ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕರಿಗೆ ಉಪಯೋಗವಲ್ಲದಂತಹ ಯೋಜನೆಗಳನ್ನು ಜಾರಿ ಮಾಡಿ ಕಾರ್ಮಿಕರಿಗಾಗಿ ಮಂಡಳಿಯಲ್ಲಿ ಇದ್ದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಆರೋಪಿಸಿದ್ದಾರೆ.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇದ್ದ ಹಣವನ್ನು ನೋಡಿ ಏನಾದರೂ ಮಾಡಿ ಲಪಟಾಯಿಸಬೇಕೆಂದು ಕಾರ್ಮಿಕರಿಗೆ ಬೇಕಿಲ್ಲದ ವಿನಹ ಕಾರಣ ಯೋಜನೆಗಳನ್ನು ಜಾರಿ ಮಾಡಿ ಹಣವನ್ನು ಲಪಟಾಯಿಸುತ್ತಿದೆ. ಸರ್ಕಾರಕ್ಕೆ ನಾವು ಆರೋಗ್ಯ ತಪಾಸಣೆ ಮಾಡಿ ಎಂದು ಕೇಳಿರಲಿಲ್ಲ. ಆದರೂ ಸಹ ಸರ್ಕಾರ ಅದರಲ್ಲೂ ಸಚಿವರಾದ ಸಂತೋಷ ಲಾಡ್ ರವರು ತಮಗೆ ಬೇಕಾದವರಿಗೆ ಉಪಯೋಗ ಮಾಡಿಕೊಡುವ ಹಿನ್ನೆಲೆಯಲ್ಲಿ ಕಾರ್ಮಿಕರ ಹೆಸರಿನಲ್ಲಿ ಅವಶ್ಯಕತೆ ಇಲ್ಲದ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅದರ ಅನುಷ್ಠಾನವೂ ಸಹ ಸರಿಯಾಗಿ ಮಾಡದೇ ಹಣವನ್ನು ಲಪಟಾಯಿಸಿದ್ದಾರೆ ಎಂದು ದೂರಿದರು.
ಕಾರ್ಮಿಕರಿಗೆ ಮಂಡಳಿ ವತಿಯಿಂದ ನೀಡಿದಂತಹ ಕಿಟ್‍ಗಳಲ್ಲಿ ಯಾವುದೇ ಉಪಯೋಗಕ್ಕೆ ಬಾರದ ವಸ್ತುಗಳನ್ನು ಹಾಕಿ ದುಪ್ಪಟ್ಟು ಬೆಲೆಯಲ್ಲಿ ಟೆಂಡರ್ ಮೂಲಕ ಖರೀದಿಸಿ ನಮಗೆ ನೀಡಿದ್ದಾರೆ. ಈ ಕಿಟ್ ಖರೀದಿಯಲ್ಲಿಯೂ ಸಹ ಅವ್ಯವಹಾರ ನಡೆದಿದ್ದು 600 ರು. ಬೆಲೆಬಾಳುವ ಕಿಟ್‍ಗಳನ್ನು 2500 ರು. ಗಳಿಗೆ ಖರೀದಿಸಿದ್ದಾರೆ. ಇದಲ್ಲದೇ ಒಬ್ಬ ಕಾರ್ಮಿಕನಿಗೆ ತರಬೇತಿ ನೀಡುವ ನೆಪದಲ್ಲಿ ಲಕ್ಷಾಂತರ ರು.ಗಳನ್ನು ಮಂಡಳಿ ವತಿಯಿಂದ ಬೇರೆಯವರಿಗೆ ನೀಡಲಾಗಿದೆ. ಈ ತರಬೇತಿಯಿಂದ ಕಾರ್ಮಿಕರಿಗೆ ಯಾವುದೇ ರೀತಿಯ ಲಾಭವಾಗಿಲ್ಲ ಎಂದು ತಿಳಿಸಿದರು.ಕಾರ್ಮಿಕ ಇಲಾಖೆಯಲ್ಲಿ ಟೆಂಡರ್ ಪಡೆದವರು ಅವರ ಕೆಲಸವನ್ನು ಮುಗಿಸಿ ಒಂದು ವಾರದಲ್ಲಿಯೇ ಇಲಾಖೆಯಿಂದ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಒಬ್ಬ ಕಾರ್ಮಿಕ ವಿಧವಾ ಭತ್ಯೆ, ಆರೋಗ್ಯ ಭತ್ಯೆ, ಪಿಂಚಣಿ, ವೈದ್ಯಕೀಯ ವೆಚ್ಚ, ಮದುವೆ ವೆಚ್ಚ ಹಾಗೂ ಶವ ಸಂಸ್ಕಾರದ ಹಣವನ್ನು ಪಡೆಯಲು ವರ್ಷಾನುಗಟ್ಟಲೆ ಕಾಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 2 ವರ್ಷದಿಂದ ಕಾರ್ಮಿಕ ಇಲಾಖೆಯ ಸಚಿವರಾಗಿರುವ ಸಂತೋಷ್ ಲಾಡ್ ರವರು ಮಂಡಳಿಯ ಕೋಟ್ಯಂತರ ರು. ತಿಂದು ಹಾಕಿದ್ದಾರೆ ಎಂದು ಕುಮಾರ್ ಆರೋಪಿಸಿದರು.
ಮುಂದಿನ ಮೂರು ವರ್ಷದೊಳಗೆ ಮಂಡಳಿಯೊಳಗೆ ಇರುವಂತಹ ಎಲ್ಲಾ ಹಣವನ್ನು ಲೂಟಿ ಮಾಡಿ ಕಾರ್ಮಿಕರನ್ನು ಬೀದಿಗೆ ತಳ್ಳಲಿದ್ದಾರೆ. ಇವರು ಟೆಂಡರ್ ಮತ್ತು ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು. ಜು.12ರಂದು ಚಿತ್ರದುರ್ಗಕ್ಕೆ ಆಗಮಿಸಲಿರುವ ಸಚಿವ ಸಂತೋಷ ಲಾಡ್ ವಿರುದ್ಧ ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನ ಖಂಡಿಸಿ ಕಪ್ಪು ಬಟ್ಟೆ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಮೇಶ್, ನರಸಿಂಹ ಮಹಮದ್ ಮನ್ಸೂರ್ ಬಸವರಾಜು, ಚಂದ್ರಪ್ಪ ಭಾಗವಹಸಿದ್ದರು.