ಬ್ಯಾಡಗಿಯ ರಸ್ತೆ ಅಗಲೀಕರಣ ಹೋರಾಟಕ್ಕೆ ವಕೀಲರ ಸಾಥ್‌, 6ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

KannadaprabhaNewsNetwork |  
Published : Jun 10, 2025, 09:28 AM IST
ಮ | Kannada Prabha

ಸಾರಾಂಶ

ಕೋರ್ಟ್ ಕಲಾಪಗಳನ್ನು ಸ್ಥಗಿತಗೊಳಿಸಿ ದಿನವಿಡೀ ಧರಣಿ ನಡೆಸಿದ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಅಗಲೀಕರಣ ವಿರೋಧಿಗಳ ವಿರುದ್ಧ ಘೋಷಣೆ ಕೂಗಿದರಲ್ಲದೇ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಹೋರಾಟದ 5ನೇ ದಿನವಾದ ಸೋಮವಾರ ನ್ಯಾಯವಾದಿಗಳ ಸಂಘ, ಪಂಚಮಸಾಲಿ ಸಮಾಜದ ಮುಖಂಡರು, ಮ್ಯಾಕ್ಸಿಕ್ಯಾಬ್ ಮಾಲೀಕರು, ಚಾಲಕರ ಸಂಘದ ಪದಾಧಿಕಾರಿಗಳು ಸಂಪೂರ್ಣ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಕೋರ್ಟ್ ಕಲಾಪಗಳನ್ನು ಸ್ಥಗಿತಗೊಳಿಸಿ ದಿನವಿಡೀ ಧರಣಿ ನಡೆಸಿದ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಅಗಲೀಕರಣ ವಿರೋಧಿಗಳ ವಿರುದ್ಧ ಘೋಷಣೆ ಕೂಗಿದರಲ್ಲದೇ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಈ ವೇಳೆ ನ್ಯಾಯವಾದಿಗಳ ಸಂಘದ ತಾಲೂಕಾಧ್ಯಕ್ಷ ರಾಜು ಶಿಡೇನೂರ, ಮುಖ್ಯರಸ್ತೆ ಇದೊಂದು ಸಾರ್ವತ್ರಿಕ ಸಮಸ್ಯೆಯಾಗಿದ್ದು, ಸಾಮಾಜಿಕ ಹೊಣೆಗಾರಿಕೆ ಮೇಲೆ ನ್ಯಾಯವಾದಿಗಳ ಸಂಘವು ಕಳೆದ ಒಂದೂವರೆ ದಶಕದಿಂದ ನಡೆಯುತ್ತಿರುವ ಮುಖ್ಯರಸ್ತೆ ಅಗಲೀಕರಣ ಹೋರಾಟಕ್ಕೆ ಬೆಂಬಲವನ್ನು ನೀಡುತ್ತಿದೆ. ಆದರೆ ಅಗಲೀಕರಣ ಕೆಲ ವಿರೋಧಿಗಳ ಗುಂಪಿನಲ್ಲಿ ಇಬ್ಬರು ವಕೀಲರು ಸೇರ್ಪಡೆಗೊಂಡು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಉಳಿದಂತೆ ಎಲ್ಲ ಸದಸ್ಯರು ಅಗಲೀಕರಣದ ಪರವಾಗಿದ್ದೇವೆ. ಇನ್ನು ಮುಂದೆಯೂ ವಿರೋಧಿ ಬಣದ ಯಾವುದೇ ಕೇಸ್‌ಗಳನ್ನು ಪಡೆಯದಂತೆ ನಿರ್ಧರಿಸಲಾಗಿದ್ದು, ಹೋರಾಟಕ್ಕೆ ನೈತಿಕವಾಗಿ ಶಕ್ತಿಯನ್ನು ನೀಡಲಿದ್ದೇವೆ ಎಂದರು.

ನ್ಯಾಯವಾದಿ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ತಾಲೂಕಿನ ಶಂಕರಿಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸ್ವಯಂಪ್ರೇರಿತರಾಗಿ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿ ಮಾದರಿ ಗ್ರಾಮವನ್ನಾಗಿಸಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಮಾರುಕಟ್ಟೆ ಹೊಂದಿರುವ ಪಟ್ಟಣದಲ್ಲಿನ ಕೆಲವೇ ಕೆಲವು ಸಂಕುಚಿತ ಸ್ವಭಾವದ ಜನರಿಂದ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ ಎಂದರು.

