ಕನ್ನಡಪ್ರಭ ವಾರ್ತೆ ಮಡಿಕೇರಿ ನಾಡಿನ ಕಲೆ, ಸಂಸ್ಕೃತಿ, ಭಾಷೆ, ಜಾನಪದವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಾಗಬೇಕು. ಇದರಿಂದ ಉತ್ತಮ ಸಂಸ್ಕೃತಿ ಮತ್ತು ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಕುಂದಚೇರಿ, ಭಾಗಮಂಡಲ ಮತ್ತು ಅಯ್ಯಂಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಸುವರ್ಣ ಕರ್ನಾಟಕ 50 ರ ಸಂಭ್ರಮ ಪ್ರಯುಕ್ತ ಚೆಟ್ಟಿಮಾನಿ ಗ್ರಾಮಸಿರಿ ಆಚರಣಾ ಸಮಿತಿ ಸಹಯೋಗದೊಂದಿಗೆ ಚೆಟ್ಟಿಮಾನಿ ಶಾಲಾ ಮೈದಾನದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಸಭಾಮಂಟಪದ ಮೇಜರ್ ಮಂಗೇರಿರ ವಿನೋದ್ ಮುತ್ತಣ್ಣ ಅವರ ಮುಖ್ಯ ವೇದಿಕೆಯಲ್ಲಿ ಗುರುವಾರ ನಡೆದ ‘ಗ್ರಾಮಸಿರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಳೆಯದನ್ನು ಮರೆಯಬಾರದು, ಪೂರ್ವಜರ ಜೀವನಶೈಲಿ, ಅವರ ಪರಿಶ್ರಮವನ್ನು ಸದಾ ಸ್ಮರಿಸಿ, ಉತ್ತಮ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು. ಗ್ರಾಮೀಣರ ಬದುಕು, ಜೀವನ ಪದ್ಧತಿ ಅರಿತುಕೊಂಡು ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು ಎಂದು ಎ.ಎಸ್.ಪೊನ್ನಣ್ಣ ಪ್ರತಿಪಾದಿಸಿದರು.
ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದಲ್ಲಿ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಕೃಷಿ, ಗುಡಿ ಕೈಗಾರಿಕೆಗಳು ಮತ್ತಷ್ಟು ಬಲವರ್ಧನೆಗೊಳ್ಳಬೇಕು ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಅವರು ಅಭಿಪ್ರಾಯಪಟ್ಟರು.ಜಾತಿ, ಧರ್ಮ, ಭಾಷೆಯನ್ನು ಮೀರಿ ಎಲ್ಲರೂ ಒಂದೆಡೆ ಸೇರಿ ‘ಗ್ರಾಮಸಿರಿ’ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರವಾಗಿದೆ. ಎಲ್ಲರೂ ಒಟ್ಟುಗೂಡುವುದೇ ಭಾರತ ದೇಶದ ಪ್ರತೀಕವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವುದೇ ಭಾರತದ ವೈಶಿಷ್ಟ್ಯವಾಗಿದೆ ಎಂದು ತಿಳಿಸಿದರು.
ಭಾಗಮಂಡಲ ಭಾಗದಲ್ಲಿ ಕೊಡವ, ಅರೆಭಾಷೆ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವವರು ಇದ್ದಾರೆ. ಮಾತೃ ಭಾಷೆ ಜೊತೆಗೆ ನಾಡಿನ ಭಾಷೆ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಸಣ್ಣ ಸಣ್ಣ ಭಾಷೆ, ಜನಾಂಗ, ಸಮಾಜಗಳ ಆಚಾರ ವಿಚಾರಗಳನ್ನು ಉಳಿಸಿಕೊಂಡು, ಕನ್ನಡ ನಾಡಿನ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಭ್ರಾತೃತ್ವ ಮತ್ತು ಸಮಾನತೆಯಿಂದ ಬೆರೆತು ಅಭಿವೃದ್ಧಿಯತ್ತ ಮುಖ ಮಾಡಬೇಕಿದೆ ಎಂದರು.ಒಬ್ಬರು ಮತ್ತೊಬ್ಬರ ಆಚಾರ ವಿಚಾರ ಹಾಗೂ ಸಂಪ್ರದಾಯ ಪರಂಪರೆಗಳನ್ನು ಗೌರವಿಸಿ ಮುನ್ನಡೆಯಬೇಕು. ಇದರಿಂದ ನೈಜ ಭಾರತವನ್ನು ಕಾಣಲು ಸಾಧ್ಯ. ನಾವೆಲ್ಲರೂ ಒಂದೇ ಎನ್ನುವ ಸಾಮರಸ್ಯ, ಸಹೋದರತೆಯಿಂದ ಬದುಕು ನಡೆಸಿದಾಗ ಗ್ರಾಮಸಿರಿಯನ್ನು ಕಾಣಬಹುದಾಗಿದೆ ಎಂದರು.
