ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ಏರಿಕೆಯಾಗಿದೆ, ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅನುದಾನ ಸಿಗುತ್ತಿಲ್ಲ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆರೋಪಿಸಿದ್ದಾರೆ.
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ಏರಿಕೆಯಾಗಿದೆ, ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅನುದಾನ ಸಿಗುತ್ತಿಲ್ಲ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 65ಕ್ಕಿಂತ ಹೆಚ್ಚು ಮಹಿಳೆಯರ ಹತ್ಯೆಯಾಗಿದೆ. 1300ಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 100ಕ್ಕೂ ಹೆಚ್ಚು ಯುವಕರ ಕೊಲೆಯಾಗಿದ್ದು, ಗೃಹ ಸಚಿವರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಹೇಳಿದರು.20ಕ್ಕೂ ಹೆಚ್ಚು ಅಧಿಕಾರಿಗಳು ಅಸಹಜ ಸಾವಿಗೀಡಾಗಿದ್ದು, ಕಮಿಷನ್ ಕಾಟಕ್ಕೆ 7 ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಗಣತಿ ವೇಳೆ ಸರ್ಕಾರದ ಒತ್ತಡದಿಂದ 6 ಜನ ಪ್ರಾಣ ತೆತ್ತಿದ್ದಾರೆ. 15ಕ್ಕಿಂತ ಹೆಚ್ಚು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ರಸ್ತೆ ಗುಂಡಿಯಿಂದ 5ಕ್ಕಿಂತ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 750ಕ್ಕೂ ಹೆಚ್ಚು ಬಾಣಂತಿಯರು, 1300 ನವಜಾತ ಶಿಶುಗಳು ಸಾವಿಗೀಡಾಗಿವೆ. 5000 ಹೆಣ್ಣು ಭ್ರೂಣ ಹತ್ಯೆಗಳಾಗಿದ್ದು, ಸರ್ಕಾರ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷಿಸಿದೆ ಎಂದು ಭಾಗೀರಥಿ ಮುರುಳ್ಯ ಆರೋಪಿಸಿದರು.
ಅತಿವೃಷ್ಟಿಮತ್ತು ಅನಾವೃಷ್ಟಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಸರ್ಕಾರ ಹಣ ಬಿಡುಗಡೆಯಾಗಿದೆ ಎಂದು ಹೇಳಿದ್ದರೂ ಈವರೆಗೂ ರೈತರ ಖಾತೆಗೆ ಹಣ ಬಂದಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರ ಮತ್ತು ದಾದಿಯರ ಕೊರತೆ, ಔಷಧಗಳ ಕೊರತೆ ಉಂಟಾಗಿದೆ ಎಂದು ದೂರಿದರು.ಆನೆ ದಾಳಿಗೆ 25ಕ್ಕಿಂತ ಹೆಚ್ಚು ಸಾವಾಗಿದ್ದು, ಆನೆ- ಮನುಷ್ಯರ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. 4 ಬ್ಯಾಂಕ್ ದರೋಡೆ ನಡೆದಿದೆ. ಸೈಬರ್ ಕ್ರೈಂನಲ್ಲಿ ಕರ್ನಾಟಕ ನಂ.1, ಬೆಂಗಳೂರು 3ನೇ ಸ್ಥಾನ ಪಡೆದಿದ್ದು, ಇದು ಗೃಹ ಸಚಿವರ ಸಾಧನೆಯಾಗಿದೆ. ಮೈಸೂರಿನಲ್ಲಿ ಡ್ರಗ್ ಕಾರ್ಖಾನೆ ಪ್ರಕರಣದಲ್ಲಿ ಕಾಂಗ್ರೆಸ್ ಮಂತ್ರಿಗಳ ಕೈವಾಡದ ಶಂಕೆ ಇದ್ದು, ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿಲ್ಲ ಎಂದರು.ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಉಪಾಧ್ಯಕ್ಷೆ ವಜ್ರಾಕ್ಷಿ ಶೆಟ್ಟಿ, ಸಂಧ್ಯಾ ವೆಂಕಟೇಶ್, ಸುಮಾ ಅರುಣ್, ಸುಷ್ಮಾ ಕೋಟ್ಯಾನ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.