ಬ್ಯಾಡಗಿ: ಹೈಕೋರ್ಟನಲ್ಲಿರುವ ದಾವೆಯನ್ನು ಹಿಂಪಡೆಯುವ ಮೂಲಕ ಮುಖ್ಯರಸ್ತೆಯಲ್ಲಿನ ಬಹುತೇಕರು 33 ಅಡಿ ಅಗಲೀಕರಣಕ್ಕೆ ಲಿಖಿತವಾಗಿ ಸಮ್ಮತಿ ಸೂಚಿಸಿದ್ದೇವೆ. ಆದರೆ ಇದೀಗ ಅಧಿಕಾರಿಗಳು 6 ಮೀ.(18 ಅಡಿ)ಗಳಷ್ಟು ಸೆಟ್‌ಬ್ಯಾಕ್ ಬಿಡಬೇಕೆನ್ನುವ ವಿಚಾರವನ್ನು ಮುಂದಿಟ್ಟುಕೊಂಡು ನಮ್ಮ ನಮ್ಮಲ್ಲಿಯೇ ಗೊಂದಲ ಸೃಷ್ಟಿಸುತ್ತಿರುವುದಾಗಿ ಮುಖ್ಯರಸ್ತೆಯಲ್ಲಿನ ಅಂಗಡಿ ಮಾಲೀಕ, ನ್ಯಾಯವಾದಿ ಸಿದ್ದಲಿಂಗಪ್ಪ ಶೆಟ್ಟರ ಆರೋಪಿಸಿದರು.
ಮುಖ್ಯರಸ್ತೆ ಉಳಿಸಿಕೊಡಿ: ವರ್ತಕ ಸುರೇಶ ಮೇಲಗಿರಿ ಮಾತನಾಡಿ, ಎಲ್ಲರ ಬೇಡಿಕೆಯಂತೆ ಈಗಾಗಲೇ 33 ಅಡಿಗೆ ಒಪ್ಪಿಕೊಂಡಿದ್ದಾಗಿದೆ. 18 ಅಡಿಗಳಷ್ಟು ಸೆಟ್ ಬ್ಯಾಕ್ ವಿಚಾರ ನಮಗೀಗ ನುಂಗಲಾರದ ಬಿಸಿತುಪ್ಪವಾಗಿದೆ. ಈ ಕಾನೂನು ಇಲ್ಲಿ ಜಾರಿಯಾದರೇ ಮುಖ್ಯರಸ್ತೆಯಲ್ಲಿ ಯಾವುದೇ ಅಂಗಡಿಗಳು ಉಳಿಯಲು ಸಾಧ್ಯವಿಲ್ಲ. ನಮ್ಮೆಲ್ಲರ ವ್ಯಾಪಾರವನ್ನೇ ನುಂಗಿ ರಾಜ್ಯ ಹೆದ್ದಾರಿಯನ್ನಷ್ಟೇ ಮಾಡುವ ಹುನ್ನಾರ ಇದರಲ್ಲಡಗಿದೆ ಎಂದು ಆರೊಪಿಸಿದರು.
ಎಲ್ಲಿಯೂ ಇಲ್ಲದ್ದು ಇಲ್ಲೇಕೆ: ನ್ಯಾಯವಾದಿ ಪ್ರದೀಪ್ ಸದ್ದಲಗಿ ಮಾತನಾಡಿ, ರಾಜ್ಯ ಹೆದ್ದಾರಿ ನಿಯಮದಲ್ಲಿ 18 ಅಡಿಗಳಷ್ಟು ಸೆಟ್ ಬ್ಯಾಕ್ ಇರಬಹುದು. ಅದರೆ ಜಿಲ್ಲೆ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿಯೂ ಇದನ್ನು ಪಾಲನೆ ಮಾಡಲಾಗುತ್ತಿಲ್ಲ. ಪಟ್ಟಣದಲ್ಲಿರುವ ಸರ್ಕಾರಿ ಕಟ್ಟಡಗಳೇ ಈ ನಿಯಮ ಪಾಲನೆ ಮಾಡದೇ ನಿರ್ಮಾಣಗೊಂಡಿವೆ. ಮುಖ್ಯರಸ್ತೆ ಅಗಲೀಕರಣದ ಸಮಸ್ಯೆಗಳಿಗೆ ಬಹುತೇಕ ಮುಕ್ತಿ ಸಿಕ್ಕಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಮತ್ತೊಮ್ಮ ಸ್ಥಳ ಪರಿಶೀಲನೆ ನಡೆಸಿ, ಹೊಸ ವಿವಾದಕ್ಕೆ ನಾಂದಿ ಹಾಡದಂತೆ ಮನವಿ ಮಾಡಿದರು.ವರ್ತಕ ಸಂತೋಷ್ ಹೊಸಂಗಡಿ ಮಾತನಾಡಿ, ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು ರಸ್ತೆ ಮಧ್ಯೆದಿಂದ 33 ಅಡಿಗಳಿಗಿಂತ ಹೆಚ್ಚು ಜಾಗ ಅವಶ್ಯವಿಲ್ಲ ಎಂದು ಮಾತನ್ನು ಕೊಟ್ಟಿದ್ದಾರೆ. ಆ ಮಾತುಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಜಿಲ್ಲಾಧಿಕಾರಿಗಳ ಸ್ಥಾನದ ಘನತೆಯನ್ನು ಕಾಪಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಅಂಕಲಕೋಟಿ, ಗಣೇಶ ವೆರ್ಣೇಕರ, ವಿಶ್ವನಾಥ ಅಂಕಲಕೋಟಿ, ಜಯಣ್ಣ(ಪ್ಯಾಟಿ), ರಾಕೇಶ ಜೈನ್, ಸಂಜಯ ಜೈನ್, ಎಂ.ಎಂ. ಹೊಸ್ಮನಿ, ಮಾರುತಿ ಜಾಧವ, ಗಂಗಾಧರ ತಿಳವಳ್ಳಿ, ನಂದೀಶ ವೀರನಗೌಡ್ರ, ಮಾಲತೇಶ ಉಮಾಪತಿ, ಪ್ರಕಾಶ ಅಂಕಲಕೋಟಿ, ವಿ.ಎಲ್. ಪಾಟೀಲ, ಎಂ.ಸಿ. ಗಡಾದ ಇತರರಿದ್ದರು.