ಸಂಚಾರ ನಿಯಮ ಉಲ್ಲಂಘನೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಜೂಜಾಟ, ಅಕ್ರಮ ಮದ್ಯ ಮಾರಾಟ ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸರು ಕ್ರಮ
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯಾಚರಣೆಗೆ ಇಳಿದಿದ್ದು, ನಿಯಮ ಉಲ್ಲಂಘಿಸುವವರಿಗೆ ಖಾಕಿ ಬಿಸಿ ಮುಟ್ಟಿಸಿದೆ !
ಜಿಲ್ಲೆಯ ವಿವಿಧೆಡೆ ಮೂರು ದಿನಗಳ ಕಾಲ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಬರೋಬ್ಬರಿ 872 ಪ್ರಕರಣಗಳನ್ನು ದಾಖಲಿಸಲಾಗಿದ್ದು, ದಂಡ ಹಾಗೂ ಜಪ್ತಿ ಮಾಡಿದ ಹಣ, ಮದ್ಯದ ಮೌಲ್ಯ ಸೇರಿ ₹3.54 ಲಕ್ಷಕ್ಕೂ ಅಧಿಕ ಮೊತ್ತ ದಾಖಲಾಗಿದೆ. ಸಂಚಾರ ನಿಯಮ ಉಲ್ಲಂಘನೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಜೂಜಾಟ, ಅಕ್ರಮ ಮದ್ಯ ಮಾರಾಟ ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪೆನ್ನೇಕರ್ ಮಾರ್ಗದರ್ಶನದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯು ಸಂಚಾರ ನಿಯಮ ಉಲ್ಲಂಘಿಸುವವರು ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಸಂಚಾರ ನಿಯಮ ಉಲ್ಲಂಘನೆಯದ್ದೇ ಸಿಂಹಪಾಲು: ವಿಶೇಷ ಕಾರ್ಯಾಚರಣೆಯಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳೇ ಸಿಂಹಪಾಲು ಪಡೆದಿರುವುದು ಗಮನಾರ್ಹ !
ಮೂರು ದಿನಗಳಲ್ಲಿ ಬರೋಬ್ಬರಿ 679 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿರುವ ಪೊಲೀಸರು, ₹2,74,900 ದಂಡ ಸಂಗ್ರಹಿಸಿದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆ, ಹೆಲ್ಮೆಟ್ ಧರಿಸದಿರುವುದು, ವಾಹನಗಳ ವಿಮೆ ಹಾಗೂ ನೋಂದಣಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ.
ಒಟ್ಟು ಪ್ರಕರಣಗಳ ಪೈಕಿ ಶೇ.78ರಷ್ಟು ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿರುವುದು ಜಿಲ್ಲೆಯ ವಾಹನ ಸವಾರರಲ್ಲಿ ಸಂಚಾರ ಶಿಸ್ತಿನ ಕೊರತೆ ಎತ್ತಿ ತೋರಿಸುವಂತಿದೆ. ರಸ್ತೆ ಸುರಕ್ಷತೆ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದರೂ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೂ ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ ನಿಯಮ ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು ವಿಶೇಷ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದ 25 ಪ್ರಕರಣಗಳನ್ನು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) ಅಡಿ ದಾಖಲಿಸಿ ₹2,500 ದಂಡ ಸಂಗ್ರಹಿಸಲಾಗಿದೆ. ಇದಲ್ಲದೆ ವಿವಿಧ ಲಘು ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 154 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 43 ಪ್ರಕರಣಗಳಿಂದ ₹5,300 ದಂಡ ವಸೂಲಿ ಮಾಡಲಾಗಿದ್ದು, ಉಳಿದ 111 ಪ್ರಕರಣ ದಂಡ ವಿಧಿಸುವ ಸಂಬಂಧ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಜೂಜಾಟ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಜೂಜಾಟ ನಡೆಯುತ್ತಿದ್ದ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿ ₹51,270 ನಗದು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮದ್ಯ ಮಾರಾಟದ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗಿದ್ದು, ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದ 11 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ₹20,055 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಮೂರು ದಿನಗಳಲ್ಲೇ 872 ಪ್ರಕರಣಗಳು ದಾಖಲಾಗಿರುವುದು ಕಾನೂನು ಉಲ್ಲಂಘನೆಯ ವ್ಯಾಪ್ತಿ ಪ್ರತಿಬಿಂಬಿಸುವಂತಿದೆ. ವಿಶೇಷವಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿರುವ ಹಿನ್ನೆಲೆ ರಸ್ತೆ ಸುರಕ್ಷತೆ ಕುರಿತು ಇನ್ನಷ್ಟು ಪರಿಣಾಮಕಾರಿ ಜಾಗೃತಿ ಮೂಡಿಸುವ ಅಗತ್ಯವಿದೆ.
ಮೂರು ದಿನಗಳಲ್ಲಿ ಖಾಕಿ ಕಾರ್ಯಾಚರಣೆಯ ಲೆಕ್ಕಾಚಾರ
872 ಒಟ್ಟು ದಾಖಲಾದ ಪ್ರಕರಣಗಳು
679 ಸಂಚಾರ ನಿಯಮ ಉಲ್ಲಂಘನೆ
25 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ
154 ಲಘು ಪ್ರಕರಣಗಳು
3 ಜೂಜಾಟ ಪ್ರಕರಣಗಳು
11 ಅಕ್ರಮ ಮದ್ಯ ಮಾರಾಟ ಪ್ರಕರಣಗಳು
ದಂಡ ಸಂಗ್ರಹ ಹಾಗೂ ಜಪ್ತಿ ಮೌಲ್ಯ ಒಟ್ಟು 3,54,025 ರು.ಗಳು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.