ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತರು ತಮ್ಮ ಬದುಕನ್ನು ಗಟ್ಟಿಗೊಳಿಸಲು ಸ್ವಾಮಿನಾಥನ್ ವರದಿ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸಲು ದೊಡ್ಡ ಮಟ್ಟದ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೂತನ ರೈತಸಂಘದ ಘಟಕವನ್ನು ಉದ್ಘಾಟಿಸಿ ಮಾತನಾಡಿ, ದೇಶ ಸದೃಢವಾಗಬೇಕಾದರೆ ಮೊದಲು ನಾವು ಅರ್ಥಿಕವಾಗಿ ಸಬಲರಾಗಬೇಕು. ಇದಕ್ಕಾಗಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು ಎಂದರು.
ಸ್ವಾಮಿನಾಥನ್ ಆಯೋಗದ ವರದಿ ಜಾರಿಯಿಂದ ರೈತರಿಗೆ ಆರ್ಥಿಕ ಬಲ ಸಿಗಲಿದೆ. ಯಾರೋ ಹೊರಗಿನಿಂದ ಬಂದು ನಮ್ಮ ಗ್ರಾಮಗಳನ್ನು ಸರಿಪಡಿಸಬೇಕಿಲ್ಲ. ಗ್ರಾಮದ ಯುವಕರೇ ಸಂಘಟಿತರಾಗಿ ಹೋರಾಟ ಮಾಡಬೇಕು. ಯುವಕರು ರಾಜಕೀಯ ಬಿಟ್ಟು ರೈತಸಂಘ ಸೇರಬೇಕು. ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.ಆನೆಗೊಳ ಗ್ರಾಪಂ ವ್ಯಾಪ್ತಿಯ ಆನೆಗೊಳ, ಚಿಕ್ಕತಾರಳ್ಳಿ, ಅಂಚೆಬೀರನಹಳ್ಳಿ ಸೇರಿ ಹಲವು ಗ್ರಾಮಗಳ 92 ಜನರನ್ನು ಹಸಿರು ಶಾಲು ಹಾಕಿ ರೈತ ಹೋರಾಟದ ದೀಕ್ಷೆ ನೀಡುವ ಮೂಲಕ ರೈತಸಂಘಕ್ಕೆ ಬರಮಾಡಿಕೊಂಡರು.
ರೈತಸಂಘ ಕೇವಲ ಹೋರಾಟದ ಸಂಘಟನೆಯಲ್ಲ. ರೈತರ ಬದುಕಿನ ಬದಲಾವಣೆ ಬಗ್ಗೆ ಚಿಂತಿಸುವ ಸಂಘಟನೆ. ರೈತಸಂಘ ಆರಂಭವಾದಾಗ ಇದ್ದ ರೈತರ ಸಮಸ್ಯೆಗಳಿಗೂ ಇಂದಿನ ಸಮಸ್ಯೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಜಾಗತೀಕರಣದ ನೀತಿಗಳ ಒತ್ತಡಕ್ಕೆ ರೈತರ ಬದುಕು ಸಿಲುಕಿದೆ ಎಂದರು.ಆಧುನಿಕ ಸಮಸ್ಯೆಗಳಿಗೆ ತಕ್ಕಂತೆ ರೈತಸಂಘದ ಹೋರಾಟವೂ ಬದಲಾಗಬೇಕಾಗಿದೆ. ರೈತರು ತಮ್ಮ ಕೃಷಿ ಪದ್ಧತಿಯಲ್ಲಿಯೂ ಬದಲಾವಣೆ ಮಾಡಿಕೊಳ್ಳಬೇಕು. ಉಳುವವನಿಗೆ ಭೂಮಿ ಎನ್ನುವ ಕಾಯ್ದೆ ರದ್ದಾಗಿದ್ದು, ಈಗ ಉಳ್ಳವರಿಗೆ ಭೂಮಿ ಎನ್ನುವ ನೀತಿ ಜಾರಿಯಾಗಿದೆ. ರೈತರು ಯಾವುದೇ ಕಾರಣಕ್ಕೂ ಹಣದ ಆಸೆಗೆ ಒಳಗಾಗಿ ತಮ್ಮ ಭೂಮಿ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ರಾಜಕೀಯ ಪಕ್ಷಗಳು ರೈತ ಸಮುದಾಯಕ್ಕೆ ವಿರುದ್ಧ:ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ದೇಶದ ಮಾಲೀಕರು ರೈತರು. ನಾವು ಬೆಳೆಯುವ ಅನ್ನದಿಂದಲೇ ಎಲ್ಲರ ಬದುಕು ನಡೆಯುತ್ತಿದೆ. ಆದರೆ, ರೈತರು ತಮ್ಮನ್ನು ತಾವು ದೊಡ್ಡವರೆಂದುಕೊಳ್ಳುವ ಬದಲು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಹಣವುಳ್ಳವರನ್ನು ದೊಡ್ಡವರೆಂದು ಬಿಂಬಿಸಲಾಗುತ್ತಿದೆ. ಇದು ಬದಲಾಗಬೇಕು ಎಂದರು.
