ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಜಾಥಾಗೆ ಚಾಲನೆ

KannadaprabhaNewsNetwork |  
Published : Jan 31, 2025, 12:48 AM IST
30ಸಿಎಚ್‌ಎನ್‌55 ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ’ ಜಾಥಾಗೆ ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚಾಲನೆ ನೀಡಿ ಕುಷ್ಠರೋಗ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿದರು. | Kannada Prabha

ಸಾರಾಂಶ

ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ’ ಜಾಥಾಗೆ ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿ ಕುಷ್ಠರೋಗ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜನಸಾಮಾನ್ಯರಿಗೆ ಕುಷ್ಠರೋಗದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ, ಕುಷ್ಠರೋಗಿಗಳನ್ನು ಪತ್ತೆಹಚ್ಚಿ ಅವಶ್ಯ ಚಿಕಿತ್ಸೆ ನೀಡುವ ಸಲುವಾಗಿ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ’ ಜಾಥಾಗೆ ನಗರದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿದರು.

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 30ರಿಂದ ಫೆ13ರವರೆಗೆ ಏರ್ಪಡಿಸಲಾಗಿರುವ ಕಾರ್ಯಕ್ರಮದ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಬಳಿಯಿಂದ ಜಿಲ್ಲಾಡಳಿತ ಭವನದವರೆಗೆ ಏರ್ಪಡಿಸಲಾಗಿದ್ದ ಜಾಥಾಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಪಂ ಸಿಇಒ ಮೋನಾರೋತ್ ಅವರು ಹಸಿರು ನಿಶಾನೆ ತೋರಿದರು.

ಕುಷ್ಠರೋಗ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಕುಷ್ಠರೋಗ ಒಬ್ಬರನ್ನೊಬ್ಬರು ಮುಟ್ಟಿದರೆ ಬರುವುದಲ್ಲ. ಅದು ಶಾಪವು ಅಲ್ಲ. ದೇಹಕ್ಕೆ ರೋಗ ಬಂದಾಗ ಮನಸ್ಸಿಗೆ ನೋವಾಗಲಿದೆ. ಅಂತಹವರನ್ನು ಕೀಳಿರಿಮೆಯಿಂದ ನೋಡಬಾರದು, ಸಮಾಜದಿಂದ ಹೊರಗಿಡಬಾರದು. ಪ್ರಜ್ಞಾವಂತ ನಾಗರಿಕರಾದ ನಾವು ಅವಶ್ಯ ಚಿಕಿತ್ಸೆ ಕೊಡಿಸಿ ಗುಣಮುಖರನ್ನಾಗಿ ಮಾಡಲು ಸಹಕರಿಸಬೇಕು. ಚಾಮರಾಜನಗರವನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಮಂದಾಗಬೇಕು ಎಂದರು.

ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನವಾದ ಇಂದು ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಕುಷ್ಠರೋಗದ ಬಗ್ಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ. ಗ್ರಾಮದ ಪ್ರತಿ ಮನೆಮನೆಗಳಿಗೂ ಕುಷ್ಠರೋಗದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕು. ಇದಕ್ಕಾಗಿ ಗ್ರಾಮಗಳಲ್ಲಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವು ಪಡೆಯಬೇಕು. ತಪಾಸಣೆಗೆ ಹಿಂಜರಿಯುವವರ ಮನವೊಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಪ್ರತಿಯೊಬ್ಬರು ನೆರವಾಗಬೇಕು ಎಂದು ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಜಾಥಾ ಅಂತ್ಯಗೊಂಡ ಬಳಿಕ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಅವರು ಕುಷ್ಠರೋಗ ಶಾಪವಲ್ಲ. ಅದು ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಜನರಲ್ಲಿ ತಾಮ್ರವರ್ಣದ ಯಾವುದೇ ಚಿಹ್ನೆ ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕುಷ್ಠರೋಗವನ್ನು ಶೀಘ್ರವಾಗಿ ಪತ್ತೆಹಚ್ಚಿ ಅಗತ್ಯ ಚಿಕಿತ್ಸೆ ನೀಡುವ ಕಾರ್ಯವನ್ನು ಆಂದೋಲನ ಮಾದರಿಯಲ್ಲಿ ನಡೆಸಲಾಗುತ್ತಿದೆ ಎಂದರು.

ಆರೋಗ್ಯ ಇಲಾಖೆಯಿಂದ ಕುಷ್ಠರೋಗಿಗಳ ಸಮೀಕ್ಷೆ ನಡೆಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 50 ಕುಷ್ಠರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. 2025ರ ಮಾರ್ಚ್‌ ಒಳಗೆ ಕುಷ್ಠರೋಗ ಪತ್ತೆಹಚ್ಚುವ ಕಾರ್ಯ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಡಾಚಿದಂಬರ ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿರ್ಮೂನಾಧಿಕಾರಿ ಡಾ. ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಆರೋಗ್ಯ ಮೇಲ್ವಿಚಾರಕರಾದ ವೆಂಕಟೇಶ್, ನಗರದ ಸರ್ಕಾರಿ ನರ್ಸಿಂಗ್, ಮನೋನಿಧಿ ಹಾಗೂ ಜೆಎಸ್ಎಸ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