ಶಿವಮೊಗ್ಗ: ಜಿಲ್ಲೆಯ ಮೂವರು ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ರಾಜೇಂದ್ರ ಚೆನ್ನಿ, ಜಾನಪದ ಕ್ಷೇತ್ರದಲ್ಲಿ ಬಿ.ಟಾಕಪ್ಪ ಕಣ್ಣೂರು ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ತೀರ್ಥಹಳ್ಳಿ ಮಾಜಿ ಶಾಸಕ, ಹಿರಿಯ ರಾಜಕಾರಣಿ ಕೋಣಂದೂರು ಲಿಂಗಪ್ಪ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರೊ.ರಾಜೇಂದ್ರ ಚೆನ್ನಿ ಅವರು ಪ್ರಾಧ್ಯಾಪಕರಾಗಿ, ಚಿಂತಕರಾಗಿ ಮತ್ತು ಬರಹಗಾರರಾಗಿ ಹೆಸರಾದವರು.
ರಾಜೇಂದ್ರ ಚೆನ್ನಿ ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. ಇವರು 1955ರ ಅ. 21ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ ಪದವಿ ಹಾಗೂ ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದಿದ್ದಾರೆ.ರಾಜೇಂದ್ರ ಚೆನ್ನಿ ಅವರು ಸಂಡೂರು, ಬೆಳಗಾವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಕೋಣಂದೂರು ಲಿಂಗಪ್ಪ:
ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಘೋಷವಾಕ್ಯದಡಿ ಭೂ ಸುಧಾರಣೆ ಪರ ಹೋರಾಟ ಮಾಡಿದ್ದರು. ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ್ದ ಇವರು ಅದಕ್ಕೂ ಮುನ್ನವೇ ಕಾಗೋಡು ತಿಮ್ಮಪ್ಪ, ಎಸ್.ಬಂಗಾರಪ್ಪ ಅವರ ಜತೆಗೂಡಿ ಗೇಣಿದಾರರ ಪರ ಹೋರಾಟದಲ್ಲಿ ತೊಡಗಿದ್ದರು. 1972ರಿಂದ 78ರವರೆಗೆ ಎರಡು ಅವಧಿಯಲ್ಲಿ ಶಾಸಕರಾಗಿದ್ದ ಲಿಂಗಪ್ಪ ಅವರು ಉತ್ತಮ ಸಂಸದೀಯ ಪಟುವೂ ಆಗಿದ್ದರು. ಹಾವನೂರು ವರದಿ ಜಾರಿಗೆ ಹೋರಾಟ ಮಾಡಿದ್ದರು. ಅಲ್ಲದೆ, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಹಕ್ಕೊತ್ತಾಯವನ್ನೂ ಮಾಡಿದ್ದರು.
ಟಾಕಪ್ಪ ಕಣ್ಣೂರು
ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಾರಂಭದಲ್ಲಿ, ವೇದಿಕೆಗಳಲ್ಲಿ ಡೊಳ್ಳು ಕುಣಿತವನ್ನು ಪ್ರಸ್ತುತಪಡಿಸಿರುವ ಇವರು ರಷ್ಯಾದ ಭಾರತೋತ್ಸವ, ಇಂಗ್ಲೆಂಡಿನ ಕನ್ನಡ ಸಮ್ಮೇಳನ, ಅಮೇರಿಕಾದ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡುವ ಮೂಲಕ ನೆಲದ ಸೊಗಡಾದ ಡೊಳ್ಳು ಕುಣಿತವನ್ನು ಅಂತಾರಾಷ್ಟ್ರೀಯವಾಗಿ ಪ್ರಚುರಪಡಿಸಿದ್ದಾರೆ.
ಅಕಾಡೆಮಿಯ ಅಧ್ಯಕ್ಷರಾಗಿ ಜನಪದ ಸಾಹಿತ್ಯ, ಕಲೆ-ಸಂಸ್ಕೃತಿಯ ಸಶಕ್ತೀಕರಣಕ್ಕೆ ಕಾರ್ಯನಿರ್ವಹಿಸಿದ್ದಾರೆ. ಜನಪದ ಕಲೆಯ ತರಬೇತಿ ಶಿಬಿರಗಳು, ಜಾನಪದ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಜನಪದ ಕಲಾವಿದರ ಶ್ರೇಯಸ್ಸಿಗಾಗಿ ದುಡಿಯುತ್ತಿದ್ದಾರೆ.
ನಾನು ಓದಲು ಶುರು ಮಾಡಿದಾಗಿನಿಂದ ಮನೆಯಲ್ಲೂ ಕನ್ನಡ ಸಾಹಿತ್ಯವನ್ನೇ ಓದಲು ಹೆಚ್ಚು ಪ್ರೋತ್ಸಾಹ ಸಿಕ್ಕಿತು. ನಾನು ಕೇವಲ ಬರಹಗಾರನಾಗಿದ್ದೇನೆ ಅಷ್ಟೇ, ನಾನು ಕನ್ನಡಕ್ಕೆ ಏನೋ ಮಾಡಿದ್ದೇನೆ ಅನ್ನುವುದಕ್ಕಿಂತ ಕನ್ನಡ ನನಗೆ ಏನು ಬೇಕೋ ಅದನ್ನು ಕೊಟ್ಟಿದೆ. ನಾವು ಕನ್ನಡ ಸಮಾಜದಲ್ಲಿ ಬದುಕುತ್ತಿರುವುದಿಂದ ನಾವು ಮಾಡಿರುವುದು ಇನ್ಯಾರಿಗೋ ಮೌಲ್ಯಯುತವಾಗಿ ಕಂಡಿದೆ, ಇನ್ನೊಬ್ಬರಿಗೆ ಅದರಿಂದ ಉಪಯೋಗವಾಗಿದೆ ಎಂದಾಗ ಖುಷಿಯಾಗುತ್ತದೆ.
- ಪ್ರೊ.ರಾಜೇಂದ್ರ ಚೆನ್ನಿಪ್ರಶಸ್ತಿ ದೊರೆತಿದ್ದು ತುಂಬಾ ಸಂತಸ ತಂದಿದೆ. ಕಲಾವಿದರನ್ನು ಪ್ರೋತ್ಸಾಹಿಸುವಂತಹ ಪ್ರಶಸ್ತಿಗಳು ಕಲಾವಿದರ ಸಾಧನೆಗೆ ಸಾರ್ಥಕವಾದದ್ದು. ನನ್ನ ಈ ಪ್ರಶಸ್ತಿಗೆ ಮಾಧ್ಯಮ ಸ್ನೇಹಿತರು, ಹಿತೈಷಿಗಳು ಹಾರೈಕೆಯಿಂದ ದೊರೆತಿದೆ.
- ಟಾಕಪ್ಪ ಕಣ್ಣೂರ್
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ನನ್ನ ಹೆಸರು ಆಯ್ಕೆಯಾಗಿರುವ ವಿಚಾರ ದೂರದರ್ಶನದ ಮೂಲಕ ತಿಳಿಯಿತು. ಪ್ರಶಸ್ತಿಗೆ 70 ಜನರೊಂದಿಗೆ ನನ್ನನ್ನೂ ಆಯ್ಕೆ ಮಾಡಿರುವುದು ಸಂತಸವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೃತಜ್ಞತೆಗಳು.
- ಕೋಣಂದೂರು ಲಿಂಗಪ್ಪ