ವಕೀಲರ ಸಂಘದ ವತಿಯಿಂದ ಕಾವೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಂಘದ ಅಧ್ಯಕ್ಷ ಎಂ.ಪಿ ಮೋಹನ್ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ವಕೀಲರ ಸಂಘದ ವತಿಯಿಂದ ಕಾವೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಂಘದ ಅಧ್ಯಕ್ಷ ಎಂ.ಪಿ ಮೋಹನ್ ಕುಮಾರ್ ತಿಳಿಸಿದರು.ಪಟ್ಟಣದ ಕೋರ್ಟ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ನಂತರ ಮಾತನಾಡಿದ ಅವರು, ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದ್ದು, ಅದ್ದರಿಂದ ಹೇಮಾವತಿ ನೀರನ್ನು ಹೆಚ್ಚಿನ ದಿನಗಳ ಕಾಲ ಕೆರೆಗಳಿಗೆ ಹರಿಸಬೇಕು. ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಬರಗಾಲ ಬಂದಂತಾಗಿದೆ ಹಾಗಾಗಿ ತಮಿಳುನಾಡಿಗೆ ಹರಿಯುತ್ತಿರುವ ಹೇಮಾವತಿ ನೀರನ್ನು ನಿಲ್ಲಿಸಬೇಕು. ತಾಲೂಕಿನ ಜನತೆ ಹೇಮಾವತಿ ನೀರಿಗಾಗಿ ಅವಲಂಬಿತರಾಗಿರುವುದರಿಂದ ಕೂಡಲೇ ಹೇಮಾವತಿ ನೀರನ್ನು ಕೆರೆಗಳಿಗೆ ಹರಿಸಬೇಕು. ರೈತರು ನೀರಿಗಾಗಿ ಬೋರ್ವೆಲ್ ಹಾಕಿದರೂ ನೀರು ಬರುತ್ತಿಲ್ಲ. ಹಾಗಾಗಿ ರೈತಪರ ಸಂಘಟನೆಗಳು ಮತ್ತು ಹೇಮಾವತಿ ನೀರಿಗಾಗಿ ಹೋರಾಟ ಮಾಡುತ್ತಿರುವ ಎಲ್ಲಾ ಸಂಘಟನೆಗಳ ಜೊತೆಗೆ ನಮ್ಮ ವಕೀಲರ ಸಂಘ ಕರ್ನಾಟಕ ಬಂದ್ ಮಾಡುವುದಕ್ಕೆ ಬೆಂಬಲವಿರುತ್ತದೆ ಎಂದರು. ವಕೀಲರ ಸಂಘದ ಉಪಾಧ್ಯಕ್ಷ ರವೀಂದ್ರ ಮಾತನಾಡಿ, ತಾಲೂಕಿಗೆ ಹರಿಯುವ ಹೇಮಾವತಿ ನೀರನ್ನು ಕೂಡಲೇ ಹರಿಸಬೇಕು. ಈಗಾಗಲೇ ಬೋರ್ವೆಲ್ ಗಳಲ್ಲಿ ನೀರಿಲ್ಲದೆ ಅಡಿಕೆ- ತೆಂಗು ಇತ್ಯಾದಿ ಬೆಳೆಗಳು ಒಣಗುವ ಸ್ಥಿತಿ ತಲುಪುತ್ತಿವೆ ಹಾಗಾಗಿ ಹೇಮಾವತಿ ನೀರನ್ನು ಕೆರೆಗಳಿಗೆ ಹರಿಸಿದರೆ ತಾಲೂಕಿನ ಬರ ತೊಲಗಿದಂತಾಗುತ್ತದೆ ಮತ್ತು ಎಲ್ಲ ಜನಪ್ರತಿನಿಧಿಗಳು ಕೈಜೋಡಿಸಿ ತುಮಕೂರು ಜಿಲ್ಲೆಗೆ ಹೇಮಾವತಿ ನೀರನ್ನು ಶೀಘ್ರವಾಗಿ ಹರಿಸಬೇಕು ಎಂದರು.ಪ್ರಧಾನ ಕಾರ್ಯದರ್ಶಿ ಎಂ. ಪಿ ರವೀಶ್ ಮಾತನಾಡಿ, ಹೇಮಾವತಿ ನೀರು ಮತ್ತು ಕಾವೇರಿ ನೀರಿನ ಹೋರಾಟಕ್ಕೆ ವಕೀಲರ ಸಂಘದಿಂದ ಬೆಂಬಲ ನೀಡುತ್ತೇವೆ ಎಂದರು. ನೀರಿಗಾಗಿ ಹೋರಾಟ ಮಾಡುತ್ತಿರುವ ರೈತರಿಗೆ ತೊಂದರೆ ಅಥವಾ ಅವಮಾನಗಳು ಬಂದರೆ ನಮ್ಮ ಬೆಂಬಲ ಸಂಪೂರ್ಣವಾಗಿರುತ್ತದೆ. ಹೇಮಾವತಿ ಹೋರಾಟಗಾರರ ಮೇಲೆ ಎಫ್ಐಆರ್ ದಾಖಲಾದರೆ ವಕೀಲರ ಸಂಘದಿಂದ ಬೆಂಬಲ ದೊರೆಯುತ್ತದೆ. ಈಗಾಗಲೇ ಕೆರೆಗಳನ್ನು ನೀರು ಖಾಲಿಯಾಗಿದ್ದು ಕೂಡಲೇ ಹೆಚ್ಚಿನ ನೀರನ್ನು ಹರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕಿನ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ರಂಗಸ್ವಾಮಿಯ್ಯ. ಖಜಾಂಚಿ ಪುಷ್ಪಾವತಿ, ಹಾಗೂ ಸದಸ್ಯರು, ವಕೀಲರು ಇತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.