ಶ್ರಾವಣ ಮಾಸದ ಕಡೇ ಶನಿವಾರ: ವಿವಿಧ ದೇಗುಲಗಳಲ್ಲಿ ಪೂಜೆ, ದೇವರ ಉತ್ಸವ

KannadaprabhaNewsNetwork |  
Published : Sep 01, 2024, 01:50 AM IST
31ಕೆಎಂಎನ್ ಡಿ16,17 | Kannada Prabha

ಸಾರಾಂಶ

ಶ್ರಾವಣ ಮಾಸದ ಕಡೆ ಶನಿವಾರದ ಹಿನ್ನೆಲೆಯಲ್ಲಿ ಪಾಂಡವಪುರ ಪಟ್ಟಣದ ಹಾರೋಹಳ್ಳಿ ಶ್ರೀಲಕ್ಷ್ಮಿನಾರಾಯಣಸ್ವಾಮಿ, ಧರ್ಮ ಶನೈಶ್ಚರಸ್ವಾಮಿ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿದ ದೇವಸ್ಥಾನಗಳಲ್ಲಿ ಪೂಜೆ ಹಾಗೂ ದೇವರ ಉತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶ್ರಾವಣ ಮಾಸದ ಕಡೆ ಶನಿವಾರದ ಹಿನ್ನೆಲೆಯಲ್ಲಿ ಪಟ್ಟಣದ ಹಾರೋಹಳ್ಳಿ ಶ್ರೀಲಕ್ಷ್ಮಿನಾರಾಯಣಸ್ವಾಮಿ, ಧರ್ಮ ಶನೈಶ್ಚರಸ್ವಾಮಿ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿದ ದೇವಸ್ಥಾನಗಳಲ್ಲಿ ಪೂಜೆ ಹಾಗೂ ದೇವರ ಉತ್ಸವ ನಡೆಯಿತು.

ಸುಮಾರು 600 ವರ್ಷಗಳ ಕಾಲ ಇತಿಹಾಸವಿರುವ ಹಾರೋಹಳ್ಳಿ ಶ್ರೀಲಕ್ಷ್ಮೀನಾರಯಣಸ್ವಾಮಿ ದೇವಸ್ಥಾನದಲ್ಲಿ ಪ್ರಾತಃಕಾಲ ಗಂಗಾ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭವಾಯಿತು. ಗಂಗೆಯಿಂದ ಮೂಲ ವಿಗ್ರಹ ಲಕ್ಷ್ಮೀನಾರಾಯಣಸ್ವಾಮಿ ಗರ್ಭಗುಡಿಯನ್ನು ಶುದ್ಧೀಕರಿಸಿದ ಬಳಿಕ ದೇವರ ವಿಗ್ರಹವನ್ನು ಬಗೆ ಬಗೆಯ ಹೂವುಗಳಿಂದ ಆಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಲಾಯಿತು.

ನಂತರ ದೇವರ ಉತ್ಸವಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಉತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಸಂಖ್ಯೆ ಭಕ್ತರು ಅಡ್ಡಪಲ್ಲಕ್ಕಿ ಹೊತ್ತು ಉದ್ಘೋಷಗಳೊಂದಿಗೆ ದೇವಸ್ಥಾನ ಪ್ರದಕ್ಷಿಣಿ ಹಾಕಿದರು. ಉತ್ಸವದಲ್ಲಿ ಪಾಲ್ಗೊಂಡ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಕ್ತರೊಂದಿಗೆ ದೇವರ ಪಲ್ಲಕ್ಕಿ ಉತ್ಸವಕ್ಕೆ ಹೆಗಲು ಕೊಟ್ಟು ಭಕ್ತಿ ಸಮರ್ಪಿಸಿದರು.

ಅನ್ನಸಂತರ್ಪಣೆ, ಪಟಾಕಿ ಸಿಡಿಸಿ ಸಂಭ್ರಮ:

ಕಡೆ ಶ್ರಾವಣ ಮಾಸದ ವಿಶೇಷ ಪೂಜೆ ಹಲವಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗಿದ್ದು, ಹಾರೋಹಳ್ಳಿ ಇಡೀ ಊರಿನ ಜನರು ದೇವರ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರು. ಸಾವಿರಾರು ಭಕ್ತರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಲಕ್ಷ್ಮೀನಾರಾಯಣಸ್ವಾಮಿ, ಭೂದೇವಿ ಮತ್ತು ಮಹಾಲಕ್ಷ್ಮೀ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ದೇವರ ಉತ್ಸವಮೂರ್ತಿಯ ಮೆರವಣಿಗೆ ಹೊರಟು ದೇವಸ್ಥಾನ ತಲುಪುವವರೆಗೂ ಪಟಾಕಿಗಳನ್ನು ಸಿಡಿಸಲಾಯಿತು. ಉತ್ಸವ ದೇವಸ್ಥಾನ ತಲುಪುತ್ತಿದ್ದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯತು.

ಬಾಯಿಬೀಗ ಹಾಕಿಸಿಕೊಂಡು ಹರಕೆ ಸಲ್ಲಿಕೆ:

ಕಷ್ಟ-ಕಾರ್ಪಣ್ಯಗಳ ಪರಿಹಾರಕ್ಕಾಗಿ ಹಾಗೂ ಸಂತಾನ ಭಾಗ್ಯ ಕರುಣಿಸುವಂತೆ ಹರಕೆ ಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಂಡು ವಿಶೇಷ ಪೂಜೆ ಸಲ್ಲಿಸಿದರು. ತಾನ ಪ್ರಾಪ್ತಿಗಾಗಿ ಹರಕೆ ಹೊತ್ತವರು ಉತ್ಸವದ ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಮಿಂದು ದೇವಸ್ಥಾನ ಪ್ರದಕ್ಷಿಣಿ ಹಾಕಿ ತಣ್ಣೀರು ಬಟ್ಟೆ ಮಡಿಯಲ್ಲಿ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸುವ ಮುತ್ತೈದೆಯರಿಂದ ಅನ್ನಪ್ರಸಾದವನ್ನು ಮಡಿಲಿಗೆ ಹಾಕಿಸಿಕೊಂಡು ಸೇವಿಸಿದರು. ಇದರಿಂದ ಸಂತಾನ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿ ಅಚಲವಾಗಿದೆ.

ಶನೈಶ್ಚರಸ್ವಾಮಿ ದೇವಸ್ಥಾನ ವಿಶೇಷ ಪೂಜೆ:

ಪಟ್ಟಣದ ಮಹಾಕಾಳೇಶ್ವರಿ ಬಡಾವಣೆಯಲ್ಲಿರುವ ಧರ್ಮ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಶ್ರವಣಮಾಸದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಕಂರ್ಯಗಳು ಜರುಗಿದವು. ದೇವಸ್ಥಾನವನ್ನು ವಿದ್ಯುತ್ ದೀಪಾಂಲಕಾರಗೊಳಿಸಿ ದೇವರ ವಿಗ್ರಹವನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೂ ಸಾವಿರಾರು ಸಂಖ್ಯೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಜರುಗಿತು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?