ನಾವು ವಿರೋಧಿಗಳಲ್ಲ: ಪಂಚಮಸಾಲಿ ಸಮಾಜದ ಮುಖಂಡ ಜಯದೇವ ಶಿರೂರು ಮಾತನಾಡಿ, ನಾವು ಅಭಿವೃದ್ಧಿ ಪರವಾಗಿದ್ದೇವೆ. ಕಳೆದ ಎರಡು ದಶಕದ ಹಿಂದೆ ನಾವು ಲೋಕೋಪಯೋಗಿ ಇಲಾಖೆಯ ನಿಯಮದಂತೆ ರಸ್ತೆ ಮಧ್ಯದಿಂದ ಒಟ್ಟು 33 ಅಡಿ ಬಿಟ್ಟು ಅಂಗಡಿ ನಿರ್ಮಾಣ ಮಾಡಿಕೊಂಡಿದ್ದೇವೆ. ಮುಂದೆ ಎಷ್ಟಾದರೂ ಜಾಗ ಹೋದರೂ ಸರಿ. ನಾವು ಅಭಿವೃದ್ಧಿಗೆ ಸಹಕರಿಸುತ್ತೇವೆ. ನಮ್ಮ ಸಮಾಜದ ಜನರ ಮನವೊಲಿಸಿ ಅವರ ಮನೆ ಅಂಗಡಿಗಳನ್ನೂ ತೆರವುಗೊಳಿಸುವುದಾಗಿ ತಿಳಿಸಿದರು.ನ್ಯಾಯವಾದಿ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿದರು. ಬಸವರಾಜ ಕಡೇಕೊಪ್ಪ, ಜಿ.ಬಿ. ಯಲಗಚ್ಚ, ಎಚ್.ಜಿ. ಮುಳುಗುಂದ, ಎಂ.ಸ್. ಕುಮ್ಮೂರ, ವಿ.ಎಸ್.ಕಡಗಿ. ಪಿ.ಆರ್. ಮಠದ ವಿ.ಎಸ್. ಚೂರಿ, ಆರ್.ವಿ. ಬೆಳಕೇರಿಮಠ, ಎಫ್.ಎಂ. ಮುಳುಗುಂದ, ಎಂ.ಜೆ. ಮುಲ್ಲಾ, ಎಸ್.ಎನ್. ಬಾರ್ಕಿ, ಹಾಲೇಶ ಜಾಧವ, ವೈ.ಎಚ್. ಕುಡುಪಲಿ, ಮಂಜುನಾಥ ಹಂಜಗಿ, ಬಿ.ಜಿ. ಹಿರೇಮಠ, ಭಾರತಿ ಕುಲಕರ್ಣಿ, ಪಂಚಮಸಾಲಿ ಸಮಾಜದ ತಿರಕಪ್ಪ ಮರಬಸಣ್ಣನವರ, ವಿಜಯ ಭರತ ಬಳ್ಳಾರಿ, ಶಿವಯೋಗಿ ಗಡಾದ, ಜ್ಯೋತಿ ಕುದರಿಹಾಳ, ಲಲಿತವ್ವ ಪಟ್ಟಣಶೆಟ್ಟಿ, ಮಾಕ್ಸಿ ಚಾಲಕರ ಸಂಘದ ವೀರಭದ್ರಪ್ಪ ಯಲಿಗಾರ, ನಾಸಿರ ಅಹಮ್ಮದ ಹೇರೂರ, ಸಂದೀಪ, ಕೇಶವ, ಖಾಜಾ ಮೋಯಿದ್ದುನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಆಶಾದಾಯಕ ಬೆಳವಣಿಗೆ

ಅಗಲೀಕರಣ ಹೋರಾಟ ಸಮಿತಿಗೆ ಸೋಮವಾರ ಆಶಾದಾಯಕ ದಿನವಾಗಿ ಪರಿಣಮಿಸಿತು. ಅಗಲೀಕರಣ ವಿರೋಧಿ ಬಣದಲ್ಲಿದ್ದ ಶ್ವೇತಾಂಬರ ಜೈನ ಸಮುದಾಯದ ವ್ಯಾಪಾರಸ್ಥರು, ಆರ್ಯವೈಶ್ಯ ಸಮಾಜದ ವರ್ತಕರು, ಕುರುಬ ಸಮಾಜದ ಬೀರಲಿಂಗೇಶ್ವರ ಸಮಿತಿ ಸೇರಿದಂತೆ ಮಖ್ಯರಸ್ತೆಯ ವರ್ತಕ ಕೊಟ್ರೇಶ ಮೇಲ್ಮುರಿ ಸೇರಿದಂತೆ ಸ್ವಯಂಪ್ರೇರಿತರಾಗಿ ಯಾವುದೇ ಷರತ್ತುಗಳಿಲ್ಲದೇ ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿದರು. ಹೋರಾಟಕ್ಕೆ ಬೆಂಬಲಿಸಿದವರನ್ನು ವರ್ತಕರ ಸಂಘ ಹಾಗೂ ಅಗಲೀಕರಣ ಸಮಿತಿ ವತಿಯಿಂದ ಮಾಜಿ ಶಾಸಕ ಸುರೇಶಗೌಡ ಪಾಟೀಲ ವೇದಿಕೆಯಲ್ಲಿ ಸನ್ಮಾನಿಸಿದರು.ಮಂಗಳವಾರ ಆರನೇ ದಿನಕ್ಕೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿದಿದೆ. ಪಟ್ಟಣದ ಗಾಂಧಿ ನಗರದ ನಿವಾಸಿಗಳು ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