ದಿ. ದೇವರಾಜ ಅರಸು ವ್ಯಕ್ತಿತ್ವ ಆದರ್ಶನೀಯ: ಮಿಥುನ ಪಾಟೀಲ

KannadaprabhaNewsNetwork |  
Published : Aug 27, 2024, 01:30 AM IST
26 ರೋಣ 3. ಗುರುಭವನದಲ್ಲಿ ಜರುಗಿದ ದಿ.ದೇವರಾಜ ಅರಸು ಅವರ 109 ನೇ ಜಯಂತೋತ್ಸವ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಅರಸು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ ಹಿಂದುಳಿದ ವರ್ಗದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದರು ನೀಡಿದ್ದಾರೆ ಎಂದು ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ರೋಣ: ಸಾಮಾಜಿಕ ಪರಿವರ್ತನೆಯ ಹರಿಕಾರ, ಕರ್ನಾಟಕ ಕಂಡ ಶ್ರೇಷ್ಠ ನಾಯಕ, ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ವ್ಯಕ್ತಿತ್ವ ಆದರ್ಶನೀಯವಾಗಿದ್ದು, ತಮ್ಮ ಆಡಳಿತಾವಧಿಯಲ್ಲಿ ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ಸೋಮವಾರ ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜರುಗಿದ ದಿ. ದೇವರಾಜ ಅರಸು 109ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.ದಿ. ದೇವರಾಜ ಅರಸು ಅವರು ಅಂದಿನ ಕಾಲದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಉಳುವವನೇ ಒಡೆಯ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತಂದು, ಭೂ ರಹಿತ ಕೃಷಿ ಕಾರ್ಮಿಕರಿಗೆ ಜಮೀನಿನ ಮಾಲೀಕತ್ವ ದೊರೆಯುವಂತೆ ಮಾಡಿದರು. ದೂರದೃಷ್ಟಿ ಹೊಂದಿದ್ದ ಅರಸು ಅವರು ಯಾವುದೇ ರಾಜಕೀಯ ಒತ್ತಡಕ್ಕೆ ಅಂದು ಮಣೆಯಲ್ಲಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ ಹಿಂದುಳಿದ ವರ್ಗದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದರು. ಅವರ ಮಾರ್ಗದರ್ಶನದಲ್ಲಿ ಇಂದಿನ ರಾಜಕಾರಣಿಗಳು ನಡೆಯಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅರಸು ಮಾರ್ಗದಲ್ಲಿ ನಡೆಯುತ್ತಿರುವ ನಾಯಕರಾಗಿದ್ದಾರೆ. ಸ್ಥಳೀಯ ಶಾಸಕರಾದ ಜಿ. ಎಸ್. ಪಾಟೀಲ ಸಹ ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಕ್ಷೇತ್ರದಾದ್ಯಂತ ಜಾರಿಗೆ ತಂದಿದ್ದಾರೆ‌ ಎಂದರು.ಕಾರ್ಯಕ್ರಮದಲ್ಲಿ ಪ್ರಭಾಕರ ಉಳ್ಳಾಗಡ್ಡಿ ವಿಶೇಷ ಉಪನ್ಯಾಸ ನೀಡಿ, ಹಾವನೂರ ಸಮಿತಿ ವರದಿಯನ್ನು ಜಾರಿಗೆ ತಂದು ನಾಡು ಕಟ್ಟಿದ ಧೀಮಂತ ನಾಯಕ ದೇವರಾಜ ಅರಸು ಅವರಾಗಿದ್ದಾರೆ. ಅರಣ್ಯ ಸಂರಕ್ಷಣೆಗಾಗಿ ಅಂದು ಮುಖ್ಯಮಂತ್ರಿಗಳ ಬಳಿ ಇದ್ದ ಅರಣ್ಯ ಭೂಮಿ ಖಾಸಗಿ ಪರಭಾರೆ ಮಾಡುವ ಅಧಿಕಾರವನ್ನು ಶಾಸನ ಸಭೆಗೆ ಬಿಟ್ಟುಕೊಟ್ಟು ಮುಂಬರುವ ದಿನಮಾನಗಳಲ್ಲಿ ಅರಣ್ಯ ಒತ್ತುವರಿಯಾಗದಂತೆ ತಡೆಹಿಡಿದು ಕರ್ನಾಟಕದ ಅರಣ್ಯ ಭೂಮಿಯನ್ನು ರಕ್ಷಿಸಿದರು. ಸಾಫ್ಟ್ ವೇರ್ ಕ್ಷೇತ್ರ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಅರಸು ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಸಿದ್ದಾರೂಡ ಮಠದಿಂದ ಗುರುಭವನ ವರೆಗೆ ಸಾರೋಟದ ಮೂಲಕ ದಿ. ದೇವರಾಜ ಅರಸು ಅವರ ಭಾವಚಿತ್ರ ಮೇರವಣಿಗೆಯು ಡೊಳ್ಳು ಮೇಳದೊಂದಿಗೆ ಅದ್ಧೂರಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ. ನಾಗರಾಜ, ಎಚ್.ಎಸ್. ಸೋಂಪುರ, ಲೋಕೋಪಯೋಗಿ ಇಲಾಖೆಯ ಎಇಇ ಬಲವಂತ ನಾಯ್ಕರ, ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರ, ಬಿಸಿಎಂ ತಾಲೂಕು ಅಧಿಕಾರಿ ಮಲ್ಲಿಕಾರ್ಜುನ ಹಣಸಿ ಮುಂತಾದವರು ಉಪಸ್ಥಿತರಿದ್ದರು. ಡಿ.ಎಚ್. ವಸ್ತಾದ ನಿರೂಪಿಸಿದರು. ಶಿವಪುತ್ರಪ್ಪ ಕುಮಸಗಿ ವಂದಿಸಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