ಹೊನ್ನಾಳಿ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನೇಹಾ ಪ್ರಕರಣದಲ್ಲಿ ರಾಜ್ಯದಲ್ಲಿ ಗೃಹ ಮಂತ್ರಿ ಪರಮೇಶ್ವರ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.
ಶನಿವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಓಲೈಸುವ ಓಟ್ ಬ್ಯಾಂಕ್ ರಾಜಕಾರಣದಿಂದ ರಾಜ್ಯದಲ್ಲಿ ಹಿಂದುಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳಿಯ ಬಿ.ವಿ.ಎ. ಯೂನಿರ್ವಸಿಟಿ ಕ್ಯಾಂಪಸ್‌ನಲ್ಲಿ ಹಾಡಹಗಲೇ ಅಮಾಯಕ ಯುವತಿ ಹತ್ಯೆಯಾಗಿದೆ. ಆದರೂ, ಸರ್ಕಾರ ಪ್ರಕರಣದ ದಿಕ್ಕು ತಪ್ಪಿಸುವಂತಹ ಹೇಳಿಕೆ ನೀಡುತ್ತಿದೆ ಎಂದು ದೂರಿದರು.
ಲವ್ ಜಿಹಾದ್, ಪಿ.ಎಫ್,ಐ. ಎಸ್.ಡಿ.ಪಿ.ಐ. ಭಯೋದತ್ಪಾದಕರ ಮೇಲಿನ ಕೇಸ್‌ಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಇದರ ಪರಿಣಾಮ ಇಂದು ಅನೇಕ ಸಮಾಜಘಾತುಕ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಹುಬ್ಬಳಿಯ ಯುನಿರ್ವಸಿಟಿ ಕ್ಯಾಂಪಸ್‌ನಲ್ಲಿ ಒಬ್ಬ ಅಮಾಯಕ ಹಿಂದೂ ಮುಗ್ದ ಯುವತಿಯನ್ನು ಅಲ್ಪಸಂಖ್ಯಾತ ಕೋಮಿನ, ವಿಕೃತ ಮನಸ್ಸಿನ ಯುವಕ ಹಲವಾರು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಈ ಪ್ರಕರಣ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂಥದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಹಂತದಲ್ಲಿದೆ ಎಂದು ಜನರು ವಿಚಾರ ಮಾಡಬೇಕಾಗಿದೆ. ಚುನಾವಣೆಯಲ್ಲಿ ಈ ದೇಶದ ಜನ ಕಾಂಗ್ರೆಸ್ ಪಕ್ಷದವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.
ಚನ್ನಗಿರಿ ತಾಲೂಕು ನಲ್ಲೂರಿನಲ್ಲಿ ಇಬ್ಬರ ಹತ್ಯೆಯಾಯಿತು. ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಎಂದರೆ ಅಲ್ಪಸಂಖ್ಯಾತ ಯುವಕರೊಬ್ಬರು ಚಾಕುವಿಂದ ಚುಚ್ಚಿದ ಪ್ರಕರಣವಾಗಿದೆ. ಇದೇ ಬೆಂಗಳೂರಿನ ರಾಮೇಶ್ವರ ಹೋಟೆಲ್ ಬಾಂಬ್ ಪ್ರಕರಣ, ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳು ಭೀಕರವಾಗಿ ಹತ್ಯೆಯಾಗಿದೆ. ರಾಜ್ಯದಲ್ಲಿ ಇರುವುದು ಯಾವ ಸರ್ಕಾರ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಹಿಂದುಳಿದವರ್ಗಗಳ ಮುಖಂಡ ಕೆ.ಪಿ. ಕುಬೇಂದ್ರಪ್ಪ, ಜಿಪಂ ಮಾಜಿ ಸದಸ್ಯರಾದ ಸುರೇಂದ್ರ ನಾಯ್ಕ, ಮಾರುತಿ ನಾಯ್ಕ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಮೇಶ್ ಗೌಡ ಇತರರು ಇದ್ದರು.