ರಾ.ರಾ. ರಂಗಸಮೂಹದ ಕ್ರಿಯಾಶೀಲ ಚಟುವಟಿಕೆಗಳು ನಿರಂತರ ನಡೆಯುತ್ತಿದ್ದು, ಮುಂದೆಯೂ ನಡೆಯುತ್ತಿರಲಿ.
ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಶ್ರೀ ರಾಜರಾಜೇಶ್ವರೀ ರಂಗ ಸಮೂಹವು ಸಪ್ರಕ ಬೆಂಗಳೂರು ಇವರ ಸಹಯೋಗದಲ್ಲಿ ೩ ದಿನಗಳ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಂಡಿದ್ದು, ರಾ.ರಾ. ರಂಗಮಂದಿರದಲ್ಲಿ ಇತ್ತೀಚೆಗೆ ಆರಂಭಗೊಂಡ ಸಂಸ್ಕೃತಿ ಉತ್ಸವಕ್ಕೆ ತಾನ್‌ಸೇನ್ ಪ್ರಶಸ್ತಿ ಪುರಸ್ಕೃತ ಪಂ. ಗಣಪತಿ ಭಟ್ಟ ಹಾಸಣಗಿ ಚಾಲನೆ ನೀಡಿದರು.
ಅಭ್ಯಾಗತರಾಗಿದ್ದ ಹಿರಿಯ ಸಹಕಾರಿ ಆರ್.ಎನ್. ಹೆಗಡೆ ಗೋರ್ಸಗದ್ದೆ ಮಾತನಾಡಿ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗಕರ್ಮಿ ಕೆ.ವಿ. ಸುಬ್ಬಣ್ಣ ಅವರ ಆಶಯದಂತೆ ನಿರ್ಮಾಣಗೊಂಡ ಮಂಚಿಕೇರಿಯ ರಂಗಮಂದಿರದಲ್ಲಿ ನೀನಾಸಂ ನಾಟಕಗಳೂ ಸೇರಿದಂತೆ ಅಸಂಖ್ಯಾತ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡಿವೆ. ರಾ.ರಾ. ರಂಗಸಮೂಹದ ಕ್ರಿಯಾಶೀಲ ಚಟುವಟಿಕೆಗಳು ನಿರಂತರ ನಡೆಯುತ್ತಿದ್ದು, ಮುಂದೆಯೂ ನಡೆಯುತ್ತಿರಲಿ ಎಂಬ ಆಶಯ ವ್ಯಕ್ತಪಡಿಸಿದರು. ರಂಗ ಸಮೂಹದ ಅಧ್ಯಕ್ಷ ಆರ್.ಎನ್. ಭಟ್ಟ ಧುಂಡಿ ಮಾತನಾಡಿ, ಇಂದು ಆರಂಭಗೊಂಡ ಸಂಸ್ಕೃತಿ ಉತ್ಸವದಲ್ಲಿ ಎರಡು ನೀನಾಸಂ ನಾಟಕಗಳು ಹಾಗೂ ನಿರ್ದಿಗಂತ ಮೈಸೂರು ಇವರ ಮಂಟೆಸ್ವಾಮಿ ಕಾವ್ಯ ಪ್ರಯೋಗ ನಾಟಕ ಪ್ರದರ್ಶನಗೊಳ್ಳಲಿದೆ. ನೀನಾಸಂ ರಂಗಕಾರ್ಯಕ್ಕೆ ೭೫ ವರ್ಷ ತುಂಬಿದ್ದು, ನೀನಾಸಂ ತಿರುಗಾಟಕ್ಕೆ೨೫ ವರ್ಷಗಳು ಸಂದಿವೆ. ಸಹೃದಯ ಕಲಾಭಿಮಾನಿಗಳು ನಮ್ಮ ಪ್ರಯತ್ನವನ್ನು ಬೆಂಬಲಿಸುತ್ತಿರುವುದು ಸಂತಸ ತಂದಿದೆ ಎಂದರು.ಜಿ.ಎನ್. ಶಾಸ್ತ್ರಿ ಜೋಗಭಟ್ರಕೇರಿ ಮಾತನಾಡಿ, ಇಂದು ಪ್ರದರ್ಶನಗೊಳ್ಳಲಿರುವ ನಾಟಕ ಮತ್ತು ಮುಂದಿನ ೨ ನಾಟಕಗಳ ಕುರಿತಾಗಿ ಸಂಕ್ಷಿಪ್ತವಾಗಿ ವಿಮರ್ಶಿಸಿದರು. ರಂಗ ಸಮೂಹದ ಸಂಚಾಲಕ ಎಂ.