ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳು: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Apr 20, 2024, 01:00 AM IST
ಫೋಟೊ ಶೀರ್ಷಿಕೆ: 19ಹೆಚ್‌ವಿಆರ್2ಬಸವರಾಜ ಬೊಮ್ಮಾಯಿ  | Kannada Prabha

ಸಾರಾಂಶ

ಈ ರಾಜ್ಯ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಗೂಂಡಾ ರಾಜ್ಯವಾಗಿದೆ. ಪೊಲೀಸರು ಆರೋಪಿಗಳನ್ನು ಹಿಡಿದರೂ ಅವರನ್ನು ರಾಜಕೀಯ ಪ್ರಭಾವ ಬಳಸಿ ಬಿಡುಗಡೆ ಮಾಡಿಸುತ್ತಿದ್ದಾರೆ. ಹಫ್ತಾ ವಸೂಲಿ ಹೆಚ್ಚಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ. 43ರಷ್ಟು ಹೆಚ್ಚಳವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜ್ಯ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಗೂಂಡಾ ರಾಜ್ಯವಾಗಿದೆ. ಪೊಲೀಸರು ಆರೋಪಿಗಳನ್ನು ಹಿಡಿದರೂ ಅವರನ್ನು ರಾಜಕೀಯ ಪ್ರಭಾವ ಬಳಸಿ ಬಿಡುಗಡೆ ಮಾಡಿಸುತ್ತಿದ್ದಾರೆ. ಹಫ್ತಾ ವಸೂಲಿ ಹೆಚ್ಚಾಗಿದೆ. ಪೊಲೀಸ್ ಸ್ಟೇಷನ್‌ಗಳು ಸೆಟ್ಲಮೆಂಟ್ ಕೇಂದ್ರಗಳಾಗಿವೆ ಎಂದು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಕಾಲೇಜು ಆವರಣದಲ್ಲಿಯೇ ಒಬ್ಬ ಯುವಕ ಯುವತಿಗೆ ಒಂಬತ್ತು ಬಾರಿ ಇರಿದು ಓಡಿ ಹೋಗುತ್ತಾನೆ ಎಂದರೆ ಅವನ ಹಿಂದೆ ಯಾವ ಶಕ್ತಿ ಇದೆ. ಗೃಹ ಸಚಿವರು ಅದೊಂದು ಪ್ರೇಮ ಪ್ರಕರಣ ಎಂಬ ಹಗುರ ಹೇಳಿಕೆ ಕೊಟ್ಟರೆ ಅಪರಾಧಿಗಳಿಗೆ ಪುಷ್ಠಿ ಬರದೇ ಇನ್ನೇನಾಗುತ್ತದೆ ಎಂದು ಪ್ರಶ್ನಿಸಿದರು.

ಗೃಹ ಸಚಿವರು ಪ್ರೇಮ ಪ್ರಕರಣ ಅಂತಾರೆ. ಹುಬ್ಬಳ್ಳಿ ಕಮಿಷನರ್ ಅವಳು ಲವ್ ನಿರಾಕರಣೆ ಮಾಡಿರೊದಕ್ಕೆ ಅವನು ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಇಷ್ಟೊಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಹಾವೇರಿಯಲ್ಲಿ ಅತ್ಯಾಚಾರ ಪ್ರಕರಣ ನಡೆದರೆ ಅದನ್ನು ಮುಚ್ಚಿಹಾಕುವ ಯತ್ನ ಮಾಡಿದರು. ನಂತರ ಆ ಮಹಿಳೆ ಬಹಿರಂಗವಾಗಿ ಹೇಳಿಕೆ ಕೊಟ್ಟ ಮೇಲೆ ಕೇಸ್ ದಾಖಲಿಸಿಕೊಂಡರು. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದರು. ಸಿಎಂ, ಡಿಜಿಪಿ ಇದ್ದಾಗಲೇ ಈ ರೀತಿ ನಡೆಯುತ್ತಿದೆ ಎಂದರೆ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸಿದರು. ಹಾವೇರಿ ಪ್ರಕರಣದಲ್ಲಿ ಸಿಎಂ ಸ್ಥಳೀಯ ಶಾಸಕರಿಗೆ ನೋಡಿಕೊಳ್ಳುವಂತೆ ಸೂಚಿಸುತ್ತಾರೆ ಎಂದರೆ ಅವರು ಏನೂ ಮಾತನಾಡದಂತೆ ನೋಡಿಕೊಳ್ಳಲು ಹೇಳುತ್ತಾರೆ ಎಂದು ಆರೋಪಿಸಿದರು.

ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿಯೂ ಕೊಲೆ ಪ್ರಕರಣಗಳು ನಡೆದಿದ್ದವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಶೇ. 43ರಷ್ಡು ಹೆಚ್ಚಳವಾಗಿವೆ. ಡಿಸಿಎಂ ಆದವರು ಈ ರೀತಿಯ ಪ್ರಕರಣಗಳನ್ನು ಸಮರ್ಥನೆ ಮಾಡಿಕೊಳ್ಳುತ್ತೀರಾ? ರಾಜ್ಯದಲ್ಲಿ ಮಾಸ್ ಮಾರ್ಡರ್‌ಗಳು ಏಕೆ ನಡೆಯುತ್ತಿವೆ ಎನ್ನುವ ಬಗ್ಗೆ ಚಿಂತನೆ ನಡೆಯಬೇಕು. ಹುಬ್ಬಳ್ಳಿ ಯುವತಿ ಕೊಲೆ ಪ್ರಕರಣವನ್ನು ಅಪರಾಧ ವಿಭಾಗದ ಡಿಜಿಪಿಗೆ ಉಸ್ತುವಾರಿ ವಹಿಸಬೇಕು. ಹುಬ್ಬಳ್ಳಿ ಪ್ರಕರಣದಲ್ಲಿ ಇನ್ನೂ ನಾಲ್ಕು ಜನ ಭಾಗಿಯಾಗಿದ್ದಾರೆ ಎಂದು ಮೃತ ಯುವತಿಯ ತಂದೆನೇ ಮಾಹಿತಿ ಕೊಟ್ಟಿದ್ದಾರೆ. ಪೋಲೀಸರು ಅವರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.

ಶಿವಾನಂದ ಪಾಟೀಲರ ತಟ್ಟೆಯಲ್ಲಿ ಏನು ಬಿದ್ದಿದೆ ನೋಡಿಕೊಳ್ಳಲಿ

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು, ಬೊಮ್ಮಾಯಿಯವರಿಗೆ ವಯಸ್ಸಾಗಿದೆ ಎಂದು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ತಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಶಿವಾನಂದ ಪಾಟೀಲರು ನನಗಿಂತ ಹಿರಿಯರು ಅವರು ತಮ್ಮ ಜಿಲ್ಲೆಯ ಕಡೆ ಗಮನ ಹರಿಸಲಿ, ಅವರು ಮಂತ್ರಿ ಇದ್ದಾರೆ. ಬಾಗಲಕೋಟೆಯಲ್ಲಿ ಟಿಕೆಟ್‌ಗೆ ವೀಣಾ ಕಾಶಪ್ಪನವರ ಹೋರಾಟ ಮಾಡಿದ್ದರು. ಅವರಿಗೆ ಟಿಕೆಟ್ ತಪ್ಪಿಸಿ ತಮ್ಮ ಮಗಳಿಗೆ ಟಿಕೆಟ್ ಕೊಡಿಸಿದ್ದಾರೆ. ಅವರ ಎಡೆಯಲ್ಲಿ ಏನು ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ವಯಸ್ಸು ಎಷ್ಟು ಅನ್ನುವುದು ಮುಖ್ಯವಲ್ಲ. 65ನೇ ವಯಸ್ಸಿನಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎನ್ನುವುದನ್ನು ನೋಡಬೇಕು. ಎಚ್.ಕೆ. ಪಾಟೀಲರು ನನಗಿಂತ ಹತ್ತು ವರ್ಷ ಹಿರಿಯರು ಅವರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಯಾರ ಎದೆಯಲ್ಲಿ ಏನಿದೆಯೊ ಯಾರಿಗೆ ಗೊತ್ತು ಅವರನ್ನೇ ಕೇಳಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