ಗ್ರಾಮಸಿರಿಯಂತಹ ಕಾರ್ಯಕ್ರಮಗಳು ಎಲ್ಲೆಡೆ ಜರುಗುವಂತಾಗಬೇಕು. ಈ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ ಗ್ರಾಮೀಣ ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳಲು ಗ್ರಾಮಸಿರಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಅನಾದಿಕಾಲದಿಂದಲೂ ವಾಸ ಮಾಡಿಕೊಂಡು ಬಂದಿರುವ ಇಲ್ಲಿಯ ಜನರು ಭೂಮಿ ಮಾರಾಟ ಮಾಡಿಕೊಳ್ಳಬಾರದು. ಕೃಷಿ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು. ಇದರಿಂದ ಗ್ರಾಮಸಿರಿಯನ್ನು ಉಳಿಸಿದಂತಾಗುತ್ತದೆ ಎಂದು ಟಿ.ಪಿ.ರಮೇಶ್ ಅವರು ಪ್ರತಿಪಾದಿಸಿದರು.ಗ್ರಾಮ ಗ್ರಾಮಗಳಲ್ಲಿ ‘ಗ್ರಾಮಸಿರಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜಾನಪದ ಕಲೆ, ಗ್ರಾಮೀಣ ಕ್ರೀಡಾಕೂಟ, ಹೀಗೆ ಹಲವು ಕಲೆ, ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮಸಿರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಕೇಶವ ಕಾಮತ್ ಮಾತನಾಡಿ, ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ 5 ತಾಲೂಕುನಲ್ಲಿ ಗ್ರಾಮಸಿರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಪ್ರಥಮ ಗ್ರಾಮಸಿರಿ ಕಾರ್ಯಕ್ರಮವನ್ನು ಚೆಟ್ಟಿಮಾನಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ಕೊಡಗು ಜಿಲ್ಲೆಯ ಗ್ರಾಮೀಣ ಜನರು ಉದ್ಯೋಗ ಅರಸಿ ದೊಡ್ಡ ದೊಡ್ಡ ನಗರ ಸೇರುತ್ತಿದ್ದಾರೆ. ಉದ್ಯೋಗ ಅರಸಿ ನಗರ ಪಟ್ಟಣಗಳಿಗೆ ತೆರಳಿದರೂ ಸಹ ವಾಪಸ್ಸು ಗ್ರಾಮೀಣ ಪ್ರದೇಶಕ್ಕೆ ಬರುವಂತಾಗಬೇಕು. ವೃತ್ತಿಗಾಗಿ ವಲಸೆ ಹೋಗುವುದು ತಪ್ಪಲ್ಲ. ಆದರೆ ಹುಟ್ಟಿ ಬೆಳೆದ ಊರನ್ನು ಯಾರೂ ಸಹ ಮರೆಯಬಾರದು. ಆ ನಿಟ್ಟಿನಲ್ಲಿ ಗ್ರಾಮಸಿರಿ ಬೆಳಗಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವತಿಯಿಂದ 30 ಕ್ಕೂ ಹೆಚ್ಚು ದತ್ತಿನಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಗ್ರಾಮಸಿರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕಸಾಪ ವತಿಯಿಂದ ಹಮ್ಮಿಕೊಳ್ಳಲಾಗುತ್ತದೆ. ನಾಡು ನುಡಿ, ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಲಾಗುತ್ತಿದೆ ಎಂದರು.
