ಕನಡ್ಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ದಸರಾ ಉತ್ಸವ ಹಿನ್ನೆಲೆಯಲ್ಲಿ ನಗರದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಸೋಮವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸಚಿವರು, ಬರದ ಪರಿಸ್ಥಿತಿ ಇದ್ದರೂ ಕೂಡಾ ಸರ್ಕಾರದಿಂದ ಈ ಬಾರಿ ಹೆಚ್ಚಿನ ಅನುದಾನ ತಂದು ವೈಭವದಿಂದ ಕಾರ್ಯಕ್ರಮ ನಡೆಸಲು ಅನುಕೂಲಕ ಮಾಡಿಕೊಡಲಾಗಿದೆ. ಕೊಡಗಿನ ಐದು ತಾಲೂಕು ಕೂಡ ಬರ ಘೋಷಣೆಯಾಗಿದೆ ಎಂದು ತಿಳಿಸಿದರು. ದೇವಿಯ ಆಶೀರ್ವಾದದಿಂದ ನಾಡಿನ ಜನರಿಗೆ ನೆಮ್ಮದಿ, ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ದಸರಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಈಗಾಗಲೇ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಚಾಲನೆ ನೀಡುವ ಮೂಲಕ ಮಡಿಕೇರಿ ದಸರಾಗೆ ಚಾಲನೆ ನೀಡಲಾಗಿದೆ. ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲರೂ ಆಗಮಿಸಿ ಕಾರ್ಯಕ್ರಮ ವೀಕ್ಷಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟ ರಾಜಾ, ಎಸ್ಪಿ ರಾಮರಾಜನ್, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ನಗರಸಭಾ ಸದಸ್ಯರಾದ ಅರುಣ್ ಶೆಟ್ಟಿ, ಮನ್ಸೂರು ಅಲಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಮತ್ತಿತರರು ಪಾಲ್ಗೊಂಡಿದ್ದರು. ಇಂದಿನ ಕಾರ್ಯಕ್ರಮ ಮಡಿಕೇರಿ ದಸರಾ ಸಾಂಸ್ಕೖತಿಕ ಕಾರ್ಯಕ್ರಮಗಳ ಎರಡನೇ ದಿನವಾದ ಮಂಗಳವಾರ ವೈವಿಧ್ಯಮಯ ಕಾರ್ಯಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ. ಮಡಿಕೇರಿಯ ನಾಟ್ಯ ನಿಕೇತನ ಸಂಗೀತ ನೖತ್ಯಶಾಲಾ ತಂಡದಿಂದ ನೖತ್ಯ ವೈವಿಧ್ಯ, ಕುಶಾಲನಗರದ ಕುಂದನ ನಾಟ್ಯಾಲಯ ತಂಡದಿಂದ, ಶ್ರೀ ಮಂಜುನಾಥ ಮಹಿಮೆ ನೖತ್ಯ ರೂಪಕ, ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದಿಂದ ಭಾರತೀಯ ಶಾಸ್ತ್ರೀಯ ನೃತ್ಯ, ಕುಶಾಲನಗರದ ಟೀಮ್ ಅ್ಯಟಿಟ್ಯೂಡ್ ತಂಡದಿಂದ ನೃತ್ಯ ವೈವಿಧ್ಯ, ಕುಶಾಲನಗರದ ಮಂಜುಭಾರ್ಗವಿ ಮತ್ತು ತಂಡದಿಂದ ನೃತ್ಯ ಹಾಗೂ ಮಡಿಕೇರಿಯ ಮುತ್ತಿನ ಹಾರ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಸೇರಿದಂತೆ ವೈವಿಧ್ಯಮಯ ಕಾಯ೯ಕ್ರಮಗಳು ಆಯೋಜಿತವಾಗಿದೆ. ಅಂತೆಯೇ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಮೈಸೂರಿನ ಖ್ಯಾತ ಮರಳು ಕಲಾವಿದೆ ಎನ್.ಎಂ.ಗೌರಿ ರೂಪಿಸಿರುವ ಕಾಂತಾರ ಶೈಲಿಯ ವನದೇವ ಮರಳುಕಲಾಕೖತಿಯನ್ನೂ ವೀಕ್ಷಿಸಬಹುದಾಗಿದೆ. ಫೋಟೋ ಪಾಯಿಂಟ್ ನಲ್ಲಿ ಮಡಿಕೇರಿ ದಸರಾದ ಸಂಭ್ರಮವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.