿ, ಪತ್ರಕರ್ತ ಪಿ.ಲಂಕೇಶ್ ಅವರ ಸಾಮಾಜಿಕ ಕಳಕಳಿಯ ಲೇಖನ ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ವೈಚಾರಿಕ ಕಥನಗಳು ನನ್ನ ಹಲವು ಚಳವಳಿಗಳ ಹೆಜ್ಜೆಗಳಿಗೆ ದಾರಿ ದೀವಿಗೆಯಾಗಿವೆ ಎಂದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಟಿ.ರಾಘವೇಂದ್ರ ಮಾತನಾಡಿ, ಸಮಾಜದ ಕೆಳಸ್ಥರದಲ್ಲಿ ಬದುಕುತ್ತಿರುವವರ ಪರ ಧ್ವನಿಯಾಗಿ ನಿಂತು, ಸಾಮಾಜಿಕ ಕಾಳಜಿ ಹೊಂದಿರುವ ರಾಜಪ್ಪ ಮಾಸ್ತರ್ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅರ್ಹತೆಗೆ ಸಂದ ಗೌರವವಾಗಿದೆ. ಈ ಮೂಲಕ ಕವಿ, ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರನ್ನು ಮಾತ್ರ ಆಯ್ಕೆ ಮಾಡಿ, ಪುರಸ್ಕರಿಸುತ್ತಿದ್ದ ಸಂಪ್ರದಾಯಕ್ಕೆ ಕೊಂಚ ಬಿಡುವು ನೀಡಿದಂತಾಗಿದೆ ಎಂದರು.
ಈ ಸಂದರ್ಭ ಶೇಖರಮ್ಮ ರಾಜಪ್ಪ ಮಾಸ್ತರ್, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಜಿಲ್ಲಾ ಉಪಾಧ್ಯಕ್ಷ ಎಸ್.ಜಿ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ದಿನಕರ ಭಟ್ ಭಾವೆ, ಸಹ ಕಾರ್ಯದರ್ಶಿ ಎಂ.ಎಲ್. ನೋಪಿ ಶಂಕರ, ಖಜಾಂಚಿ ಎಚ್.ಕೆ.ಬಿ. ಸ್ವಾಮಿ, ಸದಸ್ಯರಾದ ಎಸ್.ಎಂ. ನೀಲೇಶ್, ಎಂ.ಕೆ. ಮೋಹನ, ವಾಣಿಶ್ರೀ, ಪುರುಷೋತ್ತಮ, ತಾಲೂಕು ಕಸಾಪ ಅಧ್ಯಕ್ಷ ಪಾಣಿ ಶಿವಾನಂದ, ಸಮಾಜ ಸೇವಕ ಅಬ್ದುಲ್ ರಶೀದ್, ಇನಾಯತ್‌ವುಲ್ಲಾ ಮೊದಲಾದವರಿದ್ದರು.- - -
ಕೋಟ್‌ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲತೆ ಬೆಳೆಸಿಕೊಂಡು ಮುನ್ನಡೆಯಲು ತಾಲೂಕು ಪತ್ರಕರ್ತರ ಸಹಕಾರ, ಬೆಂಬಲ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸ್ನೇಹಿತರು ತಮ್ಮನ್ನು 9ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದರಿಂದ ಜವಾಬ್ದಾರಿ ಹೆಚ್ಚಿದೆ. ಜತೆಗೆ ವಯಸ್ಸು ಇಮ್ಮಡಿಗೊಂಡಿದೆ- ಟಿ.ರಾಜಪ್ಪ ಮಾಸ್ತರ್, ಸಮ್ಮೇಳನಾಧ್ಯಕ್ಷ
- - --01ಕೆಪಿಸೊರಬ01:
ಸೊರಬ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಟಿ.ರಾಜಪ್ಪ ಮಾಸ್ತರ್ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.