ಕನ್ನಡಪ್ರಭ ವಾರ್ತೆ ಮಂಗಳೂರು
ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ, ಕುಡುಪು ಅನಂತ ಪದ್ಮನಾಭ, ಮಾಣೂರು ಅನಂತ ಪದ್ಮನಾಭ ಸುಬ್ರಹ್ಮಣ್ಯ, ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ವಿವಿಧೆಡೆ ನಡೆದ ಷಷ್ಠಿ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.
ಕುಡುಪು ಕ್ಷೇತ್ರಕ್ಕೆ ಜನಸಾಗರ:ಕುಡುಪು ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿ ಮುಂಜಾನೆಯಿಂದಲೇ ಭಕ್ತಸಾಗರ ತುಂಬಿತ್ತು. ದೇವರಿಗೆ ಹಿಂಗಾರ, ಕೇದಗೆ, ಸಂಪಿಗೆ ಮಲ್ಲಿಗೆ ಹೂಗಳನ್ನು ಭಕ್ತರು ಅರ್ಪಿಸಿದರು. ಮಾತ್ರವಲ್ಲದೆ, ಚಿನ್ನ, ಬೆಳ್ಳಿ ಹರಕೆ ಅರ್ಪಿಸಿ, ತಂಬಿಲ, ಪಂಚಾಮೃತ ಸೇವೆ ಸಲ್ಲಿಸಿದರು.
ಅನಂತ ಪದ್ಮನಾಭ ದೇವರಿಗೆ ವಿವಿಧ ಸೇವೆ, ಪೂಜೆಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ದೇವರ ಬಲಿ ಹೊರಟು ಬ್ರಹ್ಮರಥ ಇರುವ ರಾಜಬೀದಿಗೆ ಆಗಮಿಸಿತು. ಬಳಿಕ ನಡೆದ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.
ಷಷ್ಠಿ ಮಹೋತ್ಸವ ಪ್ರಯುಕ್ತ ಕುಡುಪು ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಗೆ ಅನ್ನದ ರಾಶಿಗೆ ಪಲ್ಲಪೂಜೆ ಜರುಗಿ, ಬಳಿಕ ಅನ್ನಪ್ರಸಾದ ವಿತರಣೆ ಆರಂಭಗೊಂಡಿತು. ಸಂಜೆವರೆಗೆ 20 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ದೇವರಿಗೆ 15 ಸಾವಿರಕ್ಕೂ ಅಧಿಕ ತಂಬಿಲ, 6 ಸಾವಿರಕ್ಕೂ ಹೆಚ್ಚು ಪಂಚಾಮೃತ ಅಭಿಷೇಕ ಸೇವೆ ನಡೆಯಿತು.ಇಂದಿನ ವಿಶೇಷ: