ದಾಸ ಪರಂಪರೆ ಮುಂದಿನ ಪೀಳಿಗೆಗೆ ತಿಳಿಸಬೇಕು

KannadaprabhaNewsNetwork |  
Published : Oct 12, 2025, 01:00 AM IST
5 | Kannada Prabha

ಸಾರಾಂಶ

ಭಾರತೀಯ ಸಂಗೀತ ಲೋಕದಲ್ಲಿ ದಾಸ ಪರಂಪರೆಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಕರ್ನಾಟಕ ಸಂಗೀತ ದೇಶಾದಾದ್ಯಂತ ಮನೆಮಾತಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರುದಾಸ ಪರಂಪರೆ ಬಗ್ಗೆ ಮುಂದಿನ ಪೀಳಿಗೆ ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಮೈಸೂರು ಸಂಗೀತ ಸುಗಂಧ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ, ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನದ ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತೀಯ ಸಂಗೀತ ಲೋಕದಲ್ಲಿ ದಾಸ ಪರಂಪರೆಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಕರ್ನಾಟಕ ಸಂಗೀತ ದೇಶಾದಾದ್ಯಂತ ಮನೆಮಾತಾಗಿದೆ. ಈ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ. ಮೈಸೂರಿನ ಗುರುತು ಸಂಗೀತದಲ್ಲೇ ಅಡಗಿದೆ. ಸಾಂಸ್ಕೃತಿಕವಾಗಿಯೂ ಈ ನಗರ ಶ್ರೀಮಂತವಾಗಿದೆ ಎಂದರು.ಅಯೋಧ್ಯೆಯಲ್ಲಿ ತ್ಯಾಗರಾಜ, ಪುರಂದರದಾಸರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಸಂಗೀತ ಮಾಧ್ಯಮದ ಮೂಲಕ ಭಕ್ತಿ ಮಾರ್ಗವನ್ನು ತೋರಿಸಿದ್ದ ಈ ಮಹನೀಯರಿಗೆ ಆ ಮೂಲಕ ನಮನ ಸಲ್ಲಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಳೆದ ವರ್ಷ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದ್ದರು. ಇದು ಎರಡನೇ ಆವೃತ್ತಿ. ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳು ದೇಶದ ಉದ್ದಗಲಕ್ಕೂ ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು ಅವರು ಆಶಿಸಿದರು.ಸೆನೆಟ್‌ ಭವನದ ತುಂಬೆಲ್ಲಾ ಸಂಗೀತ ಕಂಪು ಪಸರಿಸಿತ್ತು. ಪ್ರಖ್ಯಾತ ಸಂಗೀತಜ್ಞರು ಮತ್ತು ಗಾಯಕರು ತಮ್ಮ ಗಾನಸುಧೆ ಹರಿಸಿದರು. ವಿದ್ಯಾಭೂಷಣ, ಸಾಕೇತ್‌ ರಾಮನ್, ವಾಣಿಸತೀಶ್, ಎಚ್.ಎಸ್. ವೇಣುಗೋಪಾಲ್, ಮಹಾಲಕ್ಷ್ಮಿ ಶೆಣೈ, ಎಸ್. ಅಶೋಕ್ ಮತ್ತು ಎಂ.ಬಿ. ಹರಿಹರನ್ ಅವರ ಗಾಯನಕ್ಕೆ ಪ್ರೇಕ್ಷಕರು ತಲೆದೂಗಿದರು.ಮೊದಲ ದಿನವಾದ ಶನಿವಾರ ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು ಸೇರಿದಂತೆ ದಾಸ ಪರಂಪರೆಯ ವಿವಿಧ ರಚನೆಕಾರರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.ಶಾಸಕ ಟಿ.ಎಸ್. ಶ್ರೀವತ್ಸ, ಖ್ಯಾತ ವಯೋಲಿನ್ ವಾದಕ ಮೈಸೂರು ಮಂಜುನಾಥ್, ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಕಾರ್ಯದರ್ಶಿ ವಿದ್ಯಾವತಿ, ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಕೆ.ವಿ. ತ್ರಿಲೋಕ್ ಚಂದ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