ಪ್ರತಿ ಶನಿವಾರ ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಆಂದೋಲನ ಆರಂಭಿಸಲು ಸಚಿವ ಸವದಿ ಸೂಚನೆ

KannadaprabhaNewsNetwork |  
Published : Aug 08, 2026, 02:30 AM IST
ಶಿರಸಿ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳ ಅಧಿಕಾರಿ ಸಭೆ ನಡೆಯಿತು. | Kannada Prabha

ಸಾರಾಂಶ

ಶಿರಸಿ ನಗರದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಶುಕ್ರವಾರ ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳ ಅಧಿಕಾರಿ ಸಭೆ ನಡೆಯಿತು.

ಶಿರಸಿ: ಪ್ರತಿ ಶನಿವಾರ ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಆಂದೋಲನ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಬರ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೂಚಿಸಿದ್ದಾರೆ.

ನಗರದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳ ಅಧಿಕಾರಿ ಸಭೆಯಲ್ಲಿ ಅವರು ಮಾತನಾಡಿದರು. ತಿಂಗಳಲ್ಲಿ ಮೊದಲ ಶನಿವಾರ ಹಾಗೂ 4ನೇ ಶನಿವಾರ ಜಿಲ್ಲಾ ಬರ ಉಸ್ತುವಾರಿ ಸಚಿವರು ಆಂದೋಲನದಲ್ಲಿ ಪಾಲ್ಗೊಳ್ಳುತ್ತಾರೆ. ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬರುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸ್ಥಳೀಯ ಸಮಸ್ಯೆಗಳು ಹಾಗೂ ಹಾನಿಗಳ ಕುರಿತು ಈಗಾಗಲೇ ಸಭೆ ನಡೆದಿದ್ದು, ಅತಿವೃಷ್ಟಿ, ಅನಾವೃಷ್ಟಿ ಸಂಬಂಧಿಸಿದಂತೆ ತುರ್ತಾಗಿ ಎಲ್ಲರೂ ಕೆಲಸ ಮಾಡಬೇಕು. ಎಲ್ಲ ಇಲಾಖೆಗಳು ಸೇರಿ ಸಭೆ ನಡೆಸಿ, ವರದಿ ಸೋಮವಾರ ಸಲ್ಲಿಸಬೇಕು. ಅಗತ್ಯ ಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಕೋರಿಕೆ ಸಲ್ಲಿಸುತ್ತೇನೆ ಎಂದು ಹೇಳಿದರು.ಅತಿವೃಷ್ಟಿ, ಅನಾವೃಷ್ಟಿ, ಮಳೆ ಕೊರತೆ ಹಾಗೂ ಮಳೆಯಿಂದ ಆದ ಹಾನಿ ಕುರಿತು ಅವರು ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗಲೇ ಕಚೇರಿಗೆ ತೆರಳಿ, ಸಂಪೂರ್ಣ ಮಾಹಿತಿ ಸಲ್ಲಿಸಿ ಎಂದು ಸೂಚಿಸಿದರು. ನಿರಂತರವಾಗಿ ಅಧಿಕಾರಿಗಳು ಸ್ಥಳೀಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದು, ಸಾರ್ವಜನಿಕರ ಕುಂದು-ಕೊರತೆಗಳನ್ನು ಮತ್ತು ಅಹವಾಲುಗಳನ್ನು ಸ್ವೀಕರಿಸಿ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮುಂದಿನ ಸಭೆಯಲ್ಲಿ ಇಂಥ ಯಾವುದೇ ಸಾರ್ವಜನಿಕರ ದೂರುಗಳು ನಮಗೆ ಬರಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಶಾಸಕ ಶಿವರಾಮ ಹೆಬ್ಬಾರ್‌ ಮಾತನಾಡಿ, ಅರಣ್ಯ ಇಲಾಖೆ ಜನಸಾಮಾನ್ಯರೊಂದಿಗೆ ಬೆರೆವ ಇಲಾಖೆ. ಅರಣ್ಯ ಇಲಾಖೆ ಜನರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು. ಇಲ್ಲಿನ ಜನ ಅರಣ್ಯದ ಮಧ್ಯೆಯೇ ವಾಸಿಸುತ್ತಿದ್ದಾರೆ. ಜಿಪಿಎಸ್‌ ಆದ ಕಡೆಗಳ ಜನರಿಗೆ ಕಿರುಕುಳ ನೀಡಬೇಡಿ. ಅಧಿಕಾರಿಗಳು ಈ ಜಿಲ್ಲೆಗೆ ಹೊಂದಿಕೊಂಡು ಹೋಗಬೇಕು ಎಂದು ಹೇಳಿದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕೃಷಿ ಜಮೀನಿಗೆ ಹೋಗುವ ಜಾಗಗಳಿಗೆ ತೊಂದರೆ ನೀಡಬೇಡಿ. ದನ ಕರುಗಳ ಮೇವಿಗೆ ತೊಂದರೆ ಆಗಬಾರದು. ಜಮೀನುಗಳ ಒಳಗಡೆ ಹಾಕಿರುವ ಅಡಿಕೆ ಮರಗಳನ್ನು ಕೀಳಬೇಡಿ. ಹೊಸ ಅತಿಕ್ರಮಣವಾದರೆ ತೆಗೆಸಿ, ಯಾವುದೇ ತೊಂದರೆಯಿಲ್ಲ. ಹಿಂದಿನಿಂದ ಬಂದ ಅತಿಕ್ರಮಣಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ದಿಲೀಶ್ ಶಶಿ, ಎಸ್‌ಪಿ ದೀಪನ್ ಎಂ.ಎನ್., ಎಸಿ ಚಂದ್ರಶೇಖರ ಆರ್‌.ಜಿ., ತಹಸೀಲ್ದಾರ್ ಪಟ್ಟರಾಜಗೌಡ, ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಸಂಪತ್, ಸತೀಶ್ ನಾಯ್ಕ್, ಸುಮಾ ಉಗ್ರಾಣಕರ್, ಜಗದೀಶ್ ಗೌಡ ಇದ್ದರು.

ಹಾನಿ ವೀಕ್ಷಣೆ: ಇತ್ತೀಚೆಗೆ ಭಾರಿ ಮಳೆಯಿಂದ ಹಾನಿಗೊಳಗಾದ ಗೌಡಳ್ಳಿ ಭಾಗದ ಪ್ರದೇಶ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿದ್ದ ಸ್ಥಳಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ ನೀಡಿ, ಪರಿಶೀಲಿಸಿದರು. ಕೂಡಲೇ ಈ ರಸ್ತೆಗೆ ಸಿಡಿ ಅಳವಡಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3 ವರ್ಷದಿಂದ ಶುದ್ಧ ಕುಡಿವ ನೀರಿನ ಘಟಕ ಬಂದ್
ಜೀವಭಯದಲ್ಲೇ ಬಸ್‌ನಲ್ಲಿ ವಿದ್ಯಾರ್ಥಿಗಳ ಪ್ರಯಾಣ