ಕಾಯ್ದೆ ಜಾರಿಯಿಂದ ಆರ್ಥಿಕ, ರಾಜಕೀಯ ದಾಳಿ

KannadaprabhaNewsNetwork |  
Published : Feb 13, 2026, 02:30 AM IST
ಕಾರ್ಮಿಕ ಸಂಘಟನೆಗಳಿಂದ ಹುಬ್ಬಳ್ಳಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ವ್ಯಾಪಾರ ಸುಲಭೀಕರಣ, ಯೂನಿಯನ್ ಮುಕ್ತ ವಾತಾವರಣ ನಿರ್ಮಿಸಲು 29 ಕಾರ್ಮಿಕ ಕಾನೂನು ರದ್ದುಗೊಳಿಸಿ 4 ಸಂಹಿತೆ ಜಾರಿ ಮಾಡಿರುವುದು ಆರ್ಥಿಕ ದಾಳಿ ಮಾತ್ರವಲ್ಲದೇ, ರಾಜಕೀಯ ದಾಳಿಯೂ ಆಗಿದೆ.

ಹುಬ್ಬಳ್ಳಿ:

ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4 ಕಾರ್ಮಿಕ ಸಂಹಿತೆ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧಾರವಾಡ ಜಿಲ್ಲಾ ಘಟಕದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅಂಬೇಡ್ಕರ್ ಸರ್ಕಲ್‌ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ವೃತ್ತದಲ್ಲಿ ಸಮಾವೇಶಗೊಂಡು ಕೇಂದ್ರ ನಡೆಯನ್ನು ಖಂಡಿಸಿದರು. ಬಳಿಕ ತಹಸೀಲ್ದಾರ್‌ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಿಐಟಿಯು ಮಹೇಶ ಪತ್ತಾರ, ವ್ಯಾಪಾರ ಸುಲಭೀಕರಣ, ಯೂನಿಯನ್ ಮುಕ್ತ ವಾತಾವರಣ ನಿರ್ಮಿಸಲು 29 ಕಾರ್ಮಿಕ ಕಾನೂನು ರದ್ದುಗೊಳಿಸಿ 4 ಸಂಹಿತೆ ಜಾರಿ ಮಾಡಿರುವುದು ಆರ್ಥಿಕ ದಾಳಿ ಮಾತ್ರವಲ್ಲದೇ, ರಾಜಕೀಯ ದಾಳಿಯೂ ಆಗಿದೆ. ಕಾರ್ಮಿಕ ಮಿತಿ ಹೆಚ್ಚಳದಿಂದ ಶೇ. 90ರಷ್ಟು ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌, ಗ್ರ್ಯಾಚುಟಿ, ಬೋನಸ್ ಹಕ್ಕುಗಳಿಂದ ಹೊರಗುಳಿಯುತ್ತಾರೆ. ಹೀಗಾಗಿ ಈ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ, ಕಂಪನಿ ಕೃಷಿಯನ್ನು ಉತ್ತೇಜಿಸಿ ಬಲವಂತರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ರೈತರು, ಕೂಲಿಕಾರರು ನಿರುದ್ಯೋಗಿಗಳಾಗಲಿದ್ದಾರೆ ಎಂದು ಕಿಡಿಕಾರಿದರು.

ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ ವಿಬಿ-ಜಿ ರಾಮ್‌ಜಿ ಕಾಯ್ದೆ ರದ್ದುಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಂದಿರುವ ಭೂ ಸುಧಾರಣಾ, ಎಪಿಎಂಸಿ, ಜಾನುವಾರ ಸಂರಕ್ಷಣಾ ತಿದ್ದುಪಡಿ ಕಾಯ್ದೆ, ವಿದ್ಯುಚ್ಛಕ್ತಿ ಮಸೂದೆ, ಬೀಜ ಮಸೂದೆ ಹಿಂಪಡೆಯಬೇಕು. ಹಾಗೆಯೇ ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸುವುದು, ಕಾರ್ಮಿಕ ಸಂಹಿತೆಗಳಿಗೆ ರಾಜ್ಯ ಸರಕಾರ ತಂದಿರುವ ಗೆಜೆಟ್ ನೋಟಿಫಿಕೇಶನ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಟಿಯುಸಿಸಿ ಅಶೋಕ ಬಾರ್ಕಿ, ಬಸೀರ ಮುಧೋಳ, ಗಂಗಾಧರ ಬಡಿಗೇರ, ರಮೇಶ ಭೂಸ್ಲೆ, ಚಿದಾನಂದ ಸವದತ್ತಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಸುಧಾರಣೆ ಕಾಯ್ದೆ ವಿರೋಧಿಸಿ ನೌಕರರ ಪ್ರತಿಭಟನೆ
ತೋಟಗಾರಿಕೆಯಲ್ಲಿ ಕೊಪ್ಪಳ ಜಿಲ್ಲೆ ಅತ್ಯಮೂಲ್ಯ ಬದಲಾವಣೆ