ಕೆ. ಭಟ್ಟ ಯಡಳ್ಳಿ ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶ ಭಟ್ಟ ನಿರ್ವಹಿಸಿ, ವಂದಿಸಿದರು. ನಂತರ ನೀನಾಸಂ ತಿರುಗಾಟ ತಂಡದ ಕಲಾವಿದರು ಭವಭೂತಿ ರಚನೆಯ ಸಂಸ್ಕೃತ ನಾಟಕವನ್ನು(ಕನ್ನಡ ರೂಪ ಮತ್ತು ನಿರ್ದೇಶನ: ಅಕ್ಷರಾ ಕೆ.ವಿ.) ಸುಂದರವಾಗಿ ಪ್ರಸ್ತುತಪಡಿಸಿದರು. ಅಕ್ಷಿತ್ ನಂದಗೋಕುಲ, ಅಶೋಕ ಕುಮಾರ, ಮುಂಡ, ಇಂದು ಡಿ., ಓಂಕಾರ ಮೇಗಳಾಪುರ, ಕವಿತಾ ಕೆ.ಎಚ್., ಕೃಷ್ಣಾ ಅಶೋಕ ಬಡಿಗೇರ, ಎಂ.ಎಚ್. ಗಣೇಶ, ದುಂಡೇಶ ಹಿರೇಮಠ, ಪೂಜಿತಾ ಹೆಗಡೆ, ಮಮತಾ ಕಲ್ಮಕಾರ, ಕುಣಿಗಲ್ ರಂಗ, ವಿನೋದ ಕುಮಾರ್, ಮಹಾಂತೇಶ ಬೆಳ್ಳಕ್ಕಿ ಮುಂತಾದವರು ನಾಟಕದ ಹಿನ್ನೆಲೆಯಲ್ಲಿ ಭಾಗವಹಿಸಿದ್ದರು. ನಾಟಕಕ್ಕೆ ವಿನ್ಯಾಸ ಮತ್ತು ಸಂಗೀತವನ್ನು ವಿದ್ಯಾ ಹೆಗಡೆ, ಭಾರ್ಗವ ಕೆ.ಎನ್., ಎಂ.ಎಚ್. ಗಣೇಶ ನೀಡಿದ್ದಾರೆ. ವಿಶ್ವಶಕ್ತಿ ದೇವಸ್ಥಾನದಲ್ಲಿ ರಥೋತ್ಸವ ಇಂದು
ಭಟ್ಕಳ: ತಾಲೂಕಿನ ಅಳ್ವೆಕೋಡಿಯ ವಿಶ್ವಶಕ್ತಿ ದೇವಸ್ಥಾನದಲ್ಲಿ ನ. 28ರಂದು ನೂತನ ರಥ ಸಮರ್ಪಣೆ ಮತ್ತು ತೃತೀಯ ವರ್ಷದ ವರ್ಧಂತ್ಯುತ್ಸವ ನಡೆಯಲಿದೆ.ನ. 28ರಂದು ಬೆಳಗ್ಗೆ ಕಲಾಹವನ, ನವಚಂಡಿಕಾ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ದೇವಿಯ ನೂತನ ರಥೋತ್ಸವ ಜರುಗಲಿದೆ.ವರ್ಧಂತ್ಯುತ್ಸವದ ಮತ್ತು ರಥೋತ್ಸವದ ಧಾರ್ಮಿಕ ಕೈಂಕರ್ಯಗಳು ಕುಮಾರ ಶಾಸ್ತ್ರಿ ಮತ್ತು ಸುಬ್ರಹ್ಮಣ್ಯ ಭಟ್ಟ ಅವರ ನೇತೃತ್ವದಲ್ಲಿ ಜರುಗಲಿದೆ. ಸಂಜೆ ಭಜನೆ, ರಾತ್ರಿ 8 ಗಂಟೆಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ, 8.30ಕ್ಕೆ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಊರಿನ ನಾಗರಿಕರಿಂದ ಮಾತು ಬಿದ್ದಿತು ಮೌನ ಗೆದ್ದಿತು ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ದೇವಿದಾಸ ಸ್ವಾಮಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.