ಜಾನಪದ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ‘ಗ್ರಾಮಸಿರಿ ಕಿರುಹೊತ್ತಿಗೆ’ ಬಿಡುಗಡೆ ಮಾಡಿ ಮಾತನಾಡಿ ಪ್ರತಿಯೊಬ್ಬರೂ ಪರಸ್ಪರರನ್ನು ಗೌರವಿಸಬೇಕು. ಜೊತೆಗೆ ಇಲ್ಲದವರಿಗೆ ಸಹಾಯ ಮಾಡುವಂತಾಗಬೇಕು. ಯಾವುದೇ ಕಾರಣಕ್ಕೂ ಹೃದಯ ಶೂನ್ಯರಾಗಬಾರದು. ಹೃದಯವೈಶಾಲ್ಯತೆ ಇರಬೇಕು ಎಂದು ಪ್ರತಿಪಾದಿಸಿದರು.ಗ್ರಾಮಸಿರಿಯಂತಹ ಕಾರ್ಯಕ್ರಮಗಳು ಸ್ಥಳೀಯ ಸಂಸ್ಕೃತಿ ಹಾಗೂ ಕ್ರೀಡೆಯನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದೆ. ಜಾನಪದಿಯರು ಹೃದಯದ ಮಾತು ಆಡುತ್ತಾರೆ. ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಬೇಕು ಮತ್ತು ಗೌರವಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ ಬಹು ಸಂಸ್ಕೃತಿ, ಬಹು ಕಲೆ, ಬಹುಭಾಷೆ ಒಳಗೊಂಡಿರುವ ನಾಡಿನಲ್ಲಿ ಎಲ್ಲರೂ ಸಮಾನತೆಯಿಂದ ಬದುಕಿದಾಗ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.ಗ್ರಾಮಸಿರಿಯ ಸ್ವಾಗತ ಸಮಿತಿ ಅಧ್ಯಕ್ಷರಾದ ಪಾಣತ್ತಲೆ ಪಿ.ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂದಚೇರಿ ಗ್ರಾ.ಪಂ.ಅಧ್ಯಕ್ಷರಾದ ಪಿ.ಬಿ.ದಿನೇಶ್, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷರಾದ ಕಾಳನ ರವಿ, ಅಯ್ಯಂಗೇರಿ ಗ್ರಾ.ಪಂ.ಅಧ್ಯಕ್ಷರಾದ ಎಚ್.ಪುಷ್ಪ, ಕರಿಕೆ ಗ್ರಾ. ಪಂ. ಅಧ್ಯಕ್ಷರಾದ ಬಾಲಚಂದ್ರ ನಾಯರ್, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಕಸಾಪ ಮಡಿಕೇರಿ ತಾಲೂಕು ಘಟಕ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಮಡಿಕೇರಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಅಂಬೆಕಲ್ಲು ನವೀನ್, ಕಸಾಪ ಭಾಗಮಂಡಲ ಹೋಬಳಿ ಘಟಕದ ಅಧ್ಯಕ್ಷರಾದ ಸುನಿಲ್ ಪತ್ರಾವೋ, ಕರಿಕೆ ಗ್ರಾಮದ ಬೇಕಲ್ ರಮಾನಾಥ್, ಸಾಹಿತಿ ಡಾ.ಕುಶ್ವಂತ್ ಕೋಳಿಬೈಲು ಇತರರು ಇದ್ದರು.ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಭಾಗಮಂಡಲ ವಿಎಸ್‌ಎಸ್‌ಎನ್ ಉಪಾಧ್ಯಕ್ಷರಾದ ಜೆ.ಎನ್.ನಂಜುಂಡಪ್ಪ ಸ್ವಾಗತಿಸಿದರು. ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಅಧ್ಯಾಪಕರಾದ ಡಿ.ಪಿ.ಸತೀಶ್ ಮತ್ತು ಭಾಗಮಂಡಲ ಅಂಬೇಡ್ಕರ್ ವಸತಿ ಶಾಲೆಯ ಎಂ.ಜಿ.ರೂಪ ನಿರೂಪಿಸಿದರು. ಕುಂದಚೇರಿ ಗ್ರಾ.ಪಂ.ಪಿಡಿಒ ಎಚ್.ಯಾದವ್ ವಂದಿಸಿದರು.