ನಿತ್ಯ 7 ಗಂಟೆ ವಿದ್ಯುತ್‌ಗೆ ಆಗ್ರಹಿಸಿ ಹೆಸ್ಕಾಂ ಗ್ರಿಡ್‌ಗೆ ಮುತ್ತಿಗೆ

KannadaprabhaNewsNetwork | Published : Oct 10, 2023 1:01 AM

ಸಾರಾಂಶ

ಸತತ ಏಳೆಂಟು ದಿನಗಳಿಂದ ರೈತರಿಗೆ ವಿದ್ಯುತ್ ವ್ಯತ್ಯಯ ಆಗುತ್ತಿರುವುದನ್ನು ಖಂಡಿಸಿ ನರೇಗಲ್ಲ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಇಂದು ಹೆಸ್ಕಾಂ ಗ್ರಿಡ್‌ಗೆ ಮುತ್ತಿಗೆ ಹಾಕಿದರು.

ನರೇಗಲ್ಲ: ಸತತ ಏಳೆಂಟು ದಿನಗಳಿಂದ ರೈತರಿಗೆ ವಿದ್ಯುತ್ ವ್ಯತ್ಯಯ ಆಗುತ್ತಿರುವುದನ್ನು ಖಂಡಿಸಿ ನರೇಗಲ್ಲ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಇಂದು ಹೆಸ್ಕಾಂ ಗ್ರಿಡ್‌ಗೆ ಮುತ್ತಿಗೆ ಹಾಕಿದರು.

ಈ ವೇಳೆ ಕೋಚಲಾಪೂರ ರೈತ ವಿ.ಕೆ. ರಡ್ಡೇರ ಮಾತನಾಡಿ, ನಮಗೆ ಸತತ ಒಂದು ವಾರದಿಂದ ಸರಿಯಾಗಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಮೊದಲೇ ಮಳೆ ಇಲ್ಲದೇ ರೈತ ಕಂಗಾಲಾಗಿದ್ದಾನೆ, ಇಂಥ ಸಮಯದಲ್ಲಿ ಸರಿಯಾಗಿ ವಿದ್ಯುತ್ ಕೂಡಾ ಪೂರೈಕೆಯಾಗದಿದ್ದರೆ ರೈತ ಸಾಲದ ಶೂಲಕ್ಕೆ ತುತ್ತಾಗುವುದರೊಂದಿಗೆ ಆತ್ಮಹತ್ಯೆಯೊಂದೇ ಮುಂದಿನ ದಾರಿಯಾಗಲಿದೆ. ಸರಿಯಾಗಿ ಪ್ರತಿದಿನ ೭ ಗಂಟೆ ವಿದ್ಯುತ್ ನೀಡಬೇಕು, ಈ ಹಿಂದೆ ಪ್ರತಿಭಟನೆ ಮಾಡಿದಾಗಲೂ ತಾಲೂಕು ಅಧಿಕಾರಿಗಳು ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದ್ದು, ಈಗಲೂ ಅದೇ ಹೇಳಿಕೆ ನೀಡುತ್ತಿದ್ದಾರೆ. ನಿಮ್ಮ ಮೇಲಾಧಿಕಾರಿ ಬಂದು ಪರಿಹಾರ ನೀಡುವವರೆಗೂ ನಾವು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.

ಈ ವೇಳೆ ಅಬ್ಬಿಗೇರಿ ರೈತ ಸಂಗಪ್ಪ ಕುಂಬಾರ ಮಾತನಾಡಿ, ರೈತರ ತಾಳ್ಮೆಯೊಂದಿಗೆ ಆಟವಾಡಬೇಡಿ, ಸಮಯಾನುಸಾರ ನಿತ್ಯ ಏಳುಘಂಟೆ ವಿದ್ಯುತ್ ನೀಡುವವರೆಗೂ ನಾವು ಪ್ರತಿಭಟನೆಯನ್ನು ಹಿಂಪಡೆಯುವದಿಲ್ಲ, ನಮಗೆ ಮನೆಯ ವಿದ್ಯುತ್ ನಿಲ್ಲಿಸಿದರೂ ಪರವಾಗಿಲ್ಲ ಆದರೆ ಹೊಲಗಳಿಗೆ ಮಾತ್ರ ಸರಿಯಾಗಿ ಏಳುಘಂಟೆ ವಿದ್ಯುತ್‌ ನೀಡಿ ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ನೀವೇ ಹೊಣೆಗಾರರಾಗುತ್ತೀರಾ ಎಂದು ಎಚ್ಚರಿಸಿದರು.

ಈ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ಸಮಾಧಾನಪಡಿಸಿ ವ್ಯವಸ್ಥೆಯನ್ನು ತಿಳಿಗೊಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಹಿಂದೆ ಸರಿಯದ ಹೋರಾಟಗಾರರು ಹುಬ್ಬಳ್ಳಿಯ ಹೆಸ್ಕಾಂ ಸೂಪರಿಂಡೆಂಟ್‌ ಎಂಜಿನಿಯರ್‌ ಬರುವವರೆಗೂ ಹೋರಾಟವನ್ನು ಮುಂದುವರೆಸಿದರು.