ಇಂದಿನ ರಾಜಕೀಯ ಸಂಸ್ಕೃತಿ ರೈತರಿಗೆ ವಿರುದ್ಧವಾಗಿದೆ. ಇದಕ್ಕೆ ಯುವಕರಿಗೆ ಮೌಲ್ಯಗಳಿಗಿಂತ ಇತರ ವಿಚಾರಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದು. ರೈತನಿಗೆ ಜಾತಿ, ಧರ್ಮವಿಲ್ಲ. ಉಳುವವರೆಲ್ಲರೂ ರೈತ ಕುಲಕ್ಕೆ ಸೇರಿದವರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ರೈತ ಸಮುದಾಯಕ್ಕೆ ವಿರುದ್ಧವಾಗಿವೆ ಎಂದು ಕಿಡಿಕಾರಿದರು.ಕಾರ್ಪೋರೇಟ್ ಸಂಸ್ಥೆಗಳ 40,40,000 ಕೋಟಿ ಸಾಲಮನ್ನಾ ಮಾಡಲಾಗಿದೆ. ಆದರೆ, ರೈತರ ಸಾಲಮನ್ನಾ ಮಾಡಲು ನಮ್ಮ ಸರ್ಕಾರಗಳಿಗೆ ಮನಸ್ಸಿಲ್ಲ. ಕರ್ನಾಟಕದಲ್ಲಿ 79 ಲಕ್ಷ ರೈತ ಕುಟುಂಬಗಳಿವೆ. ರೈತರು ಒಗ್ಗಟ್ಟಾದರೆ ಪಾರ್ಲಿಮೆಂಟ್, ವಿಧಾನಸೌಧದಲ್ಲಿಯೂ ರೈತರ ಆಳ್ವಿಕೆಗೆ ಬರುತ್ತದೆ. ರೈತರೇ ದೇಶದ ಪ್ರಭುವಾದರೆ ನಮಗೆ ಬೇಕಾದ ರೈತ ನೀತಿಗಳನ್ನು ರೂಪಿಸಿಕೊಂಡು ರೈತರೇ ದೇಶದ ನಿಜವಾದ ಯಜಮಾನರಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಮುಖ್ಯಶಿಕ್ಷಕ ಆನೆಗೊಳ ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮುಖಂಡರಾದ ನಂದಿನಿ ಜಯರಾಂ, ಕೆ.ಆರ್.ಜಯರಾಮ್, ಎಲ್.ಬಿ.ಜಗದೀಶ್, ಬೂಕನಕೆರೆ ನಾಗರಾಜು, ಚೌಡೇನಹಳ್ಳಿ ಲತಾ, ಎ.ಆರ್.ಪುಟ್ಟರಾಜು, ಎನ್.ರಂಗಪ್ಪ, ಗದ್ದೆಹೊಸೂರು ಜಗದೀಶ್, ಎ.ಎನ್.ಚಾಮರಾಜೇಗೌಡ, ಕೆ.ಎನ್.ಮಂಜುನಾಥ್, ಎ.ಜಿ.ಮಂಜೇಗೌಡ, ಹಾಸನ ಜಿಲ್ಲಾ ರೈತಸಂಘದ ಅಧ್ಯಕ್ಷ ರಘು, ಕಾರ್ಯದರ್ಶಿ ಹರೀಶ್, ಕಾಮಾಕ್ಷಮ್ಮ ಸೇರಿದಂತೆ ಹಲವರು ಇದ್ದರು.