ಗದಗ: ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ವಿರುದ್ಧ ಪೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪದ ಬಳಸಿ ಪೋಸ್ಟ್ ಮಾಡಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.
ಪೋಸ್ಟ್‌ನಲ್ಲಿ ಏನಿತ್ತು?: ಆರೋಪಿಯು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸಚಿವರನ್ನು ಗೋಸುಂಬೆ ಎಂದು ಕರೆದಿದ್ದಲ್ಲದೆ, ಗದಗ ಕ್ರೀಡಾಂಗಣದಲ್ಲಿ ನಿಲ್ಲಿಸಿ ಎಕೆ- 47ನಿಂದ ಮನಸೋ ಇಚ್ಛೆ ಗುಂಡಿನ ಮಳೆಗರೆಯಬೇಕು ಎಂದು ಬರೆದುಕೊಂಡಿರುವ ಪೋಸ್ಟ್‌ನ್ನು ಡಿ. 14ರಂದು ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದು, ಸಚಿವರ ವಿರುದ್ಧ ಹಿಂಸಾತ್ಮಕ ಪ್ರಚೋದನೆ ನೀಡಿರುವುದು ಜಿಲ್ಲಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಟಗೇರಿ ಬಡಾವಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ವಿರುದ್ಧ ಜೀವ ಬೆದರಿಕೆ, ಸಾರ್ವಜನಿಕರ ಶಾಂತಿ ಭಂಗಕ್ಕೆ ಪ್ರಚೋದನೆ ಹಾಗೂ ಸೈಬರ್ ಅಪರಾಧದ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಕ್ರಮವಾಗಬೇಕು: ರಾಜಕೀಯ ಮುಖಂಡರು ಸೇರಿದಂತೆ ಸಮಾಜದಲ್ಲಿನ ಪ್ರಮುಖ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವ ಮತ್ತು ಹಿಂಸೆಗೆ ಪ್ರಚೋದಿಸುವ ವ್ಯಕ್ತಿಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ರೀತಿಯ ಕೃತ್ಯಗಳನ್ನು ನಡೆಸುವ ವ್ಯಕ್ತಿಗಳು ಅದಕ್ಕೆ ಪ್ರಚೋದನೆ ನೀಡುವವರ ವಿರುದ್ಧವೂ ಕ್ರಮವಾಗಬೇಕು. ಈ ಕುರಿತು ಪ್ರಕರಣ ದಾಖಲಿಸಿದ್ದೇವೆ ಎಂದು ಪ್ರಕರಣ ದಾಖಲಿಸಿದ ವ್ಯಕ್ತಿ ಬಸಟ್ಟೆಪ್ಪ ಅಸೂಟಿ ತಿಳಿಸಿದ್ದಾರೆ.