ಬೇಲೂರು: ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ತಾಲೂಕು ವಕೀಲರ ಸಂಘದಿಂದ ನ್ಯಾಯಾಲಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಸಿ.ಎಂ. ಪೃಥ್ವಿ ಮಾತನಾಡಿ, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆಗೆ ನಮ್ಮ ವಿರೋಧವಿದೆ. ಅವರ ವಿರುದ್ಧ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು. ಸ್ವಾಮೀಜಿಗಳ ವಿರುದ್ಧ ನಮ್ಮ ವಕೀಲರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೋದಾಗ ಜಿಲ್ಲಾಧಿಕಾರಿಗಳ ನಡೆ ತುಂಬಾ ಬೇಸರ ತರಿಸಿದ್ದು, ಕೂಡಲೇ ಅವರೂ ಕ್ಷಮಾಪಣೆ ಕೇಳಬೇಕು ಮತ್ತು ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಅನಿರ್ಧಿಷ್ಟಾವಧಿಯವರೆಗೆ ನ್ಯಾಯಾಲಯಕ್ಕೆ ತೆರಳದೆ ಹೊರಗುಳಿದು ಪ್ರತಿಭಟನೆ ನಡೆಸುತ್ತೇವೆ. ಈಗಾಗಲೇ ನಾವು ತಾಲೂಕು ದಂಡಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ವಿರುದ್ಧ ದೂರು ಸಲ್ಲಿಸುತ್ತಿದ್ದೇವೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಹಿರಿಯ ವಕೀಲ ಸೋಮೇಗೌಡ ಮಾತನಾಡಿ. ಸಂವಿಧಾನದಡಿ ಕೆಲಸ ಮಾಡುವ ಜಿಲ್ಲಾಧಿಕಾರಿಗಳು ಸ್ವಾಮೀಜಿಯ ವಿರುದ್ಧ ಮನವಿ ಸಲ್ಲಿಸಲು ಹೋದಾಗ ಉದ್ದೇಶಪೂರ್ವಕವಾಗಿ ಮನವಿ ಸ್ವೀಕರಿಸದೇ ವಿಳಂಭ ಮಾಡುತ್ತಿದ್ದಾರೆ. ಇದು ವಕೀಲರ ಗೌರವಕ್ಕೆ ಧಕ್ಕೆಯಾಗಿದೆ, ಆದ್ದರಿಂದ ನಮ್ಮ ಮನವಿ ಸ್ವೀಕರಿಸದೆ ಎರಡು ದಿನಗಳಿಂದ ವಕೀಲರ ವಿರುದ್ಧ ಉದ್ಧಟತನ ತೋರಿರುವ ಜಿಲ್ಲಾಧಿಕಾರಿಗಳು ಕೂಡಲೇ ವಕೀಲರಲ್ಲಿ ಕ್ಷಮಾಪಣೆ ಕೋರಿ ಮನವಿ ಸ್ವೀಕರಿಸಬೇಕು, ಸರ್ಕಾರ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ನಟರಾಜ್, ಲಿಂಗೇಶ್ , ಮಹೇಶ್, ಸತೀಶ್. ಜೆಟಿ ಪ್ರಕಾಶ್. ಚಂದ್ರು ದಿಲೀಪ್. ಪಂಚಾಕ್ಷರಿ, ಗಿರೀಶ್ , ಪ್ರದೀಪ್, ಸುನೀಲ್, ಬ್ರಮರಾಂಬಿಕೆ, ಕಿರಣ್ ಸೇರಿ ಹಲವು ವಕೀಲರು ಹಾಜರಿದ್ದರು.