ಚಿತ್ರದುರ್ಗ: ಹೆಚ್ಚು ಓದು ಹಾಗೂ ಅಧ್ಯಯನ ಮಾಡಿದರೆ ಪತ್ರಕರ್ತರು ವರದಿಗಾರಿಕೆಗೆ ಜೀವ ತುಂಬಲು ಸಾಧ್ಯವೆಂಬ ಹಾದಿಯ ಲಂಕೇಶ್ ನಿಚ್ಚಳವಾಗಿಸಿದ್ದರೆಂದು ಚಿಂತಕ ಜೆ.ಯಾದವರೆಡ್ಡಿ ಹೇಳಿದರು.
ಕತೆಗಾರ ಜಡೆಕುಂಟೆ ಮಂಜುನಾಥ್ ಮಾತನಾಡಿ, ಲಂಕೇಶ್ ತಮ್ಮ ಬರವಣಿಗೆ ಮೂಲಕ ಒಂದು ತಲೆಮಾರಿನ ವೈಚಾರಿಕವಾಗಿ ಎಚ್ಚರಿಸಿದವರು. ಪ್ರಗತಿಪರವಾಗಿ ಆಲೋಚಿಸಿಸುವ ಬಹುದೊಡ್ಡ ಸಾಹಿತ್ಯ ವಲಯವನ್ನೇ ಸೃಷ್ಟಿಸಿದರು. ಪತ್ರಕರ್ತರಾಗಿ ನೇರ, ನಿಷ್ಟುರ ನಡೆಯಿಂದ ಸರ್ಕಾರಗಳಿಗೂ ಎಚ್ಚರಿಕೆಯಾಗಿದ್ದರು ಎಂದರು.
ಉಪನ್ಯಾಸಕ ಡಾ.ಗುರುನಾಥ್ ಮಾತನಾಡಿ, ಲಂಕೇಶ್ ಅವರು ಇಡೀ ಕರ್ನಾಟಕದ ಮೇಷ್ಟ್ರು ಆಗಿದ್ದರು. ಹುಟ್ಟುಹಬ್ಬದ ನೆಪದಲ್ಲಿ ಸ್ಮರಿಸುತ್ತಿರುವುದು ಔಚಿತ್ಯಪೂರ್ಣವಾದುದು. ಲಂಕೇಶರು ತಮ್ಮ ಸಾಹಿತ್ಯ ಕೃಷಿ, ಪತ್ರಿಕಾ ಕೃಷಿಯ ಮೂಲಕ ತಮಗೇ ಅರಿವಿಲ್ಲದೇ ನಾಡಿನಾದ್ಯಂತ ಆ ತಲೆಮಾರಿನ ಬರಹಗಾರರನ್ನು ಬೆಳೆಸಿದರು. ಧರ್ಮ, ರಾಜಕಾರಣ, ಜಾತಿ ಕುರಿತ ಅವರ ಗ್ರಹಿಕೆಗಳು ಅಪರೂಪದ ಒಳನೋಟ ಹೊಂದಿದ್ದವು ಎಂದರು.ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ, ಲಂಕೇಶ್ ಅವರು ಒಂದು ವಿಶ್ವ ವಿದ್ಯಾಲಯವಾಗಿದ್ದವರು. ಅವರ ಬಹುತೇಕ ಕೃತಿಗಳನ್ನು ಬೋಧಿಸಿದ ಹೆಗ್ಗಳಿಕೆ ನನಗಿದೆ. ಬೌದ್ಧಿಕ ಚಿಂತನೆಗಳ ಹೊಂದಿರುವ ಒಂದು ಪರಂಪರೆ ಬಿಟ್ಟು ಹೋಗಿದ್ದಾರೆ ಎಂದರು.
ಹಿರಿಯ ಪತ್ರಕರ್ತರಾದ ಎಂ.ಎನ್.ಅಹೋಬಲಪತಿ, ಕನ್ನಡ ಸಂಪಿಗೆ ತಿಪ್ಪೇಸ್ವಾಮಿ, ಗೌನಹಳ್ಳಿ ಗೋವಿಂದಪ್ಪ, ಮಲ್ಲಾಪುರ ಹರೀಶ್ ಇದ್ದರು.