ಬಳ್ಳಾರಿ: ಬಸ್‌ಗಳ ಮೇಲೆ ಅಂಟಿಸಲಾಗಿರುವ ತಂಬಾಕು ಉತ್ಪನ್ನಗಳಾದ ಪಾನ್ ಮಸಾಲ ಬಳಕೆಯ ಪ್ರಚೋದಕ ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಬಳಕೆಯ ಪ್ರಚೋದಕ ಜಾಹೀರಾತುಗಳನ್ನು ಹಾಕಲಾಗಿದೆ. ಇದಕ್ಕೆ ಅನುಮತಿ ಯಾರು ನೀಡಿದರು? ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಖಾಸಗಿ ಬಸ್‌ಗಳಾಗಿದ್ದರೂ ಸರಿಯೇ ಅವರೊಂದಿಗೆ ಚರ್ಚಿಸಿ ಕೂಡಲೇ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ತಂಬಾಕು ಬಳಕೆ ಗಣನೀಯ ನಿಯಂತ್ರಣಕ್ಕಾಗಿ ಶಾಲಾ ಕಾಲೇಜುಗಳು ಸೇರಿದಂತೆ ಗ್ರಾಪಂ ಮಟ್ಟದಲ್ಲಿಯೂ ತಂಬಾಕಿನಿಂದಾಗುವ ದುಷ್ಪರಿಣಾಮ ಕುರಿತು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಿಣಾಮಕಾರಿಯಾಗಿ ತಂಬಾಕು ನಿಯಂತ್ರಣ ಜಾರಿಗೆ ತರಬಹುದು. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವು ಸಹ ತಂಬಾಕು ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಅವರ ಭವಿಷ್ಯವು ಹಾಳಾಗುತ್ತಿದ್ದು, ಇದರ ಕುರಿತು ಜಿಲ್ಲಾ ಪಂಚಾಯತ್ ಹಾಗೂ ಇತರೆ ಇಲಾಖೆಗಳ ಸಹಕಾರದೊಂದಿಗೆ ಹಳ್ಳಿಗಳಲ್ಲಿಯೂ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಸೂಚಿಸಿದರು.ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಮುಂಭಾಗದಲ್ಲಿ ಕೋಟ್ಪಾ-2003ರ ಸೆಕ್ಷನ್-4 ಮತ್ತು ಸೆಕ್ಷನ್-6ಬಿ ನಾಮಫಲಕಗಳನ್ನು ಕಡ್ಡಾಯವಾಗಿ ಆಳವಡಿಸಬೇಕು ಎಂದು ಡಿಡಿಪಿಐ ಮತ್ತು ಡಿಡಿಪಿಯು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ. ಮಾತನಾಡಿ, ಬಳ್ಳಾರಿ ನಗರದ ಅಂದ್ರಾಳ್ ಬೈಪಾಸ್ ರಸ್ತೆಯ ವಿಕ್ಟೋರಿಯಾ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಧೂಮಪಾನ ಪ್ರದೇಶ ಸ್ಥಾಪಿಸಿದ್ದು, ಆದರೆ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಸಭೆಗೆ ತಿಳಿಸಿದರು. ಈ ಕುರಿತು ಕೂಡಲೇ ನೋಟಿಸ್ ಜಾರಿ ಮಾಡಬೇಕು ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ತಿಂಗಳು ಆಯೋಜಿಸಲಾಗುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕ ಕಾರ್ಯಕ್ರಮವಾದ ‘ತಿಂಗಳು ಸೊಬಗು’ ಕಾರ್ಯಕ್ರಮದಲ್ಲಿ ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸಲು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮನ್ವಯತೆ ಸಾಧಿಸಿ ಎಂದು ಅಪರ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸರೆಡ್ಡಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ವಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.