ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಪಟ್ಟಣದಲ್ಲಿ ತಡರಾತ್ರಿ ಸರಣಿ ಕಳವಾಗಿದ್ದು, ಸಾರ್ವಜನಿಕರು, ಅಂಗಡಿ ಮಾಲೀಕರು ಆತಂಕಗೊಂಡಿದ್ದಾರೆ.ಇಲ್ಲಿನ ಸೆಸ್ಕ್ ಇಲಾಖೆಯಲ್ಲಿರುವ ಮನು ಅಚ್ಚಮಯ್ಯ ಅವರ ಕಾಂಪ್ಲೆಕ್ಸ್‌ನಲ್ಲಿರುವ ಸುರೇಶ್ ಕುಶಾಲಪ್ಪ ಅವರಿಗೆ ಸೇರಿದ ಹೊಗೆ ನಿಯಂತ್ರಣ ಕೇಂದ್ರದಲ್ಲಿ ನಿಲ್ಲಿಸಿದ್ದ ಬೈಕನ್ನು ಕದ್ದ ಕಳ್ಳರು ನಂತರ ಅಲ್ಲಿಂದ ನೇರವಾಗಿ ಬಸ್ ನಿಲ್ದಾಣದಲ್ಲಿರುವ ಪೆಟ್ರೋಲ್ ಬಂಕ್‌ಗೆ ನುಗ್ಗಿ, ಅಲ್ಲಿಂದ ಎರಡು ಪ್ಯಾಕೇಟ್ ವಾಹನದ ಆಯಿಲ್, ಅಲ್ಲೇ ಪಕ್ಕದಲ್ಲಿದ್ದ ಹಾಲಿನ ಡೈರಿ ಬೀಗ ಮುರಿದು 2000 ರು. ಹಣ ಕದ್ದಿದ್ದಾರೆ.ಅಲ್ಲಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಬದಿಯ ಪಟ್ಟಣ ಹೃದಯ ಭಾಗದಲ್ಲಿರುವ ಟೀನೇಜ್ ಸೆಲೆಕ್ಷನ್ ಬಟ್ಟೆ ಅಂಗಡಿಯ ಮುಂಭಾಗದ ಬಾಗಿಲು ಮುರಿದ ಕಳ್ಳರು, ಡ್ರಾಯರ್‌ನಲ್ಲಿದ್ದ 1 ಲಕ್ಷ ರು. ನಗದು, ಕೆಲ ಬಟ್ಟೆಗಳು ಹಾಗೂ ಕನ್ನಡಕಗಳನ್ನು ಕಳವು ಮಾಡಿದ್ದಾರೆ. ಹೊಸ ಪ್ಯಾಂಟ್, ಶರ್ಟ್ ಧರಿಸುತ್ತಿದ್ದಂತೆ ಅಂಗಡಿಯೊಳಗಿನ ಸೆನ್ಸಾರ್ ಬಲ್ಸ್ ಬೆಳಗಿದೆ. ಇದರಿಂದ ಹೆದರಿದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಅಂಗಡಿಯ ಮಾಲೀಕ ಒಳ ಕೋಣೆಯಲ್ಲಿ ನಿದ್ರೆಯಲ್ಲಿದ್ದರು.
ಅಲ್ಲಿಂದ ಮುಂದೆ ರಾಮ ಮೆಡಿಕಲ್ಸ್ ಮಾಲೀಕ ಕೆ.ಪಿ.ಜಗನ್ನಾಥ್ ಅವರ ಹಳೆಯ ಮನೆಯ ಬೀಗ ಮುರಿದು ಒಳ ನುಗ್ಗಿ ಎಲ್ಲ ಕಡೆ ತಡಕಾಡಿದ್ದಾರೆ. ಏನು ಸಿಗದೇ ಅಲ್ಲಿಂದ ಪಲಾಯನ ಮಾಡಿದ್ದಾರೆ.ಈ ಎಲ್ಲ ಕಳ್ಳತನ ತಡರಾತ್ರಿ 2.15ರಿಂದ 3.15ರ ಅವಧಿಯಲ್ಲಿ ಸಂಭವಿಸಿದ್ದು, ಸಾರ್ವಜನಿಕರು, ಅಂಗಡಿ ಮಾಲೀಕರು ಆತಂಕಗೊಂಡಿದ್ದಾರೆ.ಈ ಇಬ್ಬರು ಕಳ್ಳರಲ್ಲಿ ಒಬ್ಬನ ಮುಖ ಪೆಟ್ರೋಲ್ ಬಂಕ್‌ನ ಸಿಸಿ ಕ್ಯಾಮೆರಾದಲ್ಲಿ ಗೋಚರಿಸಿದೆ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಕಳ್ಳತನ ಸ್ಥಳಕ್ಕೆ ಅಪರಾಧ ಪತ್ತೆ ದಳದ ಸಬ್ ಇನ್‌ಸ್ಪೆಕ್ಟರ್ ಸ್ವಾಮಿ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.