ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೃತಕ ಬುದ್ಧಿಮತ್ತೆ(ಎಐ) ಆಧರಿತ ಕಲಿಕಾ ವೇದಿಕೆ ‘ಎಕ್ಸ್‌ಪರ್ಟ್ ಇ-ಲರ್ನ್’ ಅನ್ನು ಶನಿವಾರ ಅನಾವರಣಗೊಳಿಸಲಾಯಿತು.ಎಕ್ಸ್‌ಪರ್ಟ್ ಇ-ಲರ್ನ್, ಎಐ ಆಧರಿತ ಇಝಿ ಹಾಗೂ ವಿಸ್ತೃತ ಅಧ್ಯಯನದ ಎಕ್ಸ್‌ಪೆಡಿಷನ್ ಎನ್ನುವ ಕಲಿಕಾ ಆವಿಷ್ಕಾರಗಳನ್ನು ಇದು ಒಳಗೊಂಡಿದೆ.ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಎಕ್ಸ್‌ಪರ್ಟ್ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದಲ್ಲಿ ರಾಜಿಮಾಡದೆ ನಿರಂತರವಾಗಿ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದೆ. ಬಡ ಹಾಗೂ ಸಾಮಾನ್ಯ ಮಕ್ಕಳಿಗೆ ನೆರವಾಗುವಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದರೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಬಹುದು ಎಂದರು.
ಯುಕೆ ಆ್ಯಂಡ್ ಕೊ ಸ್ಥಾಪಕ ಕೆ.ಉಲ್ಲಾಸ್ ಕಾಮತ್ ಮಾತನಾಡಿ, ಶಿಕ್ಷಣ, ಆರೋಗ್ಯ, ಹಣಕಾಸು ಕ್ಷೇತ್ರದಲ್ಲಿ ಮಂಗಳೂರು ಹೆಸರಾಗಿದೆ. ಅದಕ್ಕೆ ಪೂರಕವಾಗಿ ಶಿಕ್ಷಣವನ್ನೇ ಸದಾ ಉಸಿರಾಡುವ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಇ-ಲರ್ನಿಂಗ್ ಆ್ಯಪ್ ಹೊರತರುವ ಮೂಲಕ ಶಿಕ್ಷಣವನ್ನು ಎಲ್ಲೆಡೆಗೆ ತಲಪಿಸುವುಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.ಇನ್ನೋರ್ವ ಅತಿಥಿ ರೋಬೋಸಾಫ್ಟ್ ಸ್ಥಾಪಕ ರೋಹಿತ್ ಭಟ್ ಮಾತನಾಡಿ, ಎಕ್ಸ್‌ಪರ್ಟ್ ಎನ್ನುವುದು ಪ್ರಬಲ ಬ್ರ್ಯಾಂಡ್ ಆಗಿ ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಈಗ ಹೊರತಂದಿರುವ ಇ-ಲರ್ನ್ ಆ್ಯಪ್ ಒಂದು ಕ್ರಾಂತಿಕಾರಿ ವೇದಿಕೆಯಾಗಿದ್ದು, ಇದನ್ನು ಖುಷಿಯೊಂದಿಗೆ-ಕಲಿಕೆ(ಗೇಮಿಫಿಕೇಶನ್) ಆಗಿ ರೂಪುಗೊಳಿಸುವುದು ಸಾಧ್ಯವಾದರೆ ಹೆಚ್ಚು ಮಕ್ಕಳಿಗೆ ತಲಪುವುದಕ್ಕೆ ಸಾಧ್ಯವಿದೆ ಎಂದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅಧ್ಯಕ್ಷತೆ ವಹಿಸಿ, ಶಿಕ್ಷಕರಿಂದಲೇ ಎಕ್ಸ್‌ಪರ್ಟ್ ಈ ರೀತಿಯ ಪ್ರಗತಿ ಸಾಧಿಸುವುದು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿ ತಪ್ಪುಗಳಾಗುವುದು ಸಹಜ. ಆದರೆ ಈ ನೂತನ ಇ-ಲರ್ನ್ ಆ್ಯಪ್ ಮೂಲಕ ತಪ್ಪುಗಳನ್ನು ಸರಿಪಡಿಸಿಕೊಂಡು ಪೂರ್ಣತೆಯತ್ತ ಸಾಗಲು ನೆರವಾಗಲಿದೆ ಎಂದರು.ಸಂಸ್ಥೆಯ ಉಪಾಧ್ಯಕ್ಷೆ ಉಷಾಪ್ರಭಾ ನಾಯಕ್ ಅವರು ಎಕ್ಸ್‌ಪೆಡಿಷನ್ ಕಲಿಕಾ ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದರು.ಮುಂದಿನ ವರ್ಷ ಮುಕ್ತ ಮಾರುಕಟ್ಟೆಗೆ: ಅಂಕುಶ್ ನಾಯಕ್‌ಎಕ್ಸ್‌ಪರ್ಟ್‌ನ ಐಟಿ ನಿರ್ದೇಶಕ ಅಂಕುಶ್ ನಾಯಕ್ ಪ್ರಸ್ತಾವಿಕದಲ್ಲಿ, ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಹಾಗೂ ಹೆಚ್ಚು ಮಂದಿಗೆ ಲಭಿಸುವಂತಾಗಲು ಇ-ಲರ್ನ್ ವೇದಿಕೆ ನೆರವಾಗಲಿದೆ. ಇದು ಕೇವಲ ಆಂಗ್ಲ ಭಾಷೆಯಷ್ಟೇ ಅಲ್ಲ, ಕನ್ನಡ, ಸಂಸ್ಕೃತ, ಹಿಂದಿ ಮತ್ತಿತರ ಭಾಷೆಗಳಲ್ಲೂ ಲಭ್ಯವಿದ್ದು, ಹೆಚ್ಚು ವಿದ್ಯಾರ್ಥಿಗಳನ್ನು ತಲಪುವುದಕ್ಕೆ ಸಾಧ್ಯವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇದನ್ನು ಮುಕ್ತ ಮಾರುಕಟ್ಟೆಗೆ ಪೂರೈಸಲಾಗುವುದು ಎಂದರು.ಇಝಿ ಎಐ ನೆರವಿನಿಂದ ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕಾ ಯೋಜನೆ ಸಿದ್ಧಗೊಳಿಸುವುದಷ್ಟೇ ಅಲ್ಲ, ಅವರ ಕಲಿಕೆಯ ವೇಗಕ್ಕನುಗುಣವಾಗಿ ಈ ಯೋಜನೆಯನ್ನು ಪ್ರತಿ ವಾರವೂ ಸ್ವಯಂ ಪರಿಷ್ಕರಣೆಗೆ ಒಳಪಡಿಸುತ್ತದೆ. ಪ್ರತಿ ವಿಷಯದಲ್ಲೂ 10 ನಿಮಿಷದ ವಿಡಿಯೋ ಇದ್ದು, ವಿಡಿಯೋ ಪಾಠದ ನಡುವೆ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯು ಪ್ರಶ್ನೆ ಕೇಳುತ್ತದೆ. ಪ್ರಶ್ನೆಗೆ ಉತ್ತರಿಸಿದರೆ ಮಾತ್ರ ವಿಡಿಯೋ ಮತ್ತೆ ಮುಂದುವರಿಯುತ್ತದೆ, ಇಲ್ಲದಿದ್ದರೆ ಮೊದಲಿನಿಂದಲೇ ಪ್ಲೇ ಮಾಡಿ ಮನನ ಮಾಡಬೇಕು. ತರಗತಿಯಲ್ಲಿ ಅಧ್ಯಾಪಕರು ಪ್ರಶ್ನೆ ಕೇಳಿದಂತೆ ಇಲ್ಲಿಯೂ ಕೇಳಲಾಗುತ್ತದೆ ಎಂದರು.