ಕನ್ನಡಪ್ರಭ ವಾರ್ತೆ ಮಂಡ್ಯ
ಬೆಳಗ್ಗೆ ೯ ಗಂಟೆಗೆ ಆರಂಭವಾದ ಕಾರ್ಯಾಗಾರ ಸಂಜೆ ೫ ಗಂಟೆಯವರೆಗೆ ನಡೆಯಿತು. ಈ ಕಾರ್ಯಾಗಾರಕ್ಕೆ ಹಾಸನ, ಮೈಸೂರು, ಚಾಮರಾಜನಗರ, ಬೆಂಗಳೂರು, ರಾಮನಗರ, ಮಂಡ್ಯ, ದಾವಣಗೆರೆ, ತುಮಕೂರು ಸೇರಿದಂತೆ ಎಂಟು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಮೊದಲು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಗರ್ಭಕೋಶದ ಶಸ್ತ್ರಚಿಕಿತ್ಸೆ, ಅಂಡಾಶಯದ ಮೇಲಿನ ನೀರು ಗಂಟು, ಗರ್ಭದಲ್ಲಿ ಬೆಳೆದ ಗಡ್ಡೆಗಳು, ಗರ್ಭದ ಆರೋಗ್ಯ ಸಮಸ್ಯೆಗಳು ಸೇರಿದಂತೆ ಒಟ್ಟು ಎಂಟು ಶಸ್ತ್ರಚಿಕಿತ್ಸೆಗಳನ್ನು ಹೊಟ್ಟೆ ಛೇದನ ಮಾಡಿಯೇ ವೈದ್ಯರು ಶಸ್ತ್ರಚಿಕಿತ್ಸೆಗೆ ನಡೆಸಬೇಕಿತ್ತು.ಕಳೆದ ಮೂರ್ನಾಲ್ಕು ತಿಂಗಳಿನಿಂದ ಮಂಡ್ಯ ಮಿಮ್ಸ್‌ನಲ್ಲಿ ಈ ಶಸ್ತ್ರ ಚಿಕಿತ್ಸೆಗಳನ್ನು ಲ್ಯಾಪ್ರೋಸ್ಕೋಪಿ ಮೂಲಕವೇ ನಡೆಸಲಾಗುತ್ತಿದೆ. ಇದುವರೆಗೂ ಆಸ್ಪತ್ರೆಯಲ್ಲಿ ೫೫ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷ ಡಾ.ಆರ್.ಮನೋಹರ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಈ ವಿಧಾನದ ಶಸ್ತ್ರ ಚಿಕಿತ್ಸೆಯಿಂದ ರೋಗಿಯ ದೇಹದ ರಕ್ತಸ್ರಾವ ಕನಿಷ್ಠವಾಗಿರುತ್ತದೆ. ತೆರೆದ ಶಸ್ತ್ರ ಚಿಕಿತ್ಸೆಗಳಲ್ಲಿ ಮಾಡಿದ ದೇಹದ ಛೇದನಗಳಿಗೆ ಹೋಲಿಸಿದರೆ ತುಂಬಾ ಚಿಕ್ಕದಾಗಿದೆ. ರಕ್ತದ ನಷ್ಟವನ್ನು ಕಡಿಮೆ ಮಾಡುವುದಕ್ಕೆ ಅನುಕೂಲವಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ನೋವು ಮತ್ತು ರಕ್ತಸ್ರಾವದ ಅಪಾಯಗಳು ಕಡಿಮೆಯಾಗುತ್ತವೆ. ರೋಗಿಯನ್ನು ೨೪ ಗಂಟೆಯೊಳಗೆ ಮನೆಗೆ ಕಳುಹಿಸಬಹುದು. ಬೇಗ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು. ಗಾಯದ ಗುರುತು ಕೂಡ ಚಿಕ್ಕದಾಗಿರುತ್ತದೆ. ಗಾಯದ ಅಂಗಾಂಶಕ್ಕೆ ಸೋಂಕು ತಗುಲುವ ಸಾಧ್ಯತೆಗಳು ಕಡಿಮೆ ಇರುತ್ತದೆ ಎಂದರು.
ಲ್ಯಾಪ ರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆಯಲ್ಲಿ ಕೀ-ಹೋಲ್ ಮಾಡುವುದು ಹೇಗೆ, ಶಸ್ತ್ರ ಚಿಕಿತ್ಸೆಯ ಸಾಧನ-ಉಪಕರಣಗಳನ್ನು ಬಳಸುವ ಬಗೆ, ಶಸ್ತ್ರ ಚಿಕಿತ್ಸೆ ಸಮಯದಲ್ಲಿ ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ರೋಗಿಗೆ ನಡೆಸಲಾಗುವ ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರವನ್ನು ಮಿಮ್ಸ್ ಇಎನ್‌ಟಿ ಸಭಾಂಗಣದಲ್ಲಿ ಕಾರ್ಯಾಗಾರಕ್ಕೆ ಬಂದಿದ್ದ ವಿದ್ಯಾರ್ಥಿಗಳು ವೀಕ್ಷಿಸುವಂತೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿಂದಲೇ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಬಗೆಯನ್ನು ತಜ್ಞ ವೈದ್ಯರು ವಿವರಿಸಿದರು.
ಈ ಕಾರ್ಯಾಗಾರದಲ್ಲಿ ಬೆಂಗಳೂರು ಬಿಎಂಎಸ್ ಆಸ್ಪತ್ರೆಯ ಡಾ.ರಿಚಾಪಾಲ್, ಬೆಂಗಳೂರಿನ ಆರ್‌ವಿ ಆಸ್ಟರ್ ಆಸ್ಪತ್ರೆಯ ಡಾ.ಸುನಿಲ್ ಈಶ್ವರ್, ಮೈಸೂರು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಡಾ.ಟಿ.ಪ್ರತಾಪ್, ಡಾ.ಶಿವಾನಿ ಚಂದನ್, ಡಾ.ಸ್ಮತಿ ನಾಯಕ್, ಮಿಮ್ಸ್‌ನ ಪ್ರಸೂತಿ ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಎಚ್.ಸಿ.ಸವಿತಾ, ಆದಿ ಚುಂಚನಗಿರಿ ಮೆಡಿಕಲ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಮಹೇಂದ್ರ ಇತರರಿದ್ದರು.