ಈ ವೇಳೆ ಎಸ್‌ಇ ಶರಣಮ್ಮ ಜಂಗಿನಮನಿ ಮಾತನಾಡಿ, ನೀವೆಲ್ಲ ನಿಮಗಾಗುವ ಸಮಸ್ಯೆಯನ್ನು ಹೇಳಿಕೊಂಡಿದ್ದೀರಾ ನಾನೂ ಕೂಡಾ ಈ ಕುರಿತು ಮೇಲಾಧಿಕಾರಿಗಳ ಜೊತೆ ತಮ್ಮ ಸಮಸ್ಯೆಯನ್ನು ಚರ್ಚಿಸಿದ್ದೇನೆ, ನಾಳೆ ಜಿಲ್ಲಾ ಉಸ್ತುವಾರಿ ಸಚಿವರು, ರೋಣ ಶಾಸಕರ ನೇತೃತ್ವದಲ್ಲಿ ಸಭೆ ಜರುಗಲಿದ್ದು, ಅದರಲ್ಲಿ ಇಲಾಖೆಯ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಿದ್ದಾರೆ. ತಾವುಗಳು ಇಂದು ತಮ್ಮ ಹೋರಾಟವನ್ನು ಹಿಂಪಡೆದುಕೊಳ್ಳಿ ಎಂದು ತಿಳಿಸಿ ಲಿಖಿತ ಮಾಹಿತಿ ನೀಡುವ ಮೂಲಕ ಅವರ ಹೋರಾಟವನ್ನು ತಿಳಿಗೊಳಿಸಿದರು.

ನಾಳೆ ನಡೆಯುವ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಿ ಈಗ ನಿಮ್ಮ ಮಾತಿಗೆ ಸಮ್ಮತಿಸಿ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆ, ನಾಳೆ ನಮಗೆ ಸೂಕ್ತ ಪರಿಹಾರ ದೊರಕದಿದ್ದಲ್ಲಿ ಮತ್ತೆ ಹೋರಾಟಕ್ಕೆ ಮುಂದಾಗುತ್ತೇವೆಂದು ತಿಳಿಸಿ ಪ್ರತಿಭಟನೆಯನ್ನು ರೈತರು ಹಿಂಪಡೆದರು. ಬೆಳಗ್ಗೆ ೧೦ಕ್ಕೆ ಪ್ರಾರಂಭವಾದ ಪ್ರತಿಭಟನೆ ರಾತ್ರಿ ಏಳಕ್ಕೆ ಸುಖಾಂತ್ಯ ಕಂಡಿತು.

ಈ ವೇಳೆ ರೋಣ ಇಇ ರವಿಕಿರಣ, ಎಇಇ ಚೇತನಕುಮಾರ ಹಾದಿಮನಿ, ಎಸ್‌ಒ ಮಹಾಂತೇಶ ಮೊರಬದ, ರೈತರಾದ ಮಂಜುನಾಥ ನಾಯ್ಕರ, ರವಿ ಯತ್ನಟ್ಟಿ, ಪ್ರಕಾಶ ನಾಯ್ಕರ, ಕರಬಸಯ್ಯ ಶಿಪೂಜಿ, ವೀರಭದ್ರಪ್ಪ ಬಂಡಿಹಾಳ, ಬಸವರಾಜ ತಳವಾರ, ಶರಣಪ್ಪ ಯಲ್ಲರಡ್ಡಿ, ಸುನೀಲ ಬಸವರಡ್ಡೇರ, ಪ್ರವೀಣ ಹೆಗ್ಗಡದಿನ್ನಿ, ಸಚಿನ ಪಾಟೀಲ, ಗಣೇಶ ಬಂಡಿವಡ್ಡರ, ರವಿ ಜಂತ್ಲಿ, ಶರಣಪ್ಪ ಅವರಡ್ಡಿ, ಮಣಿಕಂಠ ಅರಳಿಕಟ್ಟಿ, ಹೇಮಣ್ಣ ನಡವಲಗುಡ್ಡ, ಪ್ರವೀಣ ಹಿರೇಮಠ, ಬಸವರಾಜ ಮಾಳಗಿ, ಪೀರಸಾಬ ನದಾಫ, ಪ್ರಕಾಶ ನಿಡಗುಂದಿ, ಸೋಮನಗೌಡ ಪಾಟೀಲ, ಚಂದ್ರು ಮಾರನಬಸರಿ, ಶೇಖಪ್ಪ ಲಕ್ಕನಗೌಡ್ರ, ಚನ್ನಬಸಪ್ಪ ಕುಷ್ಟಗಿ, ಶರಣಪ್ಪ ಧರ್ಮಾಯತ, ಶಶಿಧರ ಓದಸೂಮಠ, ರುದ್ರೇಶ ಕೊಟಗಿ, ಶರಣಪ್ಪ ಹಕ್ಕಿ, ಸುನೀಲ ಕಳಕೊಣ್ಣವರ, ಶೆಖಪ್ಪ ಕಮ್ಮಾರ, ವೀರೇಶ ಕಂಬಳಿ, ಬಸಪ್ಪ ಹಾಲವಾರ, ಮಾರುತೆಪ್ಪ ಬಂಡಿವಡ್ಡರ, ಮಹಾಂತೇಶ ಜಂತ್ಲಿ ಇದ್ದರು.

Share this article