ಶಿರಹಟ್ಟಿ: ಕ್ಷೇತ್ರದ ಪ್ರತಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಜನ ಪ್ರಜ್ಞಾವಂತರಿರುವುದಿಲ್ಲ. ಕಾಮಗಾರಿ ಯಾವ ಯೋಜನೆಗೆ ಬರುತ್ತದೆ. ಕಾಮಗಾರಿಯ ಅಂದಾಜು ಮೊತ್ತ ಎಷ್ಟು. ಕಾಮಗಾರಿ ಮುಗಿಸುವ ಅವಧಿ ಮತ್ತು ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಯಾರು ಎಂದು ಪ್ರಶ್ನಿಸುವ ಮುನ್ನವೇ ಗುಣಮಟ್ಟದ ಕಾಮಗಾರಿ ಮಾಡಿ ಮುಗಿಸಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಕರೆ ನೀಡಿದರು.
ಶನಿವಾರ ಪಟ್ಟಣದ ೧೭ನೇ ವಾರ್ಡ್‌ನಲ್ಲಿ ₹೨೫ ಲಕ್ಷ ವೆಚ್ಚದಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಗ್ರಾಮಗಳಲ್ಲಿ ಕೈಗೆತ್ತಿಕೊಳ್ಳುತ್ತಿರುವ ಮೂಲಭೂತ ಸೌಕರ್ಯಗಳ ಕಾಮಗಾರಿಯ ಗುಣಮಟ್ಟ ಉತ್ಕೃಷ್ಟವಾಗಿರುವಂತೆ ಊರಿನ ಪ್ರಮುಖರು ಗಮನಹರಿಸಬೇಕು ಎಂದು ಹೇಳಿದರು.
ಸರ್ಕಾರದಿಂದ ಅಭಿವೃದ್ಧಿಗೆ ಸಮರ್ಪಕ ಅನುದಾನ ಬಿಡುಗಡೆಯಾಗುತ್ತಿಲ್ಲ. ಬಂದ ಅನುದಾನದಲ್ಲಿಯೇ ಶಿಕ್ಷಣ, ರಸ್ತೆ, ಆಸ್ಪತ್ರೆ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಈ ಕ್ಷೇತ್ರದ ಅಭಿವೃದ್ದಿಗೆ ಇನ್ನು ಹೆಚ್ಚಿನ ಅನುದಾನ ಬಿಡುಗಡೆ ಆಗಬೇಕಿದೆ.ಈ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಸಮಗ್ರ ತಾಲೂಕು ಅಭಿವೃದ್ದಿಗೆ ಬಿಡುಗಡೆಯಾಗುತ್ತಿರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ತ್ವರಿತಗತಿಯಲ್ಲಿ ಅಭಿವೃದ್ದಿ ಹೊಂದಲು ಸಾದ್ಯ ಎಂದು ತಿಳಿಸಿದರು.ಅಧಿಕಾರ ಶಾಶ್ವತವಲ್ಲ.ಒಳ್ಳೆಯ ಯೋಜನೆ ಇಟ್ಟುಕೊಂಡು ಸಮಾಜಮುಖಿ ಕಾರ್ಯ ಮಾಡುವಂತವರಿಗೆ ಸಮಾಜವು ಉನ್ನತ ಸ್ಥಾನಮಾನ ನೀಡಿ ಗೌರವಿಸುತ್ತದೆ. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಶಿರಹಟ್ಟಿ ಮೀಸಲು ಮತಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕೋಟಿಗಟ್ಟಲೆ ಅನುದಾನ ನೀಡಿತ್ತು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ಅಭಿವೃದ್ದಿ ಕಾರ್ಯಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದರು.
ತಾಲೂಕಿನಲ್ಲಿ ಮೊಟ್ಟಮೊದಲು ಸ್ತ್ರೀಶಕ್ತಿ ಭವನ ಕಾಮಗಾರಿ ನಡೆಯುತ್ತಿದೆ. ದೀರ್ಘ ಬಾಳಿಕೆ ಬರುವಂತಹ ಗುಣಮಟ್ಟದ ಕಾಮಗಾರಿ ನಡೆಯಬೇಕು. ಮಹಿಳೆಯರು ಈ ಭವನ ಹಾಳುಗೆಡವದೇ ಸಮಾಜಮುಖಿ ಕಾರ್ಯಚಟುವಟಿಕೆಗಳಿಗೆ ಬಳಕೆ ಮಾಡಿದಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಪಪಂ ಅಡಿಯ ಸಿಎ ಸೈಟ್‌ನಲ್ಲಿ ಭವನ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದರು.ಪಪಂ ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ, ಪರಮೇಶ ಪರಬ, ಸಂದೀಪ ಕಪ್ಪತ್ತನವರ, ಗೂಳಪ್ಪ ಕರಿಗಾರ, ಪರಶುರಾಮ ಡೊಂಕಬಳ್ಳಿ, ರಾಮಣ್ಣ ಕಂಬಳಿ, ಅಶೋಕ ವರವಿ, ನಂದಾ ಪಲ್ಲೇದ, ಅಕ್ಬರ ಯಾದಗಿರಿ, ಸಿಡಿಪಿಒ ಮೃತ್ತುಂಜಯ ಗುಡ್ಡದಾನವೇರಿ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಸಿ.ಪಿ. ಕಾಳಗಿ, ಮರಿಗೌಡ ಸುರಕೋಡ ಸೇರಿ ಇತರರು ಇದ್ದರು.